ADVERTISEMENT

ಗದಗ | ದೇಹದಾನವೂ ಸಮಾಜ ಸೇವೆ: ತೋಂಟದ ಶ್ರೀ

2,754ನೇ ಶಿವಾನುಭವ ಕಾರ್ಯಕ್ರಮದಲ್ಲಿ ದೇಹದಾನದ ಮಹತ್ವ ಕುರಿತು ಮಾಹಿತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:26 IST
Last Updated 19 ಜುಲೈ 2025, 4:26 IST
ಗದಗ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಡಿಜಿಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಬಿ.ಗೋವಿಂದಪ್ಪ ಮಾತನಾಡಿದರು.
ಗದಗ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಡಿಜಿಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಬಿ.ಗೋವಿಂದಪ್ಪ ಮಾತನಾಡಿದರು.   

ಗದಗ: ‘ಮಾನವನ ಎಲ್ಲಾ ಅಂಗಾಂಗಗಳು ಸತ್ತ ನಂತರವೂ ಉಪಯೋಗಕ್ಕೆ ಬರುತ್ತವೆ. ಬದುಕಿದ್ದಾಗಲೇ ಮನಸ್ಸು ಮಾಡಬೇಕು. ದೇಹದಾನ ಮಾಡಿದ ಕೌತಾಳ ವೀರಪ್ಪನವರ ಬದುಕು ಸಾರ್ಥಕವಾದುದು’ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದಲ್ಲಿ ಈಚೆಗೆ ನಡೆದ 2,754ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ದೇಹದಾನ ಇದೊಂದು ಸಮಾಜ ಸೇವೆ. ದೇಹದಾನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾ ಶಾಸ್ತ್ರದ ಅಧ್ಯಯನಕ್ಕಾಗಿ ಅನುಕೂಲವಾಗುತ್ತದೆ. ವಿಜ್ಞಾನದ ಪ್ರಗತಿಗೆ, ವೈದ್ಯಕೀಯ ಸಂಶೋಧನೆಗೆ ದೇಹದಾನ ಮುಖ್ಯವಾಗಿದೆ’ ಎಂದರು.

ADVERTISEMENT

ಗದಗ ಡಿಜಿಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಬಿ.ಗೋವಿಂದಪ್ಪ ಅವರು ‘ಮರಣಾನಂತರ ದೇಹದಾನ ಹಾಗೂ ಅಂಗಾಂಗ ದಾನ’ ವಿಷಯ ಕುರಿತು ಮಾತನಾಡಿ, ‘ಮರಣಾನಂತರ ವ್ಯಕ್ತಿಯ ಶರೀರ ಉಪಯೋಗವಾದರೆ ಅವನೇ ಉತ್ತಮ ಮಾನವ. ಎಲ್ಲಾ ದಾನಗಳಿಗಿಂತ ದೇಹದಾನ ಮುಖ್ಯ. ದೇಹದಾನದಿಂದ ಕಣ್ಣು, ಮೆದುಳು ಹೀಗೆ ಮಾನವನ 26 ಅಂಗಾಂಗ ಉಪಯೋಗಕ್ಕೆ ಬರುತ್ತವೆ’ ಎಂದು ತಿಳಿಸಿದರು.

ಡಾ ಜಿ.ಬಿ.ಪಾಟೀಲ, 2017ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ.ಐಲಿ ಮಾತನಾಡಿದರು.

ಗುರುನಾಥ್ ಸುತಾರ ಹಾಗೂ ಸವಿತಾ ಕುಪ್ಪಸದ  ಸಂಗೀತ ಸೇವೆ ನೆರವೇರಿಸಿದರು. ಹರ್ಷಿತಾ ಬಿ. ಬಳಿಗೇರ ಧಾರ್ಮಿಕ ಗ್ರಂಥ ಪಠಣ ಮಾಡಿದರು. ರಕ್ಷಿತಾ ಬಿ. ಬಳಿಗೇರ ವಚನ ಚಿಂತನ ನಡೆಸಿಕೊಟ್ಟರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ ಹಾಗೂ ವಿದ್ಯಾಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.