ಗದಗ: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿಯು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಸಂಘದ ಗೌರವಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ‘ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸರ್ಕಾರ ದೇವದಾಸಿ ನಿಷೇಧ ಮಸೂದೆ- 2025 ಅಂಗೀಕರಿಸಿರುವುದು ಮತ್ತು ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆಮಾರುಗಳ ಕುಟುಂಬದ ಸದಸ್ಯರ ಗಣತಿಗೆ ಕ್ರಮ ವಹಿಸಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿ ಸ್ವಾಗತಿಸುತ್ತದೆ’ ಎಂದರು.
ಅದೇರೀತಿ, ಈಗ ನಡೆದಿರುವ ಗಣತಿಯಲ್ಲಿ ಈಗಾಗಲೇ ಗಣತಿಪಟ್ಟಿಯಲ್ಲಿರುವ ದೇವದಾಸಿ ಮಹಿಳೆಯರು ಹಾಗೂ ಕುಟುಂಬದ ಸದಸ್ಯರನ್ನು ವಿಶೇಷವಾಗಿ ಮರು ಸಮೀಕ್ಷೆಗೆ ಕ್ರಮ ವಹಿಸಲಾಗಿದೆ. ಆದರೆ, ಇದುವರೆಗೆ ಗಣತಿಯಲ್ಲಿ ಸೇರಿಸಲಾಗದಿರುವ ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬದ ಸಾವಿರಾರು ಸದಸ್ಯರು ಈಗ ಸಿಗುವ ಯಾವುದೇ ಕನಿಷ್ಠ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ’ ಎಂದು ತಿಳಿಸಿದರು.
‘ಗಣತಿ ಪಟ್ಟಿಯಲ್ಲಿ ಇಲ್ಲ ಎಂಬ ಕಾರಣಕ್ಕೆ ಅವರಿಗೆ, ಅವರ ಮಕ್ಕಳಿಗೆ ದೇವದಾಸಿ ಕುಟುಂಬದ ಪ್ರಮಾಣಪತ್ರ ಕೂಡ ಸಿಕ್ಕಿರುವುದಿಲ್ಲ. ಇದರಿಂದ ಸಾವಿರಾರು ಮಕ್ಕಳು ಅವರ ವಿದ್ಯಾಭ್ಯಾಸ ಹಾಗೂ ಉದ್ಯೋಗ ಸೌಲಭ್ಯದಿಂದ ವಂಚಿತರಾಗಿದ್ದಾರೆ. ತಾಯಂದಿರು ದೌರ್ಜನ್ಯದಿಂದ ನಲುಗಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
ಆದ್ದರಿಂದ ಗಣತಿ ಪಟ್ಡಿಯಾಚೆ ಇರುವ ಎಲ್ಲ ದೇವದಾಸಿ ಮಹಿಳೆಯರನ್ನು ಅವರ ಮೂರು ತಲೆಮಾರು ಕುಟುಂಬದ ಸದಸ್ಯರನ್ನುಶೀಘ್ರವಾಗಿ ಗಣತಿಯಪಟ್ಟಿಗೆ ಸೇರಿಸಲು ವಿಶೇಷ ಕ್ರಮ ವಹಿಸಬೇಕು. 2026ರ ಬಜೆಟ್‌ನಲ್ಲಿ ಈ ಎಲ್ಲರಿಗೂ ಎಲ್ಲ ದೇವದಾಸಿ ಮಹಿಳೆಯರ ಕುಟುಂಬದಂತೆ ಸೌಲಭ್ಯಳನ್ನು ಒದಗಿಸಲು ಸರ್ಕಾರ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷೆ ಫಕೀರಮ್ಮ ಪೂಜಾರ, ಮಾದೇವಿ ದೋಡ್ಡಮನಿ, ಶಿವಕ್ಕ ಮಾದರ, ಮಕ್ಕಳ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಮಾದರ, ಆನಂದ ಮಾದರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.