ADVERTISEMENT

ನರೇಗಲ್:‌ ಪೌರ ನೌಕರರ ಅನಿರ್ದಿಷ್ಟಾವಧಿ ಹೋರಾಟ 5ರಿಂದ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಲ್ಲಾ ಕಾರ್ಯ ಸ್ಥಗಿತಗೊಳಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 6:23 IST
Last Updated 5 ಡಿಸೆಂಬರ್ 2025, 6:23 IST
ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ನರೇಗಲ್‌ ಪಟ್ಟಣ ಪಂಚಾಯಿತಿ ಘಟಕದಿಂದ ಗದಗ ಜಿಲ್ಲಾಧಿಕಾರಿ ಸಿ. ಎನ್‌. ಶ್ರೀಧರ ಅವರಿಗೆ ಮನವಿ ಸಲ್ಲಿಸಲಾಯಿತು
ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ನರೇಗಲ್‌ ಪಟ್ಟಣ ಪಂಚಾಯಿತಿ ಘಟಕದಿಂದ ಗದಗ ಜಿಲ್ಲಾಧಿಕಾರಿ ಸಿ. ಎನ್‌. ಶ್ರೀಧರ ಅವರಿಗೆ ಮನವಿ ಸಲ್ಲಿಸಲಾಯಿತು   

ನರೇಗಲ್:‌ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಅನಿರ್ದಿಷ್ಟಾವಧಿ ಹೋರಾಟ ಕೈಗೊಳ್ಳುವುದಾಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಗದಗ ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.

ಪೌರ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ವೈ. ಹಲಗಿಯವರ ಮಾತನಾಡಿ, ‘ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಬೇಡಿಕೆ ಈಡೇರಿಸುವ ಸಲುವಾಗಿ ನ. 9 ರಂದು ಕೊಪ್ಪಳದಲ್ಲಿ ರಾಜ್ಯಮಟ್ಟದ ಸಭೆಯನ್ನು ನಡೆಸಲಾಗಿದೆ. ಅಲ್ಲಿ ಕೈಗೊಂಡ ತಿರ್ಮಾನದಂತೆ ಬೇಡಿಕೆ ಈಡೇರಿಸದೇ ಇದ್ದಲ್ಲಿ ಗದಗ ಜಿಲ್ಲೆಯ ಪೌರಾಡಳಿತ ನೌಕರರು, ಕಚೇರಿ ಕೆಲಸ ಮಾಡುವವರು, ನೀರು ಸರಬರಾಜು ಮಾಡುವವರು ಒಳಗೊಂಡಂತೆ ಎಲ್ಲಾ ನೌಕರರು ಡಿ. 5 ರಿಂದ ಎಲ್ಲ ರೀತಿಯ ಕಾರ್ಯಗಳನ್ನು ಸ್ಥಗಿತಗೊಳಿಸಿ ಆಯಾ ಸ್ಥಳೀಯ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಸ್ಥಳೀಯ ಸಂಸ್ಥೆಯ ಎಲ್ಲ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನು ಒದಗಿಸಬೇಕು. ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿರುವವರನ್ನು ನೇರಪಾವತಿಗೆ ಒಳಪಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ಸಕ್ರಮ ಮಾಡಬೇಕು. ಕಾಯಂ ಪೌರ ನೌಕರರಿಗೆ ನೀಡಿರುವ ಗೃಹ ಭಾಗ್ಯ ಜೋಜನೆ ಸೌಲಭ್ಯವನ್ನು ಇತರರಿಗೆ ನೀಡಬೇಕು. ಪೌರ ನೌಕರರಿಗೆ ಪ್ರಸ್ತುತ ನೀಡುತ್ತಿರುವ ₹7.50 ಲಕ್ಷ ಬದಲು ₹15 ಲಕ್ಷ ಯೋಜನೆ ಸೌಲಭ್ಯ ನೀಡಬೇಕು. ಇನ್ನೂ ಅನೇಕ ಬೇಡಿಕೆಗಳಿಗಾಗಿ ಕೆಲಸ ರಹಿತ ಹೋರಾಟ ಆರಂಭಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

ಗದಗ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆಂಚಪ್ಪ ಎಫ್.‌ ಪೂಜಾರ, ಗದಗ-ಬೆಟಗೇರಿ ನಗರಸಭೆ ಶಾಖಾಧ್ಯಕ್ಷ ಚಂದ್ರು ಹಾದಿಮನಿ, ಹೆಮೇಶ ಹೆಟ್ಟಿ, ನಾಗೇಶ ಬಳ್ಳಾರಿ, ಅರವಿಂದ ಕುರ್ತಕೋಟಿ, ರಮೇಶ ಬಾರಕೇರ, ರವಿ ಕುಂಬಾರ, ಪರಶುರಾಮ ಸಣ್ಣತಮ್ಮಣ್ಣವರ, ಮುದಕಪ್ಪ ಬಚೆನಳ್ಳಿ, ಮಹಾಂತಪ್ಪ ದಿವಟರ, ದಾವಲಪ್ಪ ನದಾಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.