ADVERTISEMENT

ಗಣೇಶ ಚತುರ್ಥಿ: ಸಿದ್ಧತೆ ಜೋರು

ಗದಗ– ಬೆಟಗೇರಿ ಅವಳಿ ನಗರ: ಮಾರುಕಟ್ಟೆಯಲ್ಲಿ ಅಧಿಕವಾದ ಜನ ದಟ್ಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 3:22 IST
Last Updated 27 ಆಗಸ್ಟ್ 2025, 3:22 IST
ಗಣೇಶ ಮೂರ್ತಿ ಖರೀದಿಸಿದ ಗ್ರಾಹಕರು
ಗಣೇಶ ಮೂರ್ತಿ ಖರೀದಿಸಿದ ಗ್ರಾಹಕರು   

ಗದಗ: ಪ್ರಥಮ ಪೂಜಿತ ಗಣೇಶ ಹಬ್ಬ ಆಚರಣೆಗೆ ಗದಗ ಬೆಟಗೇರಿ ಅವಳಿ ನಗರದ ಜನರು ಮಂಗಳವಾರ ಸಂಭ್ರಮದ ಸಿದ್ಧತೆ ನಡೆಸಿದರು. ಚೌತಿ ಅಂಗವಾಗಿ ನಗರದ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಂಡುಬಂತು.

ನಗರದ ನಾಮಜೋಶಿ ರಸ್ತೆಯಲ್ಲಿ ಹಬ್ಬಕ್ಕೆ ಬೇಕಿರುವ ಹೂವು, ಹಣ್ಣು ಮತ್ತು ಬಾಳೆಕಂದುಗಳ ಮಾರಾಟ ಜೋರಾಗಿ ನಡೆಯಿತು. ಸೇವಂತಿಗೆ ಮಾರು ₹60, ಚೆಂಡು ಹೂವು ₹50, ಕನಕಾಂಬರ, ಮಲ್ಲಿಗೆ ₹100ಕ್ಕೆ ಮಾರಾಟವಾಯಿತು. ಸೇಬು ₹180, ದಾಳಿಂಬೆ ₹150, ಮೂಸಂಬಿ ₹80, ಸೀಬೆ ₹60, ಸಪೋಟಾ ₹60ಕ್ಕೆ ಮಾರಾಟವಾದವು.

ಹಬ್ಬದ ಅಂಗವಾಗಿ ಹೂವು ಮತ್ತು ಹಣ್ಣಿದ ದರ ಹೆಚ್ಚಾಗಿತ್ತು. ಗ್ರಾಹಕರು ವ್ಯಾಪಾರಿಗಳ ಬಳಿ ಚೌಕಾಸಿ ನಡೆಸಿ, ಹಬ್ಬದ ಸಾಮಗ್ರಿ ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ADVERTISEMENT

ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ ಹಾಗೂ ಬಟ್ಟೆ ಅಂಗಡಿಗಳಲ್ಲಿ ಜನದಟ್ಟಣೆ ಕಂಡುಬಂತು. ಸಂಚಾರ ಪೊಲೀಸರು ಮಾರುಕಟ್ಟೆ ಪ್ರದೇಶದಲ್ಲಿ ವಾಹನ ದಟ್ಟಣೆ ನಿಯಂತ್ರಿಸಿದರು.

ನಗರದ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಭವನದಲ್ಲಿ ಗಣಪತಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ತಮಗಿಷ್ಟವಾದ ವಿನ್ಯಾಸದ ಮೂರ್ತಿ ಖರೀದಿಸಿದರು. ಕೆಲವರು ಮುಂಗಡ ಹಣ ನೀಡಿ, ಗಣೇಶ ಮೂರ್ತಿಗಳನ್ನು ಕಾಯ್ದಿರಿಸಿದರು.

ಮನೆಯಲ್ಲಿ ಗಣೇಶ ಮೂರ್ತಿಗಳನ್ನು ಕೂರಿಸಲು ಸಣ್ಣ ಸಣ್ಣ ಮೂರ್ತಿಗೆ ಹೆಚ್ಚಿಗೆ ಬೇಡಿಕೆ ಇರುವುದು ಕಂಡುಬಂತು. ಕೆಲವರು ಗೌರಿ ಹಬ್ಬದಂದೇ ಗಣೇಶ ಮೂರ್ತಿಯನ್ನು ಮನೆಗೆ ಕೊಂಡೊಯ್ದರು.

ಗಣೇಶನ ವಿಸರ್ಜನೆಗೆ ಸ್ಥಳ ನಿಗದಿ 

ಆದೇಶಿಸಿದ್ದು ಸಾರ್ವಜನಿಕರು ಗಣೇಶನ ಮೂರ್ತಿಗಳನ್ನು ನಿಗದಿತ ಸ್ಥಳದಲ್ಲೇ ವಿಸರ್ಜನೆ ಮಾಡುವಂತೆ ಸೂಚಿಸಿದೆ. ಬೆಟಗೇರಿ ಭಾಗದ ಅಶೋಕ ರಸ್ತೆಯ ಡಾ. ನೇರ್ಲೆಕರ ದವಾಖಾನೆ ಎದುರಿಗೆ ನಗರಸಭೆಯಿಂದ ಕಟ್ಟಿದ ಟ್ಯಾಂಕ್‌; ಹುಬ್ಬಳ್ಳಿ ರಸ್ತೆ ಮಾನ್ವಿ ಹಳ್ಳದ ಹತ್ತಿರದ ಮಾನ್ವಿಯವರ ತರೆದ ಬಾವಿಯಲ್ಲಿ ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳವರು ಗಣೇಶ ಮೂರ್ತಿಗಳನ್ನು ವಿಸರ್ಜಿಸಬಹುದು. ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ವಿಗ್ರಹಗಳನ್ನು ವಿಸರ್ಜಿಸಲು ಹುಡ್ಕೋ ಕಾಲೊನಿಯ ಹುಣಸೀಮರದ ಶಾಲೆ ಹತ್ತಿರ; ಹುಡ್ಕೋ ಕಾಲೊನಿ ಗಾರ್ಡನ್ ಹತ್ತಿರ; ಆದರ್ಶ ನಗರ; ಖಾನತೋಟ ಭಾವಿ ಸಮೀಪ; ಹಾಲಕೆರೆ ಮಠದ ಹತ್ತಿರ; ಡಿಸಿ ಮಿಲ್‌ ಕಾಂಪೌಂಡ್‌ ಹತ್ತಿರ ಬಸವೇಶ್ವರ ನಗರದ ಕರ್ನಾಟಕ ಚಿತ್ರಮಂದಿರ ಹಿಂದೆ ವಿಠೋಬ ದೇವರ ಗುಡಿ ಸಮೀಪ ಮಸಾರಿ ಭಾಗದ ವಿವೇಕಾನಂದ ನಗರದಲ್ಲಿ ನೀರಿನ ತೊಟ್ಟಿಗಳನ್ನು ಕಟ್ಟಿದ್ದು ನಿಗದಿಪಡಿಸಿದ ಸ್ಥಳಗಳಲ್ಲಿ ವಿಸರ್ಜಿಸಬೇಕು.ಟ್ಯಾಂಕ್‌ ಬಾವಿಗಳಲ್ಲಿ ಪ್ಲಾಸ್ಟಿಕ್‌ ಹೂವು ದಾರ ಇನ್ನಿತರ ಯಾವುದೇ ವಸ್ತುಗಳನ್ನು ಹಾಕಬಾರದು. ಗದಗ ಬೆಟಗೇರಿ ನಗರಸಭೆಯಿಂದ ಇಡಲಾದ ಕಂಟೇನರ್‌ಗಳಲ್ಲಿಯೇ ಹಾಕಿ ಸ್ವಚ್ಛತೆಗೆ ಸಹಕರಿಸಬೇಕು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.