ADVERTISEMENT

ಗಜೇಂದ್ರಗಡ: ಕಾಲಕಾಲೇಶ್ವರ ರಥೋತ್ಸವ ಇಂದು

ಚಿತ್ತಾ ನಕ್ಷತ್ರದ ದರ್ಶನದ ನಂತರ ರಥೋತ್ಸವಕ್ಕೆ ಚಾಲನೆ: ಸಾವಿರಾರು ಭಕ್ತರು ಭಾಗಿ

ಶ್ರೀಶೈಲ ಎಂ.ಕುಂಬಾರ
Published 12 ಏಪ್ರಿಲ್ 2025, 6:29 IST
Last Updated 12 ಏಪ್ರಿಲ್ 2025, 6:29 IST
ಕಾಲಕಾಲೇಶ್ವರ ದೇವಸ್ಥಾನದ ವಿಹಂಗ ನೋಟ (ಸಂಗ್ರಹ ಚಿತ್ರ)
ಕಾಲಕಾಲೇಶ್ವರ ದೇವಸ್ಥಾನದ ವಿಹಂಗ ನೋಟ (ಸಂಗ್ರಹ ಚಿತ್ರ)   

ಗಜೇಂದ್ರಗಡ: ‘ದಕ್ಷಿಣ ಕಾಶಿ’ ಎಂದೇ  ಖ್ಯಾತವಾಗಿರುವ ಸಮೀಪದ ಕಾಲಕಾಲೇಶ್ವರ ಗ್ರಾಮದ ಕಾಲಕಾಲೇಶ್ವರನ ರಥೋತ್ಸವ ದವನದ ಹುಣ್ಣಿಮೆ ದಿನ (ಏ.12)  ನಡೆಯಲಿದೆ.

ಅಂದು ಬೆಳಿಗ್ಗೆ ಕಾಲಕಾಲೇಶ್ವರನಿಗೆ ವಿಶೇಷ ಪೂಜೆ ನಡೆಯಲಿದೆ. ಸಂಜೆ ಆಕಾಶದಲ್ಲಿ ಚಿತ್ತಾ ನಕ್ಷತ್ರದ ದರ್ಶನವಾಗುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದೇವರ ದರ್ಶನಕ್ಕೆ ಬರುವ ಭಕ್ತರು ದೇವರಿಗೆ ದವನ ಸಮರ್ಪಿಸಿ, ಪೂಜೆ ಸಲ್ಲಿಸುತ್ತಾರೆ. ರಥೋತ್ಸವದ ನಂತರ ದವನ, ಕಬ್ಬುಗಳನ್ನು ಕೊಂಡು ಊರಿಗೆ ಮರಳುತ್ತಾರೆ.

ದವನದ ಹುಣ್ಣಿಮೆ ದಿನ ನಡೆಯುವ ಜಾತ್ರೆಗೆ ಯುಗಾದಿ ಪಾಡ್ಯದಿಂದ ಚಾಲನೆ ದೊರೆಯುತ್ತದೆ. ಅಂದು ರಥದ ಕೋಣೆಯಿಂದ ಬೊಳು ರಥವನ್ನು ಐದು ಹೆಜ್ಜೆ ಎಳೆದು ಪೂಜೆ ಸಲ್ಲಿಸಿ ಭಕ್ತರಿಗೆ ಬೇವು, ಬೆಲ್ಲ ವಿತರಿಸಲಾಗುತ್ತದೆ. ರಥೋತ್ವವದ 9 ದಿನಗಳ ಮೊದಲು ರಾತ್ರಿ ದೇವಸ್ಥಾನದಲ್ಲಿ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ಬಸವ ಪಟ (ಲಗ್ನ ಪತ್ರಿಕೆ) ಕಟ್ಟಲಾಗುತ್ತದೆ. ಅಂದಿನಿಂದ 9 ದಿನ ನಿತ್ಯ ರಾತ್ರಿ ಒಂದೊಂದು ವಾಹನದ ಮೇಲೆ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ಉಚ್ಚಯ್ಯ ಎಳೆಯಲಾಗುತ್ತದೆ.

ADVERTISEMENT

ರಥೋತ್ಸವದ ಹಿಂದಿನ ದಿನ ಮದುವೆ ನಡೆಸಿ ಮರುದಿನ ರಥೋತ್ಸವದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ರಥೋತ್ಸವದ ಹಿಂದಿನ ದಿನ ಸಮೀಪದ ರಾಜೂರು ಗ್ರಾಮದಿಂದ ಕಳಸವನ್ನು ಮೆರವಣಿಗೆಯಲ್ಲಿ ಹೊತ್ತು ತಂದು ರಥದ ಮೇಲಿಟ್ಟು ರಥ ಸಿಂಗರಿಸಲಾಗುತ್ತದೆ. ರಥೋತ್ಸವದ ದಿನ ಸಂಜೆ ರಾಜೂರು ಗ್ರಾಮದಿಂದ ರಥದ ಹಗ್ಗವನ್ನು ಮೆರವಣಿಗೆಯಲ್ಲಿ ತರಲಾಗುತ್ತದೆ. ನಾಡಿನ ವಿವಿಧ ಭಾಗಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. 

ಪಟ್ಟಣದ ಸಮೀಪದ ನಿಸರ್ಗದ ಮಡಿಲಿನಲ್ಲಿರುವ ಕಾಲಕಾಲೇಶ್ವರ ಗ್ರಾಮದ ಬೆಟ್ಟದ ಪಡಿಯಲ್ಲಿ ಲಿಂಗರೂಪಿಯಾಗಿರುವ ಕಾಲಕಾಲೇಶ್ವರನ ಗರ್ಭ ಗುಡಿಯ ಪಕ್ಕದಲ್ಲಿ ಗಗನಾವತಿ ಗವಿ ಇದೆ. ಇಲ್ಲಿ ಋಷಿ ಮುನಿಗಳು ತಪಸ್ಸು ಮಾಡಿದ್ದಾರೆ ಎಂಬ ಪ್ರತೀತಿ ಇದೆ. ಗರ್ಭ ಗುಡಿಯ ಹೊರಬಾಗದಲ್ಲಿ ಅಂತರಗಂಗೆ ಇದ್ದು ಅಲ್ಲಿ ಆಲದ ಮರದ ಬೇರಿನ ಮೂಲಕ ನೀರು ಜಿನುಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಮೇಲೆ ಒಂದು ಪೊಟರೆಯಲ್ಲಿ ನೀರು ಜಿನುಗುತ್ತದೆ. ಇದು ಯುಗಾದಿ ಪಾಡ್ಯದಂದು ನೀರು ಜಿನುಗಿರುವುದನ್ನು ನೋಡಿ ಈ ಭಾಗದ ರೈತರು ಮಳೆ  ನಿರ್ಧರಿಸುತ್ತಾರೆ.
ಯುಗಾದಿ ಪಾಡ್ಯದಂದು ಕುಂಬಾರರು ನೀಡಿದ ಗಡಿಗೆಯಲ್ಲಿ ಸುಣ್ಣ ಹಾಗೂ ಕೆಮ್ಮಣ್ಣು ಹಾಕಿಡುತ್ತಾರೆ. ಇಲ್ಲಿನ ದೈವ ಸುಣ್ಣ, ಕೆಮ್ಮಣ್ಣನ್ನು ತಾನಾಗಿ ಗುಡ್ಡಕ್ಕೆ ಹಚ್ಚಿಕೊಳ್ಳುತ್ತದೆ. ಅದು ಹಿಂಗಾರು ಮತ್ತು ಮುಂಗಾರು ಬೆಳೆಗಳ ಸೂಚನೆ ನೀಡುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ.

ಕಾಲಕಾಲೇಶ್ವರನ ಮೂರ್ತಿ
ಕಾಲಕಾಲೇಶ್ವರ ದೇವಸ್ಥಾನದ ಐತಿಹ್ಯ
ಹಿಂದೆ ಆನೆಗುಂದಿ ಅರಸನು ತನ್ನ ಸೈನ್ಯದೊಂದಿಗೆ ಇಲ್ಲಿ ಬಿಡಾರ ಹೂಡಿದ್ದನಂತೆ. ಆಗ ಒಬ್ಬ ಸಾಧು ರಾಜನ ಬಿಡಾರದ ಹತ್ತಿರ ಬಂದಾಗ ರಾಜ ಅವರನ್ನು ಸತ್ಕರಿಸಿ ನಿಮಗೆ ಏನು ಬೇಕು ಕೇಳಿ? ಎಂದಾಗ ಆ ಸಾಧು ರಾಜನ ಪಟ್ಟದಾನೆಯ ಕೊರಳಲ್ಲಿದ್ದ ಬೃಹತ್ ಗಾತ್ರದ ಗಂಟೆ ಕೇಳಿದ್ದರು. ಆದರೆ ಅದನ್ನು ಹೊರುವ ಶಕ್ತಿ ನಿಮಗಿಲ್ಲ ಎಂದು ರಾಜ ಕುಹಕವಾಡಿದನು. ಬೆಳಗಾಗುವುದರೊಳಗೆ ಆನೆ ಕೊರಳಲ್ಲಿನ ಗಂಟೆ ಮಾಯವಾಗಿತ್ತು. ಇದರಿಂದ ಚಕಿತಗೊಂಡ ರಾಜ ಬೆಟ್ಟದ ತಪ್ಪಲಿನಲ್ಲಿ ಗಂಟೆಯನ್ನು ಹುಡುಕುವಂತೆ ಸೈನಿಕರಿಗೆ ತಿಳಿಸಿದಾಗ ಬೆಟ್ಟದ ತಪ್ಪಲಿನಲ್ಲಿ ಇದ್ದ ಗುಹೆಯಲ್ಲಿ ಉದ್ಬವಲಿಂಗ ಇರುವುದು ತಿಳಿಯಿತು. ಅದೇ ಇಂದಿನ ಕಾಲಕಾಲೇಶ್ವರ ಲಿಂಗವಾಗಿದೆ ಎಂಬ ಪ್ರತೀತಿ ಇದೆ. ಇನ್ನೊಂದು ಐತಿಹ್ಯದ ಪ್ರಕಾರ ಬೆಟ್ಟದಲ್ಲಿ ನೆಲೆಸಿದ್ದ ಗಜಾಸುರನೆಂಬ ರಾಕ್ಷಸ ನೆಲೆಸಿದ್ದನೆಂದು ಅವನ ಉಪಟಳ ತಾಳಲಾರದೆ ಋಷಿ ಮುನಿಗಳು ಶಿವನಿಗೆ ಮೊರಯಿಟ್ಟಾಗ ಶಿವನು ಆ ರಾಕ್ಷಸನನ್ನು ಸಂಹರಿಸಿ ಅವನ ಚರ್ಮವನ್ನು ಸುತ್ತಿಕೊಂಡಿದ್ದರಿಂದ ಗಜಚರ್ಮಾಂಬರನಾಗಿ ಇಲ್ಲಿಯೇ ನೆಲೆಸಿದನೆಂದು ಹೇಳಲಾಗುತ್ತದೆ. ಇಲ್ಲಿನ ಗರ್ಭಗೃಹದ ಬದಿಯಲ್ಲಿರುವ ಶಾಸನ ಯಲಬುರ್ಗಿಯ ಸಿಂಧರು ಈ ದೇವಾಲಯಕ್ಕೆ ದತ್ತಿ ನೀಡಿರುವ ಕುರಿತು ಮಾಹಿತಿ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.