ಮುಂಡರಗಿ: ಪಟ್ಟಣವು ಸೇರಿದಂತೆ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಸರ್ಕಾರಿ ಶಾಲೆಗಳ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದ್ದು, ಶೌಚಾಯಗಳ ದುಃಸ್ಥಿತಿಯಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ತಾಲ್ಲೂಕಿನಾದ್ಯಂತ ಒಟ್ಟು 99 ಸರ್ಕಾರಿ ಪ್ರಾಥಮಿಕ ಹಾಗೂ 18 ಪ್ರೌಢಶಾಲೆಗಳಿದ್ದು, ಬಹುತೇಕ ಶಾಲೆಗಳ ಶೌಚಾಲಯಗಳು ದುರಸ್ತಿಯಲ್ಲಿವೆ. ಕೆಲವು ಶಾಲೆಗಳಲ್ಲಿ ಕಾಟಾಚಾರಕ್ಕೆ ಅಥವಾ ತೋರಿಕೆಗೆ ಮಾತ್ರ ಶೌಚಾಲಯಗಳಿದ್ದು, ಬಾಲಕ, ಬಾಲಕಿಯರಿಬ್ಬರೂ ಶೌಚಕ್ಕೆ ಬಯಲನ್ನೇ ಆಶ್ರಯಿಸಬೇಕಿದೆ.
ಕೆಲವು ಶಾಲೆಗಳಲ್ಲಿ ಶೌಚಾಲಯಗಳ ಕಟ್ಟಡಗಳು ಸಮರ್ಪಕವಾಗಿದ್ದರೂ ಅವುಗಳಿಗೆ ನೀರು, ವಿದ್ಯುತ್ ಮೊದಲಾದ ಮೂಲಸೌಲಭ್ಯಗಳು ಇಲ್ಲದಂತಾಗಿದೆ. ಇದರಿಂದಾಗಿ ಅಂತಹ ಶಾಲೆಗಳಲ್ಲಿ ಶೌಚಾಲಯಗಳು ಇದ್ದೂ ಇಲ್ಲದಂತಾಗಿವೆ.
ಶೌಚಾಲಯ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಪ್ರತಿ ಶೌಚಾಲಯಗಳ ಮೇಲೆ ನೀರಿನ ಟ್ಯಾಂಕ್, ಪ್ರತ್ಯೇಕ ಬಾಗಿಲು, ಕಿಟಕಿ, ಚಿಲಕ, ನಳ ಮೊದಲಾದವುಗಳನ್ನು ಅಳವಡಿಸಲಾಗಿರುತ್ತದೆ.
ಕೆಲ ದಿನಗಳ ನಂತರ ಕೆಲವು ದುಷ್ಕರ್ಮಿಗಳು ಅವುಗಳನ್ನು ನಾಶ ಮಾಡಿರುತ್ತಾರೆ. ದುರಸ್ತಿಗೆ ಪ್ರತ್ಯೇಕ ಅನುದಾನವಿಲ್ಲದ್ದರಿಂದ ಅವುಗಳ ದುರಸ್ತಿ ಕಾರ್ಯ ನನೆಗುದಿಗೆ ಬೀಳುತ್ತದೆ. ಅನ್ಯ ಮಾರ್ಗವಿಲ್ಲದೇ ವಿದ್ಯಾರ್ಥಿಗಳು ಶೌಚಕ್ಕೆ ಬಯಲಿಗೆ ತೆರಳಬೇಕಾಗುತ್ತದೆ.
ಪಟ್ಟಣದ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಕೋಟೆ ಸರ್ಕಾರಿ ಶಾಲೆಯಲ್ಲಿ ಸಮರ್ಪಕವಾದ ಶೌಚಾಲಯವಿಲ್ಲ. ಅಕ್ಕಪಕ್ಕದಲ್ಲಿ ಬಯಲೂ ಇಲ್ಲ. ಇದರಿಂದಾಗಿ ಅಲ್ಲಿಯ ನೂರಾರು ವಿದ್ಯಾರ್ಥಿಗಳು ಶೌಚಕ್ಕೆ ಪರದಾಡುವಂತಾಗಿದೆ. ಮೂರು ತಿಂಗಳ ಹಿಂದೆ ಶಾಸಕರ ಜನಸಂಪರ್ಕ ಸಭೆಯಲ್ಲಿ ಈ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದ್ದರೂ ಈವರೆಗೂ ಶೌಚಾಲಯದ ಸಮಸ್ಯೆ ನಿವಾರಣೆಯಾಗಿಲ್ಲ. ಗ್ರಾಮೀಣ ಭಾಗದ ಬಹುತೇಕ ಶಾಲೆಗಳ ಶೌಚಾಲಯಗಳು ಹಾಳಾಗಿದ್ದು, ಅದನ್ನು ನಿರ್ವಹಿಸುವುದು ಅಲ್ಲಿಯ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ.
ನಿರ್ವಹಣೆ ಯಾರ ಹೊಣೆ?: ತಾಲ್ಲೂಕಿನ ಬರದೂರು ಗ್ರಾಮ ಸೇರಿದಂತೆ ಕೆಲವು ಶಾಲೆಗಳಲ್ಲಿ ಉತ್ತಮ ಹಾಗೂ ಮೂಲಸೌಲಭ್ಯಗಳನ್ನು ಒಳಗೊಂಡ ಶೌಚಾಲಯಗಳಿವೆ. ಆದರೆ ಅವುಗಳನ್ನು ನಿಯಮಿತವಾಗಿ ಯಾರು ಸ್ವಚ್ಛಗೊಳಿಸಬೇಕು ಹಾಗೂ ಅವುಗಳನ್ನು ಯಾರು ನಿರ್ವಹಿಸಬೇಕು ಎನ್ನುವುದು ಶಾಲಾ ಸಿಬ್ಬಂದಿಗೆ ದೊಡ್ಡ ಯಕ್ಷ ಪ್ರಶ್ನೆಯಾಗಿದೆ.
ಅದನ್ನು ನಿವಾರಿಸುವ ನಿಟ್ಟಿನಲ್ಲಿ ತಾಲ್ಲೂಕು ಶಿಕ್ಷಣ ಇಲಾಖೆ ಕಳೆದ ವರ್ಷ ಪ್ರತೀ ಶಾಲೆಗೆ ₹ 15-18 ಸಾವಿರ ವಿಶೇಷ ಅನುದಾನ ನೀಡಿತ್ತು.
ತಾಲ್ಲೂಕಿನಾದ್ಯಂತ ಒಟ್ಟು 44 ಶಾಲೆಗಳ ಶೌಚಾಲಯಗಳು ಹಾಳಾಗಿದ್ದವು ಅವುಗಳಲ್ಲಿ ಎ ಗ್ರೇಡ್ ವ್ಯಾಪ್ತಿಯ 13 ಶೌಚಾಲಯಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.– ಎಚ್.ಎಂ.ಫಡ್ನೇಶಿ, ಬಿಇಒ ಮುಂಡರಗಿ
ಶೌಚಾಲಯ ದುರಸ್ತಿಗೆ ಕ್ರಮ
ಶಾಲಾ ಶೌಚಾಲಯ ಸಮಸ್ಯೆ ನಿವಾರಿಸುವ ಕುರಿತಂತೆ ಈಚೆಗೆ ರಾಜ್ಯಮಟ್ಟದ ಸಭೆ ನಡೆಯಿತು.
₹ 10 ಸಾವಿರದೊಳಗೆ ದುರಸ್ತಿಗೊಳ್ಳಬಹುದಾದ ಶಾಲಾ ಶೌಚಾಲಯಗಳನ್ನು ಎ ಗ್ರೇಡ್ ₹ 25 ಸಾವಿರ ಮೇಲ್ಪಟ್ಟು ದುರಸ್ತಿಗೊಳಿಸಬಹುದಾದ ಶೌಚಾಲಯಗಳನ್ನು ಬಿ ಗ್ರೇಡ್ ₹ 50 ಸಾವಿರ ಮೇಲ್ಪಟ್ಟು ದುರಸ್ತಿಗೊಳಿಸಬಹುದಾದ ಶೌಚಾಲಯಗಳನ್ನು ಸಿ ಗ್ರೇಡ್ ಹಾಗೂ ₹ 1 ಲಕ್ಷ ಮೇಲ್ಪಟ್ಟು ದುರಸ್ತಿಗೊಳಿಸಬಹುದಾದ ಶೌಚಾಲಯಗಳನ್ನು ಡಿ ಗ್ರೇಡ್ ಗಳನ್ನಾಗಿ ವಿಂಗಡಿಸಲಾಗಿದೆ.
₹10 ಸಾವಿರದೊಳಗಿನ ದುರಸ್ತಿ ಕಾರ್ಯಕೈಗೊಳ್ಳಲು ತಾಲ್ಲೂಕು ಸಾಕ್ಷರ ಇಲಾಖೆಗೆ ಅವಕಾಶ ನೀಡಲಾಗಿದ್ದು ಅದರ ಅಡಿಯಲ್ಲಿ ಈಗಾಗಲೇ ತಾಲ್ಲೂಕಿನ 13 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.