ADVERTISEMENT

ಗದಗ ಕಾನ್‌ಸ್ಟೆಬಲ್‌ ಸೂಸೈಡ್: ಪೊಲೀಸ್, ಪತ್ರಕರ್ತರು ಸೇರಿ 9 ಜನರ ವಿರುದ್ಧ FIR

ಡೆತ್‌ನೋಟ್‌ ಬರೆದಿಟ್ಟು ಪೊಲೀಸ್‌ ಕಾನ್‌ಸ್ಟೆಬಲ್‌ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 16:05 IST
Last Updated 17 ಮಾರ್ಚ್ 2022, 16:05 IST
   

ಗದಗ: ಬೆಟಗೇರಿ ಬಡಾವಣೆ ಪೊಲೀಸ್‌ ಠಾಣೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಪಿ.ಸಿ.ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ತಂದೆ ಚನ್ನವೀರಗೌಡ ಶಂಕರಗೌಡ ಪಾಟೀಲ ಅವರು ನೀಡಿದ ದೂರಿನಂತೆ ಇಬ್ಬರು ಪತ್ರಕರ್ತರು, ಐವರು ಪೊಲೀಸರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಮೇಲೆ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಟಗೇರಿ ಬಡಾವಣೆ ಪೊಲೀಸ್‌ ಠಾಣೆಯ ಸಿಬ್ಬಂದಿ ಪುಟ್ಟಪ್ಪ ಕೌಜಲಗಿ, ಸಿ.ವಿ.ನಾಯ್ಕರ, ಗದಗ ಸಂಚಾರ ಠಾಣೆಯ ದಾದಾಪೀರ ಮಂಜಲಾಪೂರ, ಗದಗ ಸೆನ್‌ ಠಾಣೆಯ ಶರಣಪ್ಪ ಅಂಗಡಿ, ಮುಂಡರಗಿ ಠಾಣೆಯ ಅಂದಪ್ಪ ಹಣಜಿ ಹಾಗೂಪತ್ರಕರ್ತ ಗಿರೀಶ ಕುಲಕರ್ಣಿ, ಖಾಸಗಿ ವಾಹಿನಿ ವರದಿಗಾರ ಭೀಮನಗೌಡ ಪಾಟೀಲ, ಗುರುರಾಜ ಬಸವರಾಜ ತಿಳ್ಳಿಹಾಳ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಬೆಟಗೇರಿ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಸಿ.ಪಾಟೀಲ ಅವರಿಗೆ ಆರೋಪಿಗಳಾದ ಗಿರೀಶ ಕುಲಕರ್ಣಿ, ಗುರುರಾಜ ತಿಳ್ಳಿಹಾಳ, ವಿಠ್ಠಲ ಚಿದಾನಂದ ಹಬೀಬ, ಭೀಮನಗೌಡ ಪಾಟೀಲ ವಿನಾಕಾರಣ ತೊಂದರೆ ನೀಡುತ್ತಾ, ಬ್ಲಾಕ್‌ ಮೇಲ್‌ ಮಾಡುತ್ತಿದ್ದರು’ ಎಂದು ಮೃತ ವ್ಯಕ್ತಿಯ ತಂದೆ ಚನ್ನವೀರಗೌಡ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಖಾಸಗಿ ವಿಷಯದ ಸಂದೇಶ ಮತ್ತು ಪೋಟೊಗಳು ನಮ್ಮ ಬಳಿ ಇದ್ದು, ಅದನ್ನು ಎಸ್‌ಪಿಗೆ ತೋರಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಅಲ್ಲದೇ, ಎಲ್ಲ ಆರೋಪಿಗಳು ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದರು. ಇದರಿಂದ ತೀವ್ರ ಕುಗ್ಗಿ ಹೋಗಿದ್ದ ಪಿ.ಸಿ.ಪಾಟೀಲ ಮಾರ್ಚ್‌ 16ರಂದು ಡೆತ್‌ನೋಟ್‌ ಬರೆದಿಟ್ಟು, ಲಕ್ಕುಂಡಿಯಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಒಂಬತ್ತು ಮಂದಿ ಆರೋಪಿಗಳೇ ಕಾರಣ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಪೊಲೀಸ್‌ ಕಾನ್‌ಸ್ಟೆಬಲ್‌ ಪಿ.ಸಿ.ಪಾಟೀಲ ಉತ್ತಮ ಕೆಲಸಗಾರ. ಎಲ್ಲರ ಜತೆಗೆ ಚೆನ್ನಾಗಿದ್ದರು. ಆದರೆ, ಕೆಲವು ದಿನಗಳಿಂದ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟರ ತಿಳಿಸಿದ್ದಾರೆ.

‘ಮೃತ ಪೊಲೀಸ್‌ ಕಾನ್‌ಸ್ಟೆಬಲ್‌ ಮಾನಸಿಕ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಕೆಲವರ ಹೆಸರನ್ನೂ ಬರೆದಿಟ್ಟಿದ್ದಾರೆ. ಎಲ್ಲ ಸಾಕ್ಷ್ಯಾಧಾರಗಳು, ಕಾಲ್‌ ರೆಕಾರ್ಡಿಂಗ್‌ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.