ADVERTISEMENT

‘ಸಂಗೀತ ಕ್ಷೇತ್ರಕ್ಕೆ ಗವಾಯಿ ಕೊಡುಗೆ ಅನನ್ಯ’

ಲಿಂ.ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ 129ನೇ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 2:54 IST
Last Updated 3 ಫೆಬ್ರುವರಿ 2021, 2:54 IST
ಲಿಂ. ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ 129ನೇ ಜಯಂತ್ಯುತ್ಸವವನ್ನು ಕಲ್ಲಯ್ಯಜ್ಜನವರು ಉದ್ಘಾಟಿಸಿದರು
ಲಿಂ. ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ 129ನೇ ಜಯಂತ್ಯುತ್ಸವವನ್ನು ಕಲ್ಲಯ್ಯಜ್ಜನವರು ಉದ್ಘಾಟಿಸಿದರು   

ಗದಗ: ‘ಕಷ್ಟಗಳು ಏನೇ ಇದ್ದರೂ ತನಗಿರಲಿ ಎಂದು ಅಂಬಲಿಯನ್ನು ತಾವುಂಡು ಅಮೃತವನ್ನು ಪರರಿಗೆ ಉಣಿಸಿದ ಕೀರ್ತಿ ಲಿಂಗೈಕ್ಯ ಪಂಡಿತ ಪಂಚಾಕ್ಷರಿ ಗವಾಯಿಗಳವರಿಗೆ ಸಲ್ಲುತ್ತದೆ’ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.

ಡಾ. ಪುಟ್ಟರಾಜ ಗವಾಯಿಗಳ ಅಂಧರ ಶಿಕ್ಷಣ ಸಮಿತಿಯ ಅಂಗ ಸಂಸ್ಥೆಗಳು ಹಾಗೂ ಪುಣ್ಯಾಶ್ರಮದ ಗುರುಬಂಧುಗಳ ಸಹಯೋಗದಲ್ಲಿ ಲಿಂ.ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿ ಅವರ 129ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

‘ಹಾನಗನ್‌ ಗುರು ಕುಮಾರೇಶ್ವರರು ಪಂಡಿತ ಪಂಚಾಕ್ಷರಿ ಗವಾಯಿ ಅವರಿಗೆ ಸಂಗೀತ ವಿದ್ಯೆ ಕಲಿಸಿ ಸಾವಿರಾರು ಅಂಧ- ಅನಾಥ ಅಂಗವಿಕಲ ಮಕ್ಕಳ ಬಾಳಿಗೆ ಬೆಳಕಾಗಿದ್ದರು. ಗವಾಯಿಗಳವರು ಪಂ.ಪುಟ್ಟರಾಜ ಕವಿ ಗವಾಯಿ ಅವರಿಗೆ ಸಂಗೀತ ವಿದ್ಯೆ ಧಾರೆ ಎರೆಯುವ ಮೂಲಕ ಸಂಗೀತ ಬೆಳೆಯಲು ಇವರಿಬ್ಬರ ಕೊಡುಗೆ ಅನನ್ಯ’ ಎಂದು ಹೇಳಿದರು.

ADVERTISEMENT

ಡಾ. ಮೃತ್ಯುಂಜಯ ಶೆಟ್ಟಿ, ‘ದಕ್ಷಿಣ ಭಾರತದಲ್ಲಿ ಸಂಗೀತ ಬೆಳೆದು ಬರಲು ಪಂಡಿತ ಪಂಚಾಕ್ಷರಿ ಗವಾಯಿ ಅವರು ಹಾಗೂ ಪಂ.ಪುಟ್ಟರಾಜ ಕವಿ ಗವಾಯಿ ಅವರ ಕೊಡುಗೆ ಅಪಾರವಾಗಿದೆ. ಅವರ ನಿಸ್ವಾರ್ಥ ಸೇವೆ ನಮಗೆಲ್ಲರಿಗೂ ಆದರ್ಶವಾಗಿದ್ದು, ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಉಳಿಸಿ-ಬೆಳೆಸಬೇಕು’ ಎಂದರು.

ಡಾ. ಪಿ.ಜಿ.ಎಸ್.ಸಮಿತಿಯ ಕಾರ್ಯದರ್ಶಿ ಜಿ.ಎಸ್.ಪಾಟೀಲ, ‘ಹುಟ್ಟು ಅಂಧರಾದ ಪಂಡಿತ ಪಂಚಾಕ್ಷರಿ ಗವಾಯಿಗಳವರು ಸಾವಿರಾರು ಜನರಿಗೆ ಸಂಚಾರ ಪಾಠಶಾಲೆ ಮುಖಾಂತರ ಸಂಗೀತ ಧಾರೆ ಎರೆದಿದ್ದಾರೆ. ಅವರ ಹಾದಿಯಲ್ಲೇ ಡಾ. ಪುಟ್ಟರಾಜ ಕವಿ ಗವಾಯಿಗಳವರು ಅಂಧರ ಶಿಕ್ಷಣ ಸಮಿತಿ ಸ್ಥಾಪಿಸಿ ಶಿಕ್ಷಣ ನೀಡಿದ್ದರಿಂದಾಗಿ ಸಾವಿರಾರು ಅಂಧ, ಅನಾಥ ಹಾಗೂ ಅಂಗವಿಕಲರ ಬಾಳಿನಲ್ಲಿ ಬೆಳಕು ಮೂಡಿದೆ’ ಎಂದು ಹೇಳಿದರು.

ಕಲ್ಲಿನಾಥ ಶಾಸ್ತ್ರಿ ಅವರನ್ನು ವಿರೂಪಾಕ್ಷಯ್ಯ ವಂದಲಿ ಹಿರೇಮಠ, ಎಸ್.ಎಸ್.ಕೆಳದಿಮಠ, ಮಂಜುನಾಥ ಸ್ವಾಮಿ ಚಿಕ್ಕಮಣ್ಣೂರು, ವಿ.ಎಂ.ಗುರುಮಠ, ಡಿವೈಎಸ್‌ಪಿ ಎಸ್.ಕೆ.ಪ್ರಹ್ಲಾದ ಹಾಗೂ ಜಿ.ಎಸ್.ಪಾಟೀಲ ಅವರನ್ನು ಕಲ್ಲಯ್ಯಜ್ಜನವರು ಸನ್ಮಾನಿಸಿದರು.

ಬಿ.ಎಚ್.ಜೋಗರಡ್ಡಿಯವರು ಅಂಧ, ಅನಾಥರು ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ವಸ್ತ್ರದಾನ ನೀಡಿದರು.

ಪಿ.ಸಿ.ಹಿರೇಮಠ, ವಿ.ಎಸ್.ಮಾಳೇಕೊಪ್ಪಮಠ, ಎಸ್.ಎಂ.ಗೌಡರ, ಜಿ.ಎಂ.ಬಸಲಿಂಗಪ್ಪ, ಡಾ. ಜಿ.ಎಸ್.ಯತ್ನಟ್ಟಿ, ಡಾ. ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ವೇದ ಘೋಷ, ನಾಡಗೀತೆ ಮೊಳಗಿತು. ಡಾ. ಆರ್.ಎಸ್.ದಾನರಡ್ಡಿ, ವಿ.ಎಂ.ಗುರುಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.