
ಗಜೇಂದ್ರಗಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ
ಅನಿರ್ದಿಷ್ಟಾವಧಿ ಧರಣಿ ಕುರಿತು ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಶನಿವಾರ ಗಜೇಂದ್ರಗಡ ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರು ಪೂರ್ವಭಾವಿ ಸಭೆ ನಡೆಸಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಲಿಂಗಪ್ಪ ಮುತಾರಿ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ ವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾಗಾರರು, ನೀರುಗಂಟಿಗಳು, ಸಿಪಾಯಿಗಳನ್ನು ಸರ್ಕಾರಿ ನೌಕರರೆಂದು ಘೋಷಿಸಿ, ₹36 ಸಾವಿರ ಕನಿಷ್ಟ ವೇತನ ಜಾರಿಗೊಳಿಸಬೇಕೆಂದು ಹಲವು ದಿನಗಳ ಬೇಡಿಕೆಯಾಗಿದೆ. ಗ್ರಾಮ ಪಂಚಾಯಿತಿ ನೌಕರರಿಗೆ ನಿವೃತ್ತಿ ಉಪಧನದ ಜೊತೆಗೆ ಸರ್ಕಾರದಿಂದ ಕಂದಾಯ ಇಲಾಖೆಯ ನೌಕರರಿಗೆ ಘೋಷಣೆ ಮಾಡಿದ ₹10 ಲಕ್ಷ ಗ್ರಾಮ ಪಂಚಾಯಿತಿ ನಿವೃತ್ತಿ ನೌಕರರಿಗೂ ಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈಗಾಗಲೇ ರಾಜ್ಯದಾದ್ಯಂತ ಎಲ್ಲ ಶಾಸಕರ ಮನೆಗಳ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಲಾಗಿದೆ.
ಆದರೆ ಬೆಳಗಾವಿ ಅಧಿವೇಶನದಲ್ಲಿಈ ಕುರಿತು ಚರ್ಚಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ನಾವೆಲ್ಲ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಡಿ 20 ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವ ನಿರ್ಧಾರ ಕಾಯುಗೊಂಡಿದ್ದು, ಧರಣಿಯಲ್ಲಿ ಎಲ್ಲ ಗ್ರಾಮ ಪಂಚಾಯಿತಿ ನೌಕರರು ಭಾಗವಹಿಸಬೇಕು ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಂತೂರ, ಸಿಐಟಿಯು ಮುಖಂಡ ಪೀರು ರಾಠೋಡ, ಗ್ರಾಮ ಪಂಚಾಯಿತಿ ನೌಕರರಾದ ಪ್ರಕಾಶ ನರೇಗಲ್ಲ, ಮುದುಕಪ್ಪ ದೊಣ್ಣೆಗುಡ್ಡ, ಸಿಕಂದರ್ ಬಾಗವಾನ, ಈರಣ್ಣ ಬಳಿಗೇರ, ಮಹಾಂತೇಶ ಕೋಮಾರ, ಮಲ್ಲೇಶ ಉಪ್ಪಾರ ಸೇರಿದಂತೆ 13 ಗ್ರಾಮ ಪಂಚಾಯ್ತಿಗಳ ಕರ ವಸಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು, ನೀರುಗಂಟಿಗಳು, ಸ್ವಚ್ಛತಾಗಾರರು, ಸಿಪಾಯಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.