ಗಜೇಂದ್ರಗಡ: ಸಮೀಪದ ಕುಂಟೋಜಿ ಗ್ರಾಮದ ಕಾರುಡಗಿಮಠ ಕುಟುಂಬ ತಮ್ಮ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳ ಜೊತೆಗೆ ಸಾಂಪ್ರದಾಯಿಕ ಬೆಳೆ ಬೆಳೆಯುವ ಮೂಲಕ ಉತ್ತಮ ಲಾಭದ ಪಡೆಯುತ್ತಿದ್ದಾರೆ.
ಗ್ರಾಮದ ವೀರಯ್ಯ ಕಾರುಡಗಿಮಠ ಒಟ್ಟು 27 ಎಕರೆ ಜಮೀನಿನಲ್ಲಿ 3 ಕೊಳವೆಬಾವಿಗಳಿದ್ದು, 5 ಇಂಚು ನೀರು ಸಿಗುತ್ತಿದೆ. ಎರಡು ಕೊಳವೆಬಾವಿಗಳಿಗೆ ಮಳೆನೀರು ಸಂಗ್ರಹ ವ್ಯವಸ್ಥೆ ಕಲ್ಪಿಸಿದ್ದು, ಮಳೆಗಾಲದಲ್ಲಿ ಹಳ್ಳದ ನೀರು ಕೊಳವೆಬಾವಿಗೆ ಶೇಖರಣೆ ಆಗುತ್ತದೆ. ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಾರೆ.
8 ಎಕರೆ ಜಮೀನಿನಲ್ಲಿ ರತ್ನಗಿರಿ ತಳಿಯ ಆಪೂಸ್ ಮಾವು, 8 ಎಕರೆ ಜಮೀನಿನಲ್ಲಿ ಕ್ರಿಕೆಟ್ ಬಾಲ್ ಹಾಗೂ ಕಾಲಿಪತ್ತಿ ತಳಿಯ ಚಿಕ್ಕು, 5 ಎಕರೆಯಲ್ಲಿ ತೆಂಗು, 6 ಎಕರೆ ಜಮೀನಿನಲ್ಲಿ ಬೀಜೋತ್ಪಾದನೆ ಹತ್ತಿ, ತೊಗರಿ, ಗೋವಿನಜೋಳ ಸೇರಿದಂತೆ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿದ್ದಾರೆ.
ಜಮೀನಿನ ಸುತ್ತಲೂ 3 ಸಾವಿರ ತೇಗದ ಮರಗಳಿವೆ. ತೋಟಗಳಿಂದ ಕಳೆದ 15 ವರ್ಷಗಳಿಂದ ಫಸಲು ಬರುತ್ತಿದ್ದು, ವಾರ್ಷಿಕವಾಗಿ ಮಾವಿನ ತೋಟದಿಂದ ₹5 ಲಕ್ಷ, ಚಿಕ್ಕು ತೋಟದಿಂದ ₹4 ಲಕ್ಷ ಆದಾಯ ಹಾಗೂ ತೆಂಗಿನ ತೋಟದಿಂದ ಎಳನೀರು, ಕಾಯಿಗಳು ಲಭಿಸುತ್ತಿವೆ.
ತೋಟದಲ್ಲಿ 4 ಹಸುಗಳಿದ್ದು ಹೈನುಗಾರಿಕೆಯಿಂದಲೂ ತಿಂಗಳಿಗೆ ಸುಮಾರು ₹30 ಸಾವಿರ ಲಾಭ ಬರುತ್ತಿದೆ. ವೀರಯ್ಯ ಕಾರುಡಗಿಮಠ ಅವರು ಸಮಗ್ರ ಕೃಷಿಯಿಂದ ವಾರ್ಷಿಕವಾಗಿ ₹12 ಲಕ್ಷ ಆದಾಯ ಪಡೆಯುತ್ತಿದ್ದಾರೆ. ವೀರಯ್ಯ ಅವರ ಕೃಷಿ ಕಾಯಕದಲ್ಲಿ ಅವರ ಪತ್ನಿ ಶಾಂತಾ ಕಾರುಡಗಿಮಠ ಹಾಗೂ ಅವರ ಅಳಿಯ ಕಲ್ಲಯ್ಯ ಅಂಟಿಮಠ ಸಹಾಯ ಮಾಡುತ್ತಿದ್ದಾರೆ.
ವೀರಯ್ಯ ಕಾರುಡಗಿಮಠ
ಕೃಷಿಯಲ್ಲಿ ಕೂಲಿಕಾರರ ಮೇಲಿನ ಅವಲಂಬನೆ ಕಡಿಮೆ ಮಾಡಿ ಮನೆಯವರೇ ದುಡಿದರೆ ಹೆಚ್ಚು ಲಾಭ ಸಿಗುತ್ತದೆ. ಸಮಗ್ರ ಕೃಷಿಯಿಂದ ಲಾಭದ ಜೊತೆಗೆ ನೆಮ್ಮದಿಯೂ ಲಭಿಸುತ್ತಿದೆ
–ವೀರಯ್ಯ ಕಾರುಡಗಿಮಠ ರೈತ ಕುಂಟೋಜಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.