ADVERTISEMENT

ಗಜೇಂದ್ರಗಡ: ರೇಷ್ಮೆ ಕೃಷಿಯಲ್ಲಿ ಯಶ ಕಂಡ ಹೊಸಮನಿ ಕುಟುಂಬ

ಶ್ರಮಕ್ಕೆ ತಕ್ಕ ಪ್ರತಿಫಲ: ವಾರ್ಷಿಕವಾಗಿ ₹7 ಲಕ್ಷದಿಂದ ₹8 ಲಕ್ಷ ಲಾಭ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 4:13 IST
Last Updated 6 ಜೂನ್ 2025, 4:13 IST
ಗಜೇಂದ್ರಗಡ ಸಮೀಪದ ಗೌಡಗೇರಿ ಗ್ರಾಮದಲ್ಲಿರುವ ಹೊಸಮನಿ ಸಹೋದರರ ರೇಷ್ಮೆ ಸಾಕಣೆ ಕೇಂದ್ರ
ಗಜೇಂದ್ರಗಡ ಸಮೀಪದ ಗೌಡಗೇರಿ ಗ್ರಾಮದಲ್ಲಿರುವ ಹೊಸಮನಿ ಸಹೋದರರ ರೇಷ್ಮೆ ಸಾಕಣೆ ಕೇಂದ್ರ   

ಗಜೇಂದ್ರಗಡ: ಸಮೀಪದ ಗೌಡಗೇರಿ ಗ್ರಾಮದ ರಾಜಪ್ಪ ಹನಮಂತಪ್ಪ ಹೊಸಮನಿ, ರಾಮಚಂದ್ರಪ್ಪ ಹನಮಂತಪ್ಪ ಹೊಸಮನಿ ಸಹೋದರರು ರೇಷ್ಮೆ ಕೃಷಿಯಲ್ಲಿ ಉತ್ತಮ ಪ್ರಗತಿ ಸಾಧಿಸಿ ಕೈ ತುಂಬ ಆದಾಯ ಗಳಿಸುವ ಮೂಲಕ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.

ಗ್ರಾಮದಲ್ಲಿರುವ ನಾಲ್ಕು ಎಕರೆ ಜಮೀನಿನ ಪೈಕಿ ಮೂರು ಎಕರೆ ಜಮೀನಿನಲ್ಲಿ ಮೂರು ವರ್ಷಗಳಿಂದ ಹಿಪ್ಪು ನೇರಳೆ ಬೆಳೆದು, ರೇಷ್ಮೆ ಕೃಷಿ ಮಾಡಿಕೊಂಡಿದ್ದಾರೆ. ಉಳಿದ ಒಂದು ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಆರಂಭದಲ್ಲಿ ಬೆಳಗಾವಿ ಜಿಲ್ಲೆಯ ಖಾನಟ್ಟಿಯಿಂದ ರೇಷ್ಮೆ ಮೊಟ್ಟೆಗಳನ್ನು ತರುತ್ತಿದ್ದ ಅವರು, ಇತ್ತೀಚೆಗೆ ಗದಗ ಜಿಲ್ಲೆಯ ಮಾಗಡಿಯಿಂದ ತರುತ್ತಿದ್ದಾರೆ. ಜಮೀನಿನಲ್ಲಿ ರೇಷ್ಮೆ ಇಲಾಖೆ ಸಹಾಯಧನದಿಂದ ದೊಡ್ಡ ರೇಷ್ಮೆ ಸಾಕಣೆ ಕೇಂದ್ರ ನಿರ್ಮಿಸಿಕೊಂಡಿದ್ದು, ಎರಡು ವಿಭಾಗಗಳನ್ನು ಮಾಡಿದ್ದಾರೆ. ಒಂದು ಫಸಲು ಬರುತ್ತಿದ್ದಂತೆ ಮತ್ತೊಂದರಲ್ಲಿ ಮೊಟ್ಟೆಗಳನ್ನು ತಂದು ಕೃಷಿ ಮಾಡುತ್ತಿದ್ದಾರೆ. ಹೀಗಾಗಿ ವರ್ಷದಲ್ಲಿ 7ರಿಂದ 8 ಫಸಲು ತೆಗೆಯುತ್ತಿದ್ದಾರೆ.

ADVERTISEMENT

ಪ್ರತಿ ಬಾರಿ 250 ಮೊಟ್ಟೆಗಳಿಗೆ 1ರಿಂದ 1.50 ಕ್ವಿಂಟಲ್‌ ಇಳುವರಿ ಬರುತ್ತಿದ್ದು, ರೇಷ್ಮೆ ಗೂಡುಗಳನ್ನು ರಾಮನಗರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಫಸಲಿಗೆ ಖರ್ಚು ಕಳೆದು ಸುಮಾರು ₹1 ಲಕ್ಷ ಲಾಭ ಗಳಿಸುವ ಮೂಲಕ ವಾರ್ಷಿಕವಾಗಿ ₹7 ಲಕ್ಷದಿಂದ ₹8 ಲಕ್ಷ ಲಾಭ ಗಳಿಸುತ್ತಿದ್ದಾರೆ. ರೇಷ್ಮೆ ಕೃಷಿ ಜತೆಗೆ ಹೈನುಗಾರಿಕೆ, ಟಗರು ಸಾಕಣೆ ಮಾಡುತ್ತಿದ್ದಾರೆ. ಇವರ ರೇಷ್ಮೆ ಕೃಷಿಗೆ ಕುಟುಂಬಸ್ಥರೂ ಸಾಥ್‌ ನೀಡುತ್ತಿದ್ದಾರೆ.

‘ರೇಷ್ಮೆ ಕೃಷಿಯಲ್ಲಿ ರೇಷ್ಮೆ ಮೊಟ್ಟೆಗಳ ಖರೀದಿ, ನಿರ್ವಹಣೆಗೆ ಸುಮಾರು ₹20 ಸಾವಿರ ಖರ್ಚಾಗುತ್ತದೆ. 22ರಿಂದ 25 ದಿನಗಳ ಕಾಲ ಕಾಳಜಿಯಿಂದ ರೇಷ್ಮೆ ಹುಳುಗಳನ್ನು ಜೋಪಾನ ಮಾಡಿದರೆ ಒಂದು ಫಸಲಿಗೆ ಸರಾಸರಿ ₹1 ಲಕ್ಷದಿಂದ ₹1.50 ಲಕ್ಷ ಲಾಭ ಪಡೆಯಬಹುದಾಗಿದೆ. ರೇಷ್ಮೆಗೂಡುಗಳಿಗೆ ರಾಮನಗರದಲ್ಲಿ ಉತ್ತಮ ಬೆಲೆ ಸಿಗುತ್ತದೆ. ಕೆಲವು ಬಾರಿ ಬೆಲೆ ಕುಸಿತವಾದಾಗ ಲಾಭ ಕಡಿಮೆಯಾಗುತ್ತದೆ. ಆದರೆ ಮಾರಾಟ ಮಾಡಿದ ಕೆಲವೇ ಗಂಟೆಗಳಲ್ಲಿ ನಮ್ಮ ಖಾತೆ ಹಣ ಜಮೆಯಾಗುತ್ತದೆ. ಹೀಗಾಗಿ ರೇಷ್ಮೆ ಕೃಷಿ ಲಾಭದಾಯಕ’ ಎನ್ನುತ್ತಾರೆ ರೇಷ್ಮೆ ಕೃಷಿ ಮಾಡುತ್ತಿರುವ ರಾಜಪ್ಪ ಹೊಸಮನಿ.

ನಮ್ಮ ಅಜ್ಜನ ಕಾಲದಿಂದ ನಮ್ಮ ಕುಟುಂಬ ಸಾಂಪ್ರದಾಯಿಕ ಕೃಷಿ ಮಾಡಿಕೊಂಡು ಬಂದಿದೆ. ಆದರೆ ಅದು ಅಷ್ಟೇನು ಲಾಭದಾಯಕವಾಗಿಲ್ಲ. ಆದರೆ ಪರಿಶ್ರಮ ಕಾಳಜಿ ಶ್ರದ್ಧೆಯಿಂದ ರೇಷ್ಮೆ ಕೃಷಿ ಮಾಡಿದರೆ ಕೈತುಂಬ ಲಾಭ ಪಡೆಯಬಹುದಾಗಿದೆ
ರಾಜಪ್ಪ ಹೊಸಮನಿ, ರೈತ ಗೌಡಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.