ಗದಗ: ‘ಮಹಾತ್ಮ ಗಾಂಧೀಜಿ ವಿಶ್ವದ ಮಹಾನ್ ಮಾನವತಾವಾದಿಯಾಗಿದ್ದು, ಅವರ ತತ್ವಾದರ್ಶಗಳು ಮನುಕುಲಕ್ಕೆ ದಾರಿ ದೀಪವಾಗಿವೆ’ ಎಂದು ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಗಂಗಾಧರ ಹಿಡಿಕಿಮಠ ಹೇಳಿದರು.
ಪಿಜಿಎಎಸ್ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸಂಗೀತ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗಾಂಧೀಜಿಯವರು ಯಾವಾಗಲೂ ತಾವು ಮಹಾತ್ಮ ಅಲ್ಲ ಅಲ್ಪಾತ್ಮ ಎಂದು ತಮ್ಮನ್ನು ತಾವು ಕರೆದುಕೊಂಡು, ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳಾದ ತತ್ವರಹಿತ ರಾಜಕಾರಣ, ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚರಿತ್ರೆ ಇಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ, ತ್ಯಾಗವಿಲ್ಲದ ಪೂಜೆ ಸಮಾಜದ ಅಧಃಪತನಕ್ಕೆ ಕಾರಣವಾಗುತ್ತದೆ’ ಎಂದು ಹೇಳಿದರು.
ವಯಲಿನ್ ವಾದಕ ನಾರಾಯಣ್ ಹಿರೇಕೊಳಿಚಿ ಮಾತನಾಡಿ, ‘ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಜನಾಂದೋಲನ ರೂಪಿಸಿ, ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಧೀಮಂತ ನಾಯಕರಾಗಿದ್ದಾರೆ. ಅವರು ಸತ್ಯ, ಶಾಂತಿ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು’ ಎಂದು ಹೇಳಿದರು.
ಸಿತಾರ್ ವಾದಕ ರಾಜು ಹಿರೇಮಠ, ವೈ.ಆರ್.ಮೂಲಿಮನಿ, ವಿ.ಕೆ.ಜೋಶಿ, ಕೊಡಗಾನೂರ ಹನುಮಂತ, ಎಚ್.ಎಫ್.ಓಲೇಕಾರ್, ವಿ.ಎಂ.ಪಟ್ಟದಕಲ್, ಬಿ.ಎಚ್.ಜೋಕರೆಡ್ಡಿ, ಎಸ್.ಎಸ್.ಗಡ್ಡದಮಠ ಉಪಸ್ಥಿತರಿದ್ದರು. ಎನ್.ವಿ. ಅಕ್ಕಸಾಲಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.