ADVERTISEMENT

ಆರು ಗಂಟೆಯೊಳಗೆ ಕಳವು ಆರೋಪಿ ಬಂಧನ: ₹80.20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ: ₹80.20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 6:20 IST
Last Updated 5 ಡಿಸೆಂಬರ್ 2025, 6:20 IST
ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ಜತೆಗೆ ಕಳವು ಆರೋಪಿ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್‌ ಸಿಬ್ಬಂದಿ ಇದ್ದಾರೆ
ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ಜತೆಗೆ ಕಳವು ಆರೋಪಿ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್‌ ಸಿಬ್ಬಂದಿ ಇದ್ದಾರೆ   

ಗದಗ: ಆಭರಣ ಮಳಿಗೆಗೆ ಕನ್ನ ಹಾಕಿ ₹80.20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ದೂರು ದಾಖಲಾದ ಆರು ಗಂಟೆಯೊಳಗೆ ಬಂಧಿಸುವಲ್ಲಿ ಗದಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಡಿ. 2ರಂದು ರಾತ್ರಿ ಗದಗ ನಗರದ ಸ್ಟೇಶನ್‌ ರಸ್ತೆಯಲ್ಲಿರುವ ಶಾಂತಾದುರ್ಗಾ ಆಭರಣ ಮಳಿಗೆಯಲ್ಲಿ ಕಳ್ಳತನ ನಡೆದಿತ್ತು. ಕಳ್ಳನು ಆಭರಣ ಮಳಿಗೆಯ ಮೂರನೇ ಮಹಡಿಯ ಕಿಟಕಿಯ ಕಬ್ಬಿಣದ ಸರಳುಗಳನ್ನು ಕತ್ತರಿಸಿ, ಒಳಕ್ಕೆ ನುಗ್ಗಿ ನೆಲಮಹಡಿಯ ಆಭರಣ ಮಳಿಗೆ ಪ್ರವೇಶಿಸಿ ಕೌಂಟರ್‌ನಲ್ಲಿಟ್ಟಿದ್ದ ₹10.16 ಲಕ್ಷ ಮೌಲ್ಯದ ಚಿನ್ನಾಭರಣ, ₹61.09 ಲಕ್ಷ ಮೌಲ್ಯದ ಬೆಳ್ಳಿ ಸಾಮಗ್ರಿ ಹಾಗೂ ₹8.95 ಲಕ್ಷ ಮೌಲ್ಯದ ಜೆಮ್‌ಸ್ಟೋನ್‌ಗಳು ಸೇರಿದಂತೆ ಒಟ್ಟು ₹80.20 ಲಕ್ಷ ಮೌಲ್ಯದ ವಸ್ತುಗಳನ್ನು ಕಳುವು ಮಾಡಿದ್ದ.

ಈ ಸಂಬಂಧ ನಾರಾಯಣ ಕುಡತರಕರ ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ADVERTISEMENT

ಪ್ರಕರಣದ ಆರೋಪಿ ಯಾವುದೇ ಸಣ್ಣ ಸುಳಿವು ಸಿಗದಂತೆ ಕಳವು ಮಾಡಿ ಪರಾರಿಯಾಗಿದ್ದ. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಪೊಲೀಸ್‌ ಇಲಾಖೆ, ಆರೋಪಿ ಪತ್ತೆಗೆ 10 ತಂಡಗಳನ್ನು ರಚಿಸಿತ್ತು. ಅಂತಿಮವಾಗಿ, ದೂರು ದಾಖಲಾದ ಆರು ತಾಸಿನ ಒಳಗಾಗಿ ಗುಜರಾತ್ ಮೂಲದ ಮಹ್ಮದ್ ಹುಸೇನ ಸಿದ್ದಿಕಿ (43) ಎಂಬುವನನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

‘ಇದೊಂದು ಕ್ಲಿಷ್ಟಕರ ಪ್ರಕರಣವಾಗಿತ್ತು. ಕಳುವು ಮಾಡಿದ ಆರೋಪಿ ಗದಗ ನಗರದಿಂದ 7 ಗಂಟೆ ದೂರ ಕ್ರಮಿಸಿದ್ದಾನೆ ಎಂಬ ‌ಮಾಹಿತಿ ಲಭ್ಯವಾಗಿತ್ತು. ಪ್ರಾಥಮಿಕ ಮಾಹಿತಿ ಮೇರೆಗೆ ಆರೋಪಿಯ ಸುಳಿವು ಸಿಕ್ಕಿತು. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ವಡಗಾಂವ್‌ ಪೊಲೀಸರ ನೆರವು ಪಡೆದು ಆರೋಪಿಯನ್ನು ಬಂಧಿಸಲಾಗಿದೆ. ಧೀರಜ್ ಮತ್ತು ಅವರ ತಂಡದ ಸಹಾಯದಿಂದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಎಸ್‌ಪಿ ರೋಹನ್‌ ಜಗದೀಶ್‌ ತಿಳಿಸಿದ್ದಾರೆ.

‘ಪೊಲೀಸ್​ ಕಾರ್ಯಾಚರಣೆಯಲ್ಲಿ ಸಾರಿಗೆ ಇಲಾಖೆ ಮತ್ತು ಕೊಲ್ಹಾಪುರ, ಸಾಂಗ್ಲಿ ಜಿಲ್ಲೆಗಳ ಪೊಲೀಸರ ಸಹಕಾರ ನೀಡಿದ್ದಾರೆ. ಜತೆಗೆ ಪ್ರಕರಣ ಭೇದಿಸುವಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಸಿಪಿಐ ಸಿದ್ದಾರಾಮೇಶ್ವರ ಗಡಾದ, ಲಾಲಸಾಬ್ ಜೂಲಕಟ್ಟಿ, ಧೀರಜ್ ಶಿಂಧೆ, ಪಿಎಸ್‌ಐ ಆರ್.ಆರ್.ಮುಂಡವಾಡಗಿ, ಮಾರುತಿ ಜೋಗದಂಡಕರ, ಜಿ.ಟಿ., ಜಕ್ಕಲಿ ಸೇರಿದಂತೆ ಅಪರಾಧ ವಿಭಾಗದ ಅಧಿಕಾರಿಗಳು ಇದ್ದರು. 

ಇದೊಂದು ಸವಾಲಿನ ಪ್ರಕರಣವಾಗಿತ್ತು. ಪ್ರಕರಣವನ್ನು 6 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಪತ್ತೆಹಚ್ಚಲಾಗಿದೆ. ಪೂರ್ಣ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಪತ್ತೆ ಹಚ್ಚಿದ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಗುವುದು.
ರೋಹನ್ ಜಗದೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕಾರ್ಯಾಚರಣೆ ಹೇಗೆ?

ಆರೋಪಿ ಮಹ್ಮದ್‌ ಸಿದ್ದಿಕಿ ಶಾಂತಾದುರ್ಗಾ ಆಭರಣ ಮಳಿಗೆ ಹಿಂಬದಿ ಇರುವ ಖಾಸಗಿ ಲಾಡ್ಜ್‌ನಲ್ಲಿ ಹಲವು ದಿನಗಳಿಂದ ತಂಗಿದ್ದ ಎಂಬುದರ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಜತೆಗೆ ನಗರದಲ್ಲಿ ಪೊಲೀಸ್‌ ಇಲಾಖೆಯಿಂದ ಅಳವಡಿಸಲಾಗಿರುವ ‘ಥರ್ಡ್‌ ಐ’ ಸಿಸಿಟಿವಿ ಕ್ಯಾಮೆರಾದಲ್ಲಿನ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿ ಬೆನ್ನಿಗೆ ಬಿದ್ದಿದ್ದಾರೆ. ಕಳವು ಮಾಡಿದ ಚಿನ್ನಾಭರಣಗಳೊಂದಿಗೆ ಆರೋಪಿಯು ನಗರದ ಹೊಸ ಬಸ್‌ ನಿಲ್ದಾಣದಿಂದ ಪುಣೆ ಬಸ್‌ ಮೂಲಕ ಮಹಾರಾಷ್ಟ್ರ ಕಡೆಗೆ ತೆರಳಿರುವುದು ಗೊತ್ತಾಗಿದೆ. ಆಗ ಗದಗ ಜಿಲ್ಲಾ ಪೊಲೀಸರು ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಈ ವೇಳೆಗೆ ಕೊಲ್ಹಾಪುರ ಜಿಲ್ಲೆಯ ವಡಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಿ ಟೋಲ್‌ ಬಳಿ ಬಸ್‌ನಲ್ಲಿ ಸಂಚರಿಸುತ್ತಿದ್ದ ಆರೋಪಿಯನ್ನು ವಡಗಾಂವ್‌ ಪೊಲೀಸರು ಬಂಧಿಸಿ ಕದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಅದೇ ಸಮಯಕ್ಕೆ ಅಲ್ಲಿಗೆ ತೆರಳಿದ ಜಿಲ್ಲಾ ಪೊಲೀಸರು ಚಿನ್ನಾಭರಣದೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.