ADVERTISEMENT

ಮೂಲಸೌಕರ್ಯಗಳ ಕೊರತೆ: ಸಂತೆ ದಿನದಂದು ಗ್ರಾಹಕರ ಪರದಾಟ

ಚರಂಡಿ, ರಸ್ತೆ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 2:40 IST
Last Updated 22 ಜೂನ್ 2022, 2:40 IST
ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿರುವ ದೃಶ್ಯ.
ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿರುವ ದೃಶ್ಯ.   

ನರಗುಂದ: ತಾಲ್ಲೂಕಿನ ಅತಿ ದೊಡ್ಡ ಗ್ರಾಮವಾದ ಕೊಣ್ಣೂರ ಹೋಬಳಿ ಕೂಡ ಹೌದು. ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದರೂ ಈ ಗ್ರಾಮಕ್ಕೆ ಇಂದಿಗೂ ಮೂಲಸೌಲಭ್ಯಗಳು ಮರೀಚಿಕೆಯಾಗಿವೆ. ಚರಂಡಿ ವ್ಯವಸ್ಥೆ ಅಧ್ವಾನದಿಂದ ಕೂಡಿದೆ. ಇದರಿಂದ ರಸ್ತೆ ಮೇಲೆ ಚರಂಡಿ ನೀರು, ನಳದ ನೀರು ಹರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸುವ ಗ್ರಾಮಸ್ಥರು, ಸ್ಥಳೀಯ ಆಡಳಿತ ಆದ್ಯತೆ ಮೇರೆಗೆ ಎಲ್ಲೆಡೆ ಕಾಂಕ್ರೀಟ್ ಚರಂಡಿಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಬೇಕು ಎಂದು ಆಗ್ರಹಿಸುತ್ತಾರೆ.

ಕೆಸರಿನ ತಾಣ ಮಾರುಕಟ್ಟೆ: ₹33 ಲಕ್ಷ ಖರ್ಚು ಮಾಡಿ ಸಂತೆ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಆದರೆ, ಮಳೆ ಬಂತೆಂದರೆ ಎಲ್ಲೆಂದರಲ್ಲಿ ನೀರು ನಿಂತು ಇದು ಕೆಸರಿನ ಹೊಂಡವಾಗುತ್ತದೆ. ಅದರಲ್ಲೂ ಗುರುವಾರ ಸಂತೆ ದಿನವಾಗಿದ್ದು ಅಂದು ವರ್ತಕರು ಮತ್ತು ಗ್ರಾಹಕರ ಪರದಾಟ ಹೇಳತೀರದಾಗಿರುತ್ತದೆ. ಈ ಮಾರುಕಟ್ಟೆಗೆ ವಿದ್ಯುತ್ ವ್ಯವಸ್ಥೆ ಕೂಡ ಇಲ್ಲವಾದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಮಳೆ ಬಂದರೆ ಸಂಚಾರಕ್ಕೆ ಅಡ್ಡಿ: ಮಳೆಗಾಲದಲ್ಲಿ ಗ್ರಾಮದ 6ನೇ ವಾರ್ಡ್‌ನ ಹದ್ಲಿ ಪ್ಲಾಟ್‌ ನಿವಾಸಿಗಳ ಗೋಳು ಹೇಳತೀರದಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳದ ಪರಿಣಾಮ ಇಲ್ಲಿ ಸಂಚರಿಸಲು ಸಾರ್ವಜನಿಕರು ಹರಸಾಹಸ ಪಡಬೇಕಿದೆ. ಕೆಸರಿನ ರಸ್ತೆಯಲ್ಲಿ ಸಂಚರಿಸಲು ವೃದ್ಧರು, ಚಿಣ್ಣರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕುಂಬಾರ ಪ್ಲಾಟ್ ಸೇರಿದಂತೆ ವಿವಿಧ ಹೊಸ ಬಡಾವಣೆಗಳಿಗೆ ಸರಿಯಾದ ರಸ್ತೆಗಳಿಲ್ಲ. ಹಲವು ವರ್ಷಗಳು ಕಳೆದರೂ ರಸ್ತೆ, ಚರಂಡಿ ನಿರ್ಮಿಸದ ಸ್ಥಳೀಯ ಆಡಳಿತವನ್ನು ಜನರು ಶಪಿಸುತ್ತಿದ್ದಾರೆ.

ADVERTISEMENT

ಪದೇ ಪದೇ ಮಲಪ್ರಭೆ ಪ್ರವಾಹಕ್ಕೆ ತುತ್ತಾಗುವ ಕೊಣ್ಣೂರ ಗ್ರಾಮಕ್ಕೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.

ಮಳೆ ಬಂದರೆ ನಮಗೆ ಇಲ್ಲಿ ಸಂಚರಿಸಲು ಆಗುತ್ತಿಲ್ಲ. ಹದ್ಲಿ ಪ್ಲಾಟ್‌ಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ಮೂಲಸೌಲಭ್ಯಗಳನ್ನು ಒದಗಿಸಬೇಕು
ಶಿವಾನಂದ ಕಳಸಣ್ಣವರ, 6ನೇ ವಾರ್ಡ್ ನಿವಾಸಿ, ಕೊಣ್ಣೂರ

ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗುವುದು. ಜತೆಗೆ ಸಂತೆ ಮಾರುಕಟ್ಟೆಯ ಆವರಣವನ್ನು ಯಾವುದಾದರೂ ಅನುದಾನದಲ್ಲಿ ಕಾಂಕ್ರೀಟ್ ಹಾಕಿಸಲಾಗುವುದು
ಎಂ.ಎ.ವಾಲಿ, ಪಿಡಿಒ, ಕೊಣ್ಣೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.