ADVERTISEMENT

ಮಣ್ಣಿನ ಗಣೇಶ; ಹೆಚ್ಚುತ್ತಿರುವ ಜಾಗೃತಿ

ಪಿಒಪಿ ನಿಷೇಧಿಸಲು ಜಿಲ್ಲಾಡಳಿತದಿಂದ ಪರಿಣಾಮಕಾರಿ ಕ್ರಮ

ವಿಜಯ ಸಣಾಪುರ
Published 27 ಆಗಸ್ಟ್ 2019, 14:41 IST
Last Updated 27 ಆಗಸ್ಟ್ 2019, 14:41 IST
ಗದುಗಿನ ಟ್ಯಾಗೋರ್‌ ರಸ್ತೆಯಲ್ಲಿರುವ ಎಸ್.ಬಿ.ಕಿತ್ತೂರ ಗಣೇಶ ತಯಾರಿಕ ಮಂಡಳಿಯಲ್ಲಿ, ಮೂರ್ತಿಗಳಿಗೆ ಬಣ್ಣ ಲೇಪಿಸುತ್ತಿರುವ ಕೆಲಸಗಾರರು
ಗದುಗಿನ ಟ್ಯಾಗೋರ್‌ ರಸ್ತೆಯಲ್ಲಿರುವ ಎಸ್.ಬಿ.ಕಿತ್ತೂರ ಗಣೇಶ ತಯಾರಿಕ ಮಂಡಳಿಯಲ್ಲಿ, ಮೂರ್ತಿಗಳಿಗೆ ಬಣ್ಣ ಲೇಪಿಸುತ್ತಿರುವ ಕೆಲಸಗಾರರು   

ಗದಗ: ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಮತ್ತು ಬಳಕೆ ಉತ್ತೇಜಿಸಲು ಜಿಲ್ಲಾಡಳಿತವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡ ನಂತರ, ಕಳೆದ 4 ವರ್ಷಗಳಿಂದ ಜಿಲ್ಲೆಯಲ್ಲಿ ಪಿಒಪಿ (ಪ್ಲಾಸ್ಟರ್‌ ಆಪ್‌ ಪ್ಯಾರೀಸ್‌) ಮೂರ್ತಿಗಳ ಬಳಕೆ ಗಣನೀಯವಾಗಿ ತಗ್ಗಿದೆ.

ಪಿಒಪಿ ಮೂರ್ತಿಗಳನ್ನು ನಿಷೇಧಿಸಿದ ಜಿಲ್ಲಾಡಳಿತವು, ಇದಕ್ಕೆ ಪರ್ಯಾಯವಾಗಿ ಮಣ್ಣಿನಮೂರ್ತಿ ತಯಾರಕರಿಗೆ ಅನುಕೂಲ ಕಲ್ಪಿಸಲು ಒಂದೇ ಸೂರಿನಡಿ ಮಾರಾಟ ಮಳಿಗೆಯ ಸೌಲಭ್ಯ ಒದಗಿಸಿತ್ತು. ಈ ಕ್ರಮದಿಂದಾಗಿ ಸಾರ್ವಜನಿಕರಿಗೆ ಒಂದೇ ಕಡೆ ತಮಗೆ ಬೇಕಾದ ಅಳತೆ, ಗಾತ್ರ, ವಿನ್ಯಾಸದ ಪರಿಸರಸ್ನೇಹಿ ಮೂರ್ತಿಗಳು ಸ್ಪರ್ಧಾತ್ಮಕ ದರದಲ್ಲಿ ಲಭಿಸುವಂತಾಯಿತು.

ಮೊದಲು ಗಣೇಶ ಮೂರ್ತಿ ತಯಾರಕರು ಮೂರ್ತಿ ಮಾರಾಟಕ್ಕಾಗಿ ನಗರದಲ್ಲಿ 10ರಿಂದ 15ದಿನಗಳವರೆಗೆ ಮಳಿಗೆ ಪಡೆಯಬೇಕೆಂದರೆ ₹15ರಿಂದ ₹20 ಸಾವಿರ ಬಾಡಿಗೆ ಪಾವತಿಸಬೇಕಿತ್ತು. ಜಿಲ್ಲಾಡಳಿತದ ಕ್ರಮದಿಂದ ಮಾರಾಟಗಾರರಿಗೆ ಬಾಡಿಗೆ ಹೊರೆ ತಪ್ಪಿದೆ. ನಗರದ ವ್ಯಾಪಾರಿಗಳು ಮಾತ್ರವಲ್ಲ, ಧಾರವಾಡ, ಹಾವೇರಿ, ಲಕ್ಷ್ಮೇಶ್ವರ, ಕುನ್ನೂರು, ಗುಡಿಗೇರಿಯಿಂದಲೂ ವ್ಯಾಪಾರಿಗಳು ಇಲ್ಲಿಗೆ ಮಣ್ಣಿನ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಾರೆ.

ADVERTISEMENT

ಕೈಯಿಂದಲೇ ತಯಾರಿ: ಇಲ್ಲಿನ ಟ್ಯಾಗೋರ್‌ ರಸ್ತೆಯಲ್ಲಿನ ಎಸ್.ಬಿ. ಕಿತ್ತೂರ ಗಣೇಶ ಮೂರ್ತಿ ತಯಾರಿಕ ಮಂಡಳಿಯಲ್ಲಿ ಬಣ್ಣ ಬಣ್ಣದ ಮೂರ್ತಿಗಳು ತಲೆ ಎತ್ತಿವೆ. ವಿಶೇಷವೆಂದರೆ ಇಲ್ಲಿ ಯಾವುದೇ ಅಚ್ಚನ್ನು ಬಳಸದೆ, ಕೈಯಿಂದಲೇ ಮೂರ್ತಿ ತಯಾರಿಸುತ್ತಾರೆ. ಜೇಡಿ ಮಣ್ಣಿನೊಂದಿಗೆ ಹತ್ತಿ ಮಿಶ್ರ ಮಾಡಿ ಮೂರ್ತಿ ತಯಾರಿಸುತ್ತಾರೆ.

ಮೂರ್ತಿ ತಯಾರಿಕೆಗೆ ಬೇಕಾದ ಜೇಡಿ ಮಣ್ಣನ್ನು ಶಿಗ್ಗಾಂವಿಯಿಂದ 4 ತಿಂಗಳ ಹಿಂದೆಯೇ ತಂದಿದ್ದಾರೆ. ಗಣೇಶನ ರುಂಡ, ಮುಂಡ, ಕೈ, ಕಾಲುಗಳನ್ನು ಪ್ರತ್ಯೇಕವಾಗಿ ತಯಾರಿಸಿ, ಒಣಗಿಸಿ ನಂತರ ಜೋಡಿಸುತ್ತಾರೆ. ‘ಗಣೇಶಮೂರ್ತಿಯೊಂದು ಸಂಪೂರ್ಣವಾಗಿ ಸಿದ್ಧಗೊಳ್ಳಲು 4 ದಿನ ಬೇಕಾಗುತ್ತದೆ. ಈಗಾಗಲೆ 1500 ರಿಂದ 2000 ಚಿಕ್ಕಗಾತ್ರದ ಮೂರ್ತಿಗಳನ್ನು ತಯಾರಿಸಲಾಗಿದೆ’ ಎಂದು ಕೆಲಸಗಾರ ಮುಸ್ತಾಕ್‌ ಹೇಳಿದರು.

ನಗರದಲ್ಲಿ ಅಂಗೈಯಗಲದ ಗಾತ್ರದಿಂದ ಹಿಡಿದು, 6 ಅಡಿ ಎತ್ತರದವರೆಗಿನ ಗಣೇಶ ವಿಗ್ರಹಗಳು ಲಭ್ಯವಿದೆ. ಮೂರ್ತಿಯ ಗಾತ್ರ, ಎತ್ತರ ಹೆಚ್ಚಿದಂತೆ ಒಡೆಯುವ ಸಾಧ್ಯತೆ ಹೆಚ್ಚು. ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಕಷ್ಟ ಎನ್ನುತ್ತಾರೆ ಕಲಾವಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಲೆ ಏರಿಕೆಯಾಗಿದೆ. ಮುಖ್ಯವಾಗಿ ಮೂರ್ತಿ ತಯಾರಿಕೆಗೆ ಬಳಸುವ ಮಣ್ಣಿನ ಬೆಲೆ ಹೆಚ್ಚಿದೆ. ಕಾರ್ಮಿಕರ ಕೂಲಿಯೂ ಹೆಚ್ಚಿದೆ. ಸಣ್ಣಗಾತ್ರದ ಮೂರ್ತಿಗಳಿಗೆ ₹ 200 ರಿಂದ ಆರಂಭಿಸಿ ದೊಡ್ಡ ಗಾತ್ರದ ಮೂರ್ತಿಗೆ ₹ 15 ಸಾವಿರದವರೆಗೆ ಬೆಲೆ ಇದೆ ಎನ್ನುತ್ತಾರೆ ತಯಾರಕರು.

‘ಮಣ್ಣಿನ ಮೂರ್ತಿಗಳಿಗೆ ಲೇಪಿಸುವ ಬಣ್ಣಗಳು ರಾಸಾಯನಿಕ ರಹಿತವಾಗಿದ್ದು, ಪುಣೆ, ಮುಂಬೈ, ಕೊಲ್ಲಾಪುರದಿಂದ ಇದನ್ನು ತರಿಸುತ್ತೇವೆ. ಗಣೇಶನ ಹಬ್ಬಕ್ಕೆ ಇನ್ನೂ ಎರಡು ತಿಂಗಳು ಇರುವಾಗಲೇ ಮೂರ್ತಿ ತಯಾರಿಕೆ ಆರಂಭಗೊಂಡಿದೆ. ಪುರುಷರಿಗೆ ₹300 ರಿಂದ ₹600, ಮೂರ್ತಿಗಳಿಗೆ ಬಣ್ಣ ಲೇಪಿಸುವ ಮಹಿಳೆಯರಿಗೆ ₹ 200 ಕೂಲಿ ಇದೆ’ ಎಂದು ಮೂರ್ತಿ ತಯಾರಕ ಶರಣಪ್ಪ ಹೇಳಿದರು.

‘ಬಲಬದಿಗೆ ಸೊಂಡಿಲಿರುವ ಬಲಮುರಿ ಗಣೇಶನಿಗೆ ಹೆಚ್ಚಿನ ಬೇಡಿಕೆ ಇದೆ. ನಗರದ ನಿವಾಸಿಗಳು ಮಾತ್ರವಲ್ಲ, ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಇಲ್ಲಿಗೆ ಮೂರ್ತಿಗಳನ್ನು ಖರೀದಿಸಲು ಬರುತ್ತಾರೆ. ಹಬ್ಬಕ್ಕೆ 5 ದಿನಗಳ ಬಾಕಿ ಉಳಿದಿರುವಾಗ ಖರೀದಿ ಭರಾಟೆ ಚುರುಕು ಪಡೆಯುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.