ADVERTISEMENT

ವಿದ್ಯಾರ್ಥಿಗಳೇ ದೇಶದ ಭವಿಷ್ಯ: ಸಚಿವ ಎಚ್.ಕೆ.ಪಾಟೀಲ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 3:52 IST
Last Updated 7 ಜುಲೈ 2025, 3:52 IST
ಗದಗ ನಗರದ  ಮಲ್ಲಸಮುದ್ರ ಪದವಿ ಪೂರ್ವ ಕಾಲೇಜಿನ ಬೋಧಕ ಸಿಬ್ಬಂದಿಗಳಿಗೆ ಸಚಿವ ಎಚ್‌.ಕೆ.ಪಾಟೀಲ ಸನ್ಮಾನಿಸಿದರು
ಗದಗ ನಗರದ  ಮಲ್ಲಸಮುದ್ರ ಪದವಿ ಪೂರ್ವ ಕಾಲೇಜಿನ ಬೋಧಕ ಸಿಬ್ಬಂದಿಗಳಿಗೆ ಸಚಿವ ಎಚ್‌.ಕೆ.ಪಾಟೀಲ ಸನ್ಮಾನಿಸಿದರು   

ಗದಗ: ‘ವಿದ್ಯಾರ್ಥಿಗಳೇ ನಮ್ಮ ದೇಶದ ಭವ್ಯ ಭವಿಷ್ಯವಾಗಿದ್ದಾರೆ. ಓದುವ ಹಂತದಲ್ಲಿ ಉತ್ತಮವಾಗಿ ಅಧ್ಯಯನ ಮಾಡಿ ಜೀವನದಲ್ಲಿ ಯಶಸ್ಸು ಗಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಶನಿವಾರ ಮಲ್ಲಸಮುದ್ರದ ಮೊರಾರ್ಜಿ ದೇಸಾಯಿ ವಸತಿಯುತ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 2024– 25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿ ಮಾತನಾಡಿದರು.

‘2024– 25ನೇ ಸಾಲಿನಲ್ಲಿ ಮಲ್ಲಸಮುದ್ರ ಶಾಲೆಯಲ್ಲಿ 80 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆಯುವ ಮೂಲಕ ಸರ್ಕಾರದ ₹10 ಸಾವಿರದ ನಗದು ಬಹುಮಾನಕ್ಕೆ ಭಾಜನರಾಗಿದ್ದೀರಿ. ಅಲ್ಲದೆ ಶೇ 100 ರಷ್ಟು ಫಲಿತಾಂಶ ಪಡೆದಿದ್ದು ಅಭಿನಂದನೀಯ’ ಎಂದರು.

ADVERTISEMENT

‘ರಾಜ್ಯದ ಕ್ರೈಸ್ ಸಂಸ್ಥೆಯ ಅಡಿ 78 ಕಾಲೇಜುಗಳಿದ್ದು ಉತ್ತಮ ಫಲಿತಾಂಶದಲ್ಲಿ ಮಲ್ಲಸಮುದ್ರ ಕಾಲೇಜು ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿರುವುದು ಹೆಮ್ಮೆಪಡುವ ವಿಷಯ. ಮುಂದಿನ ವರ್ಷ ಇಲ್ಲಿ ಕಲಿಯುವ ಎಲ್ಲ ಮಕ್ಕಳು ಸಹ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಬೇಕು. ಈ ನಿಟ್ಟಿನಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸಬೇಕು’ ಎಂದರು.

ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಮಾತನಾಡಿ, ನಿರಂತರವಾದ ಪ್ರಾಮಾಣಿಕ ಪ್ರಯತ್ನ ಇದ್ದಲ್ಲಿ ಯಶಸ್ಸು ನಿಮ್ಮದಾಗಲಿದೆ. ಜತೆಗೆ ಜೀವನದಲ್ಲಿಯೂ ದೊಡ್ಡಮಟ್ಟದ ಸಾಧನೆ ಸಾಧ್ಯವಾಗಲಿದೆ. ಶೇ 85ಕ್ಕಿಂತ ಅಧಿಕ ಫಲಿತಾಂಶ ಪಡೆಯುವುದು ಸಣ್ಣ ಮಾತಲ್ಲ. ಎಲ್ಲರೂ ಉತ್ತಮ ಸಾಧನೆ ಮಾಡಿದ್ದೀರಿ. ಇದಕ್ಕೆ ಕಾರಣರಾದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಯೂ ಅಭಿನಂದನಾರ್ಹರು ಎಂದರು.

ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಜಿ, ರವಿ ಗುಂಜಿಕರ, ಸಿದ್ದು ಪಾಟೀಲ ಸೇರಿದಂತೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಅಸುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಬೋಧಕೇತರ ಸಿಬ್ಬಂದಿ ಇದ್ದರು.

ಭಾರತದ ಭವ್ಯ ಭವಿಷ್ಯ ನಿರ್ಮಾಣದಲ್ಲಿ ಯುವ ಪೀಳಿಗೆ ಪಾತ್ರ ಅಪಾರವಿದೆ. ಕಲಿಯುವ ಅವಧಿಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜ್ಞಾನ ಹೊಂದಬೇಕು
ಎಚ್‌.ಕೆ.ಪಾಟೀಲ ಸಚಿವ
ಜೀವನದಲ್ಲಿ ದೊಡ್ಡ ಗುರಿ ಹೊಂದದಿದ್ದಲ್ಲಿ ನೀವು ಖಂಡಿತ ಬಡವರಾಗುತ್ತೀರಿ. ಆದ್ದರಿಂದ ವಿದ್ಯಾರ್ಥಿಗಳು ದೊಡ್ಡ ಗುರಿ ಹೊಂದುವ ಮೂಲಕ ಸಾಧನೆಗೆ ಅವಿರತ ಪ್ರಯತ್ನ ಪಡಬೇಕು
ಎಸ್‌.ವಿ.ಸಂಕನೂರ ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.