ADVERTISEMENT

ಗಾಂಧಿ ಚಿಂತನೆ ಅನುಸರಣೆಗೆ ಮಹತ್ವ ನೀಡಿ

ಮಹಾತ್ಮ ಗಾಂಧಿ, ಲಾಲ್‌ಬಹದ್ದೂರ್‌ ಶಾಸ್ತ್ರಿ ಜಯಂತ್ಯುತ್ಸವದಲ್ಲಿ ಪ್ರೊ.ಚಟಪಲ್ಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 3:25 IST
Last Updated 3 ಅಕ್ಟೋಬರ್ 2021, 3:25 IST
ನಾಗಾವಿ ಬಳಿ ಇರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಆವರಣದಲ್ಲಿನ ಸಾಬರಮತಿ ಆಶ್ರಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ವಿಷ್ಣುಕಾಂತ ಎಸ್.ಚಟಪಲ್ಲಿ ಮಾತನಾಡಿದರು
ನಾಗಾವಿ ಬಳಿ ಇರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಆವರಣದಲ್ಲಿನ ಸಾಬರಮತಿ ಆಶ್ರಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ವಿಷ್ಣುಕಾಂತ ಎಸ್.ಚಟಪಲ್ಲಿ ಮಾತನಾಡಿದರು   

ಗದಗ: ‘ಗಾಂಧಿ ವಿಚಾರಗಳು ಮತ್ತು ಚಿಂತನೆಗಳ ಜತೆಗೆ ಅನುಸರಣೆಗೂ ಹೆಚ್ಚಿನ ಮಹತ್ವ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಸಾಬರಮತಿ ಆಶ್ರಮವು ಭವಿಷ್ಯದಲ್ಲಿ ಸ್ಫೂರ್ತಿದಾಯಕ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ’ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಷ್ಣುಕಾಂತ ಎಸ್.ಚಟಪಲ್ಲಿ ಹೇಳಿದರು.

ನಾಗಾವಿ ಬಳಿ ಇರುವ ವಿಶ್ವವಿದ್ಯಾಲಯದ ನೂತನ ಆವರಣದಲ್ಲಿನ ಸಾಬರಮತಿ ಅಶ್ರಮದಲ್ಲಿ ಶನಿವಾರ ನಡೆದ 152ನೇ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್‌ಬಹದ್ದೂರ್‌ ಶಾಸ್ತ್ರಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗದಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಅವರು ‘ಅರಿವು ಮತ್ತು ನೆರವು’ ವಿಷಯ ಕುರಿತು ಮಾತನಾಡಿ, ‘ಗ್ರಾಮ ಮಟ್ಟದಲ್ಲಿ ಕಾನೂನಿನ ಅರಿವು ಮೂಡಿಸುವುದು ಇಂದಿನ ಅವಶ್ಯಕತೆಯಾಗಿದೆ. ಗ್ರಾಮೀಣ ಜನತೆಗೆ ಕಾನೂನಿನ ನೆರವು ಉಚಿತವಾಗಿ ತಲುಪಬೇಕು ಎಂಬ ಸದುದ್ದೇಶದಿಂದ ಅ.2ರಂದು ರಾಜ್ಯದಾದ್ಯಂತ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಿದೆ. ಈ ಸೇವೆಯನ್ನು ಗದಗ ಜಿಲ್ಲೆಯಾದ್ಯಂತ ವಿಸ್ತರಿಸಲು ಸಾಬರಮತಿ ಆಶ್ರಮದಲ್ಲಿ ಚಾಲನೆ ನೀಡಿದ್ದು ಖುಷಿಯ ಸಂಗತಿ’ ಎಂದು ಹೇಳಿದರು.

ADVERTISEMENT

ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್ ಸದಸ್ಯ ಡಾ.ಪ್ರಕಾಶ ಭಟ್ ಅವರು ಗಾಂಧಿ ಚಿಂತನೆಗಳ ಅನುಸರಣೆ ಮಹತ್ವ ಕುರಿತು ತಿಳಿಸಿದರು. ಗಾಂಧಿ ಸ್ಮರಣೆ ಅಂಗವಾಗಿ ಆಶ್ರಮದಲ್ಲಿ ಶಿವಯೋಗಿ ಮತ್ತು ಕಲಾ ತಂಡದವರು ಗಾಂಧಿ ಭಜನೆ ಮತ್ತು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಕುಲಸಚಿವ ಪ್ರೊ. ಬಸವರಾಜ ಎಲ್.ಲಕ್ಕಣ್ಣವರ, ವಿಶೇಷಾಧಿಕಾರಿ ಉಮೇಶ ಬಾರಕೇರ, ತರಬೇತಿ, ಪ್ರಕಟಣೆ ಮತ್ತು ಮೇಲ್ವಿಚಾರಣೆ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಅಬ್ದುಲ್ ಅಜೀಜ್ ಮುಲ್ಲಾ, ಸಂಶೋಧನೆ ಮತ್ತು ಅನ್ವೇಷಣಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಗಿರೀಶ್‌ ದೀಕ್ಷಿತ್, ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಾಬರಮತಿ ಆಶ್ರಮದ ಸಂಚಾಲಕ ಪ್ರಕಾಶ ಎಸ್. ಮಾಚೇನಹಳ್ಳಿ ನಿರೂಪಿಸಿದರು. ಆಶ್ರಮದ ಪ್ರಶಿಕ್ಷಣಾರ್ಥಿ ದೇವರಾಜ ದೊಡ್ಡಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.