ಗಜೇಂದ್ರಗಡ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ಹಾಳಾಗುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದ ಹಳ್ಳಗಳು ತುಂಬಿ ಹರಿದಿದ್ದು, ಜಮೀನಗಳಲ್ಲಿನ ಬೆಳೆಗಳೆಲ್ಲ ಜಲಾವೃತಗೊಂಡಿವೆ. ಮಂಗಳವಾರದಿಂದ ಪ್ರತಿದಿನ ಮಳೆ ಸುರಿಯುತ್ತಿರುವುದರಿಂದ ಬೆಳೆಗಳಲ್ಲಿ ತೇವಾಂಶ ಹೆಚ್ಚಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿವೆ.
ಬಿತ್ತನೆ ಮಾಡಿದ್ದ ಹೆಸರು ಬೆಳೆ ಬೂದಿ ರೋಗ ಹಾಗೂ ಹಳದಿ ರೋಗದಿಂದ ಈಗಾಗಲೇ ಹಾಳಾಗಿದೆ. ಆರಂಭದಲ್ಲಿ ಉತ್ತಮವಾಗಿ ಬೆಳೆದಿದ್ದ ಗೋವಿನಜೋಳ ಕಳೆದ ತಿಂಗಳು ಮಳೆ ಕೊರತೆಯಿಂದ ನಲುಗಿತ್ತು. ಸದ್ಯ ಸುರಿಯುತ್ತಿರುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಬೆಳೆಗಳಿಗೆ ಯೂರಿಯಾ ಹಾಕುತ್ತಿದ್ದಾರೆ. ಹತ್ತಿ ಬೆಳೆಗಳಲ್ಲಿ ಮಳೆ ನೀರು ನಿಂತು ಕಾಯಿಗಳು ಕೊಳೆಯುತ್ತಿವೆ.
ಸಮರ್ಪಕವಾಗಿ ಸಿಗದ ಯೂರಿಯಾ: ತೇವಾಂಶ ಹೆಚ್ಚಳದಿಂದ ನಲುಗಿರುವ ಗೋವಿನಜೋಳ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ತೇವಾಂಶ ಹೆಚ್ಚಳದಿಂದ ಬೆಳೆ ಉಳಿಸಿಕೊಳ್ಳಲು ರೈತರು ಬೆಳೆಗೆ ಯೂರಿಯಾ ಹಾಕಲು ಮುಂದಾಗುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಯೂರಿಯಾ ಸಿಗುತ್ತಿಲ್ಲ. ಹೀಗಾಗಿ ರೈತರು ಕೃಷಿ ಕಾರ್ಯಗಳನ್ನು ಬಿಟ್ಟು ಮಾರುಕಟ್ಟೆಯಲ್ಲಿ ಯೂರಿಯಾ ಪಡೆಯಲು ಅಲೆಯುತ್ತಿದ್ದು, ಅಂಗಡಿಗಳಿಗೆ ಬರುವ ಯೂರಿಯಾ ಪಡೆಯಲು ರೈತರು ಸಾಲುಗಟ್ಟಿ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಗೊಬ್ಬರ ತಂದು ಬಿತ್ತನೆ ಮಾಡಿದ ಬಳಿಕ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಹಾಳಾಗುತ್ತದೆ. ಹೀಗಾಗಿ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆಅಂದಪ್ಪ ಅಂಗಡಿ ಮ್ಯಾಕಲಝರಿ ಗ್ರಾಮದ ಪ್ರಗತಿಪರ ರೈತ
ನ್ಯಾನೊ ಯೂರಿಯಾ ಬಳಕೆಗೆ ರೈತರ ನಿರಾಸಕ್ತಿ
ಒಂದು ಚೀಲ ಯೂರಿಯಾಗೆ ಸಮಾನವಾಗಿರುವ ನ್ಯಾನೋ ಯೂರಿಯಾ ಬಳಕೆಗೆ ರೈತರು ನಿರಾಸಕ್ತಿ ತೋರುತ್ತಿದ್ದು ಹರಳು ರೂಪದ ಯೂರಿಯಾ ಬಳಕೆಗೆ ಮುಂದಾಗುತ್ತಿದ್ದಾರೆ. ಒಂದು ಚೀಲ ಯೂರಿಯಾ ಗೊಬ್ಬರ ಬೆಲೆ ₹320-₹350 ಗಾಡಿ ಬಾಡಿಗೆ ₹20-₹30 ಒಟ್ಟು ₹590-₹630 ಖರ್ಚಾಗುತ್ತದೆ. ಅರ್ಧ ಲೀಟರ್ ನ್ಯಾನೋ ಯೂರಿಯಾ ಬೆಲೆ ₹220 ಕೂಲಿ ₹500 ಹೀಗೆ ಒಟ್ಟು ₹1120 ಖರ್ಚಾಗುತ್ತದೆ. ‘ನ್ಯಾನೊ ಯೂರಿಯಾ ಸಿಂಪಡಣೆಗೆ ಪಂಪ್ ಅವಶ್ಯಕ. ಈ ಹಿಂದೆ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ವಿತರಿಸುತ್ತಿದ್ದ ಪಂಪ್‌ಗಳ ವಿತರಣೆ ಹಲವು ವರ್ಷಗಳಿಂದ ನಿಲ್ಲಿಸಲಾಗಿದೆ. ಹೀಗಾಗಿ ರೈತರು ಹರಳು ರೂಪದ ಯೂರಿಯಾ ಬಳಕೆಗೆ ಮುಂದಾಗುತ್ತಿದ್ದಾರೆ’ ಎಂದು ರೈತ ಸಂಗಪ್ಪ ಬಂಡಿ ಅವರು ಯೂರಿಯಾ ಬಳಕೆ ಕುರಿತು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.