ADVERTISEMENT

ಗದಗ | ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ, ಸೊರಗಿದ ಉದ್ಯಾನ

ಮುರಿದ ಆಟದ ಉಪಕರಣಗಳು; ಜನಾಕರ್ಷಣೆ ಕಳೆದುಕೊಂಡು ಕೊಂಪೆಯಂತಾದ ಉದ್ಯಾನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:30 IST
Last Updated 7 ಸೆಪ್ಟೆಂಬರ್ 2025, 2:30 IST
ಮುಳಗುಂದ ಗಣೇಶ ದೇವಸ್ಥಾನದ ಹತ್ತಿರದ ಉದ್ಯಾನವನ ಹಾಳಾಗಿದ್ದು, ಗ್ರಿಲ್ ಮುರಿದು ಬಿದ್ದಿರುವುದು
ಮುಳಗುಂದ ಗಣೇಶ ದೇವಸ್ಥಾನದ ಹತ್ತಿರದ ಉದ್ಯಾನವನ ಹಾಳಾಗಿದ್ದು, ಗ್ರಿಲ್ ಮುರಿದು ಬಿದ್ದಿರುವುದು   

ಮುಳಗುಂದ: ಇಲ್ಲಿನ ಗಣೇಶ ದೇವಸ್ಥಾನದ ಹತ್ತಿರ ಇರುವ ಉದ್ಯಾನ ನಿರ್ವಹಣೆ ಕೊರತೆ ಕಾರಣಕ್ಕೆ ಸೊರಗಿದೆ. ಉದ್ಯಾನದಲ್ಲಿದ್ದ ಮಕ್ಕಳ ಆಟದ ಉಪಕರಣಗಳು ಹಾಳಾಗಿದ್ದು, ಹಸಿರು ಕಳೆಗುಂದಿದೆ. ಆದಕಾರಣ, ಇಲ್ಲಿಗೆ ಬರುವ ಮಕ್ಕಳಿಗೆ ಉದ್ಯಾನದ ವಾತಾವರಣ ನಿರಾಸೆ ಉಂಟು ಮಾಡುತ್ತಿದೆ.

ಹತ್ತಾರು ವರ್ಷಗಳಿಂದ ಉತ್ತಮ ನಿರ್ವಹಣೆ ಜತೆಗೆ ಗಿಡಮರಗಳ ಹಸಿರು ಸೌಂದರ್ಯದಿಂದ ತುಂಬಿಕೊಂಡಿದ್ದ ಉದ್ಯಾನ ಇತ್ತೀಚಿನ ದಿನಗಳಲ್ಲಿ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಉದ್ಯಾನದ ರಕ್ಷಣೆಗೆ ಸುತ್ತಲೂ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಬಹುತೇಕ ಭಾಗದಲ್ಲಿ ಕಿತ್ತು, ಮುರಿದು ಬಿದ್ದಿವೆ. ಕೆಲವು ಕಳ್ಳರ ಪಾಲಾಗಿವೆ.

ಆವರಣದಲ್ಲಿ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ನಾನಾ ಬಗೆಯ ಹೂವಿನ ಗಿಡಗಳು ನೀರಿಲ್ಲದೆ ಬಾಡಿವೆ. ಕಿಡಿಗೇಡಿಗಳ ಉಪಟಳಕ್ಕೆ ಸಿಕ್ಕು ಗಿಡಗಳ ಟೊಂಗೆಗಳು ಮುರಿದಿವೆ. ಕೆಲವು ಗಿಡಗಳಿಗೆ ಕೊಡಲಿ ಪೆಟ್ಟು ಹಾಕಲಾಗಿದೆ. ವಿದ್ಯುತ್ ದೀಪಗಳು ಹಾಳಾಗಿದ್ದು, ರಾತ್ರಿ ಹೊತ್ತು ಮದ್ಯ ಸೇವನೆ ತಾಣವಾಗಿ ಮಾರ್ಪಟ್ಟಿದೆ. ಸ್ವಚ್ಛತೆ ಇಲ್ಲದೇ ಕಸದ ರಾಶಿ ಬಿದ್ದಿದೆ. ಗ್ರಿಲ್ ಮುರಿದ ಕಾರಣ ಹತ್ತಿರದಲ್ಲೇ ಇರುವ ಗಣೇಶ ದೇವಸ್ಥಾನಕ್ಕೂ ರಕ್ಷಣೆ ಗೋಡೆ ಇಲ್ಲದಂತಾಗಿದೆ.

ADVERTISEMENT

ರಜಾ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಂದ ತುಂಬಿರುತ್ತಿದ್ದ ಉದ್ಯಾನವು ಈಗ ಜನಾಕರ್ಷಣೆ ಕಳೆದುಕೊಂಡಿದೆ. ಮಕ್ಕಳ ಆಟೋಟಕ್ಕಾಗಿ ನಿರ್ಮಿಸಿದ್ದ ಜೋಕಾಲಿ, ಜಾರುವ ಬಂಡೆ, ತಿರುಗುವ ತೊಟ್ಟಿ, ಬೋಟ್ ಆಕಾರದ ಮಕ್ಕಳ ಚಟುವಟಿಕೆಯ ಕಬ್ಬಿಣದ ವಸ್ತುಗಳು ತುಕ್ಕು ಹಿಡಿದು ಮುರಿದು ಬಿದ್ದಿವೆ. ಮುರಿದು ಹಾಳಾದ ಆಟಿಕೆ ವಸ್ತುಗಳು ನೋಡಿದ ಮಕ್ಕಳಿಗೆ ನಿರಾಸೆ ಮೂಡಿಸುತ್ತಿದೆ. ಮಕ್ಕಳ ದೈಹಿಕ ಚಟುವಟಿಕೆಗೆ ಪೂರಕವಾಗಿದ್ದ ಆಟದ ಸಾಮಗ್ರಿಗಳು, ಸುಂದರ ಪರಿಸರ ಸಂಪೂರ್ಣ ಹಾಳಾಗಲು ಸ್ಥಳೀಯ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮಂಜುನಾಥ ಅಣ್ಣಿಗೇರಿ ಆರೋಪಿಸಿದರು.

ಮುರಿದು ಬಿದ್ದ ಕಬ್ಬಿಣದ ಸರಳುಗಳು ಪುಟ್ಟ ಮಕ್ಕಳಿಗೆ ಅಪಾಯ ಉಂಟು ಮಾಡುತ್ತಿವೆ. ಉದ್ಯಾನ ದುರಸ್ತೆ ಕಾರ್ಯ ಕೈಗೊಳ್ಳಬೇಕು. ಎಂದು ಸಾರ್ವಜನಿಕರು ಹಲವು ಬಾರಿ ಮನವಿ ಕೊಟ್ಟಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ. ನಿರ್ವಹಣೆ ಕೂಡ ಸಂಪೂರ್ಣ ಸ್ಥಗಿತವಾಗಿದೆ. ಕೂಡಲೇ ಉದ್ಯಾನ ಅಭಿವೃದ್ದಿ ಕಾಮಗಾರಿ ಕೈಗೊಳ್ಳಬೇಕು. ಜತೆಗೆ ನಿರ್ವಹಣೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಉದ್ಯಾನದಲ್ಲಿನ ಮಕ್ಕಳ ಆಟದ ವಸ್ತುಗಳ ದುರಸ್ತಿಗೆ ಕ್ರಮವಹಿಸಲಾಗುವುದು. ಉದ್ಯಾನವನ್ನು ಸಂಪೂರ್ಣ ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗುವುದು.
– ಮಂಜುನಾಥ ಗುಳೇದ, ಮುಖ್ಯಾಧಿಕಾರಿ ಮುಳಗುಂದ ಪಟ್ಟಣ ಪಂಚಾಯಿತಿ
ನಿರ್ವಹಣೆ ಇಲ್ಲದ ಕಾರಣ ಉದ್ಯಾನವನದ ಆವರಣದಲ್ಲಿ ಕಸದ ಬಿದ್ದಿರುವದು ಆಟಿಕೆ ವಸ್ತುಗಳು ಮುರಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.