ADVERTISEMENT

‘ಪುಸ್ತಕ ಸಮೃದ್ಧಿ ಇದ್ದಲ್ಲಿ ಶಾಂತಿ ನೆಲೆ’

ವಸುಧೇಂದ್ರಗೆ ‘ಗಳಗನಾಥ’, ಪ್ರೊ. ತೆಲಗಾವಿಗೆ ‘ರಾಜಪುರೋಹಿತ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:03 IST
Last Updated 11 ಅಕ್ಟೋಬರ್ 2021, 2:03 IST
ಗದಗ ನಗರದ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಲಕ್ಷ್ಮಣ ತೆಲಗಾವಿ ಅವರಿಗೆ ‘ರಾಜಪುರೋಹಿತ’ ಪ್ರಶಸ್ತಿ ಹಾಗೂ ಲೇಖಕ ವಸುಧೇಂದ್ರ ಅವರಿಗೆ ‘ಗಳಗನಾಥ’ ಪ್ರಶಸ್ತಿಯನ್ನು ಶಾಸಕ ಎಚ್‌.ಕೆ.ಪಾಟೀಲ ಪ್ರದಾನ ಮಾಡಿದರು. ಡಾ.ಕೆ.ಆರ್‌.ಕಮಲೇಶ್, ಪ್ರತಿಷ್ಠಾನದ ಅಧ್ಯಕ್ಷ ದುಷ್ಯಂತ ನಾಡಗೌಡ, ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಇದ್ದಾರೆ
ಗದಗ ನಗರದ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಲಕ್ಷ್ಮಣ ತೆಲಗಾವಿ ಅವರಿಗೆ ‘ರಾಜಪುರೋಹಿತ’ ಪ್ರಶಸ್ತಿ ಹಾಗೂ ಲೇಖಕ ವಸುಧೇಂದ್ರ ಅವರಿಗೆ ‘ಗಳಗನಾಥ’ ಪ್ರಶಸ್ತಿಯನ್ನು ಶಾಸಕ ಎಚ್‌.ಕೆ.ಪಾಟೀಲ ಪ್ರದಾನ ಮಾಡಿದರು. ಡಾ.ಕೆ.ಆರ್‌.ಕಮಲೇಶ್, ಪ್ರತಿಷ್ಠಾನದ ಅಧ್ಯಕ್ಷ ದುಷ್ಯಂತ ನಾಡಗೌಡ, ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಇದ್ದಾರೆ   

ಗದಗ: ‘ಯಾವ ಊರು, ದೇಶದಲ್ಲಿ ಪುಸ್ತಕ ಪ್ರಕಟಣೆ, ಓದು, ಪ್ರಶಸ್ತಿ, ಪುರಸ್ಕಾರ, ಲೇಖಕರಿಗೆ ಮೆಚ್ಚುಗೆಯ ಮಾತುಗಳು ಸಮೃದ್ಧವಾಗಿ ಸಿಗುತ್ತವೆಯೋ ಅಲ್ಲಿ ಶಾಂತಿ ನೆಲೆಸಿರುತ್ತದೆ’ ಎಂದು ಲೇಖಕ ವಸುಧೇಂದ್ರ ಅಭಿಪ್ರಾಯಪಟ್ಟರು.

ನಗರದ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಹಾವೇರಿಯ ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನದ ವತಿಯಿಂದ ಭಾನುವಾರ ಆಯೋಜಿಸಿದ್ದ ಗಳಗನಾಥ ಮತ್ತು ರಾಜಪುರೋಹಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ‘ಗಳಗನಾಥ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘100 ವರ್ಷಗಳ ಕೆಳಗೆ ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಳಗನಾಥ ಮತ್ತು ರಾಜಪುರೋಹಿತರು ಅಂತರ್ಜಾಲದಂತೆ ಕೆಲಸ ನಿರ್ವಹಿಸಿದ್ದಾರೆ. ಈ ಇಬ್ಬರೂ ಮಹನೀಯರು ಜ್ಞಾನ ಸಂಪಾದನೆಗಾಗಿ ಊರೂರು ಅಲೆದಿದ್ದಾರೆ. ಗಳಗನಾಥರ ಬದುಕು ನೋಡಿದಾಗ ಅವರ ಜೀವನಕ್ಕೂ ನನ್ನ ಬದುಕಿಗೂ ಸಂಬಂಧವಿದೆ ಅಂತ ಅನಿಸುತ್ತದೆ. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ಖುಷಿ ನೀಡಿದೆ’ ಎಂದರು.

ADVERTISEMENT

‘ರಾಜಪುರೋಹಿತ’ ಪ್ರಶಸ್ತಿ ಸ್ವೀಕರಿಸಿದ ಪ್ರೊ. ಲಕ್ಷ್ಮಣ ತೆಲಗಾವಿ ಮಾತನಾಡಿ, ‘ಕನ್ನಡ ಸಾಹಿತ್ಯ ಕೃಷಿ ನಡೆಸಿದ ಗಳಗನಾಥ ಮತ್ತು ರಾಜಪುರೋಹಿತರನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ಈವರೆಗೆ ಪೂರ್ಣಪ್ರಮಾಣದಲ್ಲಿ ಆಗಿಲ್ಲ. ಇದು ನೋವಿನ ಸಂಗತಿ. ರಾಜಪುರೋಹಿತರ ಕೆಲಸಗಳು ಚದುರಿ ಹೋಗಿದ್ದು, ಅವುಗಳನ್ನು ಸಂಶೋಧಿಸುವ ಅಗತ್ಯವಿದೆ’ ಎಂದು ಹೇಳಿದರು.

‘ಪ್ರಶಸ್ತಿಯ ಮೊತ್ತ ₹50 ಸಾವಿರವನ್ನು ಕರ್ನಾಟಕ ಇತಿಹಾಸ ಅಕಾಡೆಮಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪ್ರಶಸ್ತಿಗೆ ನೀಡಲಾಗುವುದು’ ಎಂದು ಪ್ರಕಟಿಸಿದರು.

ಡಾ. ಕೆ.ಕಮಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ ಮಾತನಾಡಿದರು. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ವಿಕ್ರಮ ವಿಸಾಜಿ ಹಾಗೂ ಚಿತ್ರದುರ್ಗದ ಪ್ರೊ. ಮಹಂತೇಶ್ ಎಸ್. ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು.

ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ದುಷ್ಯಂತ ನಾಡಗೌರ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಸದಸ್ಯ ಜೆ.ಕೆ.ಜಮಾದಾರ ನಿರೂಪಿಸಿದರು. ಉಮೇಶ ಬಳಿಗಾರ ವಂದಿಸಿದರು.

ಸಮಗ್ರ ಸಂಪುಟ ಪ್ರಕಟಿಸಿ: ಶಾಸಕ

ಗದಗ ಜಿಲ್ಲೆ ಇತಿಹಾಸದ ಜತೆಗೆ ಸಾಹಿತ್ಯಿಕವಾಗಿಯೂ ಶ್ರೀಮಂತವಾಗಿದೆ. ಇಂತಹ ಊರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ಇಬ್ಬರು ಸಾಧಕರಿಗೂ ಇದು ವಿಶೇಷ ಕ್ಷಣ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

‘ರಾಜಕೀಯ ಇಚ್ಛಾಶಕ್ತಿ ಹಾಗೂ ಆಡಳಿತಾತ್ಮಕ ಸಹಕಾರದಿಂದ ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನ ನಿರ್ಮಾಣಗೊಂಡಿತು. ಪ್ರತಿಷ್ಠಾನದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಸಿಗುವ ಭರವಸೆ ಇದೆ. ಅದನ್ನು ಬಳಸಿಕೊಂಡು ಕನ್ನಡ ಸೇವೆಗೆ ಮೀಸಲಾಗುವ, ಸಂಶೋಧನೆಗೆ ಪ್ರೇರಣೆ ನೀಡುವ ತಾಣವನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ರಾಜಪುರೋಹಿತರ ಅಪ್ರಕಟಿತ ಸಾಹಿತ್ಯ ಸಾಕಷ್ಟಿದ್ದು, ಅದನ್ನು ಮುತುವರ್ಜಿಯಿಂದ ಸಂಶೋಧಿಸುವ ಸಂಶೋಧರನ್ನು ಹುಡುಕಬೇಕಿದೆ. ಒಂದು ವರ್ಷದಲ್ಲಿ ಅವರ ಬದುಕು, ಕೆಲಸ ಕುರಿತಾದ ಸಮಗ್ರ ಸಂಪುಟ ಪ್ರಕಟಿಸುವ ನಿಟ್ಟಿನಲ್ಲಿ ಪ್ರತಿಷ್ಠಾನ ಯೋಚಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.