ನರೇಗಲ್: ಮೊದಲೇ ಹಾಳಾಗಿದ್ದ ನರೇಗಲ್-ತೊಂಡಿಹಾಳ ಮಾರ್ಗದ ರಸ್ತೆ ಈಚೆಗೆ ಬಿಟ್ಟುಬಿಡದೆ ಸುರಿದ ಮಳೆಯಿಂದ ಮಳೆಗೆ ಮತ್ತಷ್ಟು ಕಿತ್ತು ಹೋಗಿದೆ. ಎಲ್ಲೆಂದರಲ್ಲಿ ನಿರ್ಮಾಣಗೊಂಡಿರುವ ತೆಗ್ಗು, ಗುಂಡಿ ಅಪಘಾತಗಳಿಗೆ ಅಹ್ವಾನ ನೀಡುತ್ತಿವೆ. ಅನೇಕ ವರ್ಷಗಳಿಂದಲೂ ಸಮಸ್ಯೆ ಇದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣಕುರುತನ ವರ್ತಿಸುತ್ತಿದ್ದಾರೆ. ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬುವುದು ಎರಡೂ ಗ್ರಾಮಗಳ ಜನರ ಆರೋಪವಾಗಿದೆ.
ಯಲಬುರ್ಗಾ, ತೊಂಡಿಹಾಳ, ಬಂಡಿಹಾಳ, ದ್ಯಾಂಪುರ, ಕುಕನೂರ ಗ್ರಾಮಗಳ ಜನರಿಗೆ ಹಾಗೂ ನರೇಗಲ್ ಸರಹದ್ದಿನ ಹೊಲಕ್ಕೆ ಹೋಗುವ ರೈತರಿಗೆ ತುಂಬಾನೆ ತೊಂದರೆ ಆಗುತ್ತಿದೆ. ಪಟ್ಟಣದ ಶಾಲೆ, ಕಾಲೇಜಿಗೆ ಈ ಮಾರ್ಗದ ಗ್ರಾಮಗಳಿಂದ ನಿತ್ಯವೂ ನೂರಾರು ಮಕ್ಕಳು ಬರುತ್ತಾರೆ. ಚಿಕ್ಕಮಕ್ಕಳ ಶಾಲಾ ವಾಹನವೂ ಇದೇ ಮಾರ್ಗದಲ್ಲಿ ಸಂಚರಿಸುತ್ತದೆ. ಹಾಗಾಗಿ ಎಲ್ಲ ಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ.
ಪ್ರಯಾಣಿಸುವ ವೃದ್ಧರ ಹಾಗೂ ಆಸ್ಪತ್ರೆಗೆ ಬರುವ ಗರ್ಭಿಣಿಯರ ಪರಿಸ್ಥಿತಿಯಂತ ಹೇಳತಿರದು. ಮಳೆಗಾಲದಲ್ಲಿ ಈ ಮಾರ್ಗದ ರಸ್ತೆಯಲ್ಲಿ ಅಪಘಾತಗಳು ನಡೆಯುವುದು ಸಾಮಾನ್ಯವಾಗಿದೆ. ಆದರೂ ಜನರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಶಾಲಾ ಮಕ್ಕಳ ಪಾಲಕರು, ರೈತರು ಆಕ್ರೋಶ ವ್ಯಕ್ತಪಡಿಸಿದರು.
ತಾತ್ಕಾಲಿಕ ಕಾಮಗಾರಿಗಳಿಂದ ನೀರು ಮಡುಗಟ್ಟುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದರೆ ನಡು ರಸ್ತೆಯಲ್ಲೇ ಅಪಘಾತ , ವಾಹನ ಬೀಳುವುದು ಖಚಿತ ಎಂಬಂತಾಗಿದೆ. ಇಂಥ ಕೆಲಸಗಳನ್ನು ನಿರ್ವಹಿಸಲು ಜನರಿಂದ ಪದೇ ಪದೇ ದೂರು ಬರುವವರೆಗೂ ಕಾಯುವಂತಾಗಬಾರದು. ಈ ವಿಷಯದಲ್ಲಿ ಮುತುವರ್ಜಿ ವಹಿಸಿ ಅಭಿವೃದ್ಧಿಗೆ ಮುಂದಾಗಬೇಕು ಎಂದು ರೈತ ಮುಖಂಡ ಶರಣಪ್ಪ ಧರ್ಮಾಯತ ಆಗ್ರಹಿಸಿದರು.
ಹೆಚ್ಚಾದ ಅಪಘಾತ: ಕಳವಳ
ಇದೇ ಮಾರ್ಗದಲ್ಲಿ ಪ್ರತಿವರ್ಷ ರಸ್ತೆ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಹಾನಿ ಆಗುತ್ತಿವೆ. ಅಲ್ಲದೇ ಕೆಲವು ಗಾಯಾಳುಗಳಾಗಿದ್ದಾರೆ. ದೊಡ್ಡ ಪ್ರಮಾಣದ ತೆಗ್ಗುಗಳು ನಿರ್ಮಾಣವಾಗಿರುವುದರಿಂದ ಮಳೆಯಾದಾಗ ವಾಹನ ಸವಾರರಿಗೆ ತಿಳಿಯದೇ ಹಲವು ಅವಘಡಗಳು ನಡೆದಿವೆ. ರಾತ್ರಿಯಂತೂ ವಾಹನ ಸವಾರಿ ಅಸಾಧ್ಯವಾಗಿದೆ. ನರೇಗಲ್ ಸರಹದ್ದಿನ ರಸ್ತೆ ಮಾತ್ರ ಕೆಟ್ಟಿದ್ದು ಮುಂದೆ ಸಂಪರ್ಕ ಕಲ್ಪಿಸುವ ಕಲ್ಯಾಣ ಕರ್ನಾಟಕದ ಸರಹದ್ದಿನ ರಸ್ತೆಗಳು ಅಭಿವೃದ್ಧಿಗೊಂಡಿವೆ. ಹಾಗಾಗಿ ನಮ್ಮ ಭಾಗದ ಜನ ನಾಯಕರು ಅಧಿಕಾರಿಗಳು ಈ ಕೂಡಲೇ ಅಭಿವೃದ್ಧಿಗೆ ಮುಂದಾಗಬೇಕು ಎಂದು ಪಟ್ಟಣದ ರೈತರಾದ ಉದಯ ಕಳಕೊಣ್ಣವರ ಶರಣಪ್ಪ ನರೇಗಲ್ ಕಲ್ಲಪ್ಪ ಮಾರನಬಸರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.