ADVERTISEMENT

ನರಗುಂದ | 'ಮೆದುಳು ಜ್ವರದ ಬಗ್ಗೆ ಜಾಗೃತಿ ಅಗತ್ಯ'

ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 14:39 IST
Last Updated 16 ಫೆಬ್ರುವರಿ 2025, 14:39 IST
ನರಗುಂದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಮೆದುಳು ಜ್ವರ ಕುರಿತು ಶನಿವಾರ ನಡೆದ ಅಡ್ವೊಕೇಸಿ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ ಉದ್ಘಾಟಿಸಿದರು
ನರಗುಂದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಮೆದುಳು ಜ್ವರ ಕುರಿತು ಶನಿವಾರ ನಡೆದ ಅಡ್ವೊಕೇಸಿ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ ಉದ್ಘಾಟಿಸಿದರು   

ನರಗುಂದ: ಮೆದುಳು ಜ್ವರದ ಪ್ರಕರಣಗಳು ರಾಜ್ಯದ ಕೆಲವೆಡೆ ಕಂಡು ಬರುತ್ತಿವೆ. ಇವುಗಳು ಹರಡದಂತೆ ಜಾಗೃತಿ ವಹಿಸುವಂತೆ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಚ್.ಎಲ್.ಗಿರಡ್ಡಿ ಹೇಳಿದರು.

ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಮೆದುಳು ಜ್ವರ ಕುರಿತು ಶನಿವಾರ ನಡೆದ ಅಡ್ವೊಕೇಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೆದುಳು ಜ್ವರ ತೀವ್ರವಾಗಿ ಕಂಡು ಬಂದಿರುವುದರಿಂದ ಸಾರ್ವಜನಿಕರಲ್ಲಿ ಸಹಜವಾಗಿಯೆ ಕಳವಳ ಮೂಡಿಸಿದೆ. ಸೊಂಕು ಹರಡಿರುವ ಹಂದಿಗಳನ್ನು ಸೊಳ್ಳೆಗಳು ಕಚ್ಚಿ ಪುನಃ ಮನುಷ್ಯರನ್ನು ಕಚ್ಚಿದಾಗ ಈ ಸೋಂಕು ಮಾನವರಿಗೆ ಹರಡುತ್ತದೆ. ಮೆದುಳು ಜ್ವರವು ಹೀಗೆ ಹೆಚ್ಚಾಗಿ ಮಕ್ಕಳಲ್ಲಿ ಉಂಟಾಗುತ್ತದೆ. ಮೆದುಳು ಜ್ವರದ ರೋಗದ ಲಕ್ಷಣಗಳು ಮಾನವರಲ್ಲಿ ಜ್ವರ, ತಲೆನೂವು, ಮೈ ಕೈ ನೋವು, ಎಚ್ಚರ ತಪ್ಪುವುದು, ದೇಹ ನಡುಗುವುದು, ಇಂತಹ ಲಕ್ಷಣಗಳು ಕಾಣುತ್ತವೆ. ಈ ರೀತಿ ಲಕ್ಷಣಗಳು ಕಂಡೊಡನೆ ತಡ ಮಾಡದೆ ಹತ್ತಿರದ ಆಸ್ಪತ್ರೆಗೆ ಹೋಗಿ ಅಗತ್ಯ ಚಿಕಿತ್ಸೆ ಕೊಡಿಸಬೇಕು ಎಂದರು.

ADVERTISEMENT

ವಿಳಂಬವಾದಲ್ಲಿ ಮಕ್ಕಳ ಪ್ರಾಣಕ್ಕೆ ಅಪಾಯಕರ. ಸಾರ್ವಜನಿಕರು ವಾಸ ಮಾಡುವ ಸ್ಥಳದಲ್ಲಿ ಹಂದಿಗಳನ್ನು ಸಾಕಬಾರದು. ಅವುಗಳನ್ನು ಊರ ಹೊರಗೆ ಕನಿಷ್ಠ 3 ಕಿ.ಮೀ ದೂರ ಇರಬೇಕು. ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶಪಡಿಸಬೇಕು. ಮಲಗುವಾಗ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕ ಬಳಸಬೇಕು ಎಂದು ಹೇಳಿದರು.

ಜಿಲ್ಲಾ ಕೀಟಶಾಸ್ತ್ರಜ್ಞೆ ಅನ್ನಪೂರ್ಣಾ ಶೆಟ್ಟರ ಮಾತನಾಡಿ, ಮೆದುಳು ಜ್ವರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಸಿ ಕೊರವನವರ ಮಾತನಾಡಿ, ಮೆದುಳು ಜ್ವರ ಹರಡದಂತೆ ಗಮನ ಹರಿಸಬೇಕು. ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಸಮಾರಂಭವನ್ನು ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ ಉದ್ಘಾಟಿಸಿದರು.

ಪುರಸಭೆ ಉಪಾಧ್ಯಕ್ಷೆ ಕಾಶವ್ವ ಮಳಗಿ, ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ ಟಿ.ಎಸ್., ಪಶು ವೈದ್ಯಾಧಿಕಾರಿ ಡಾ.ಸಂತೋಷ ಎಚ್.ಕೆ., ಸಿಡಿಪಿಓ ಕೆ.ಎಚ್.ಹುಲಕೋಟಿ ಹಾಗೂ ವಿವಿಧ ಪ್ರೌಢ ಶಾಲೆಗಳ ಮುಖ್ಯಶಿಕ್ಷಕರು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಆರೋಗ್ಯ ಸಮಿತಿ ಸದಸ್ಯರು, ಪುರಸಭೆ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು. ಜಿ,ವಿ ಕೊಣ್ಣೂರ ನಿರೂಪಿಸಿದರು.
ಸಿ. ಎಫ್ ಕುಂಬಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.