ADVERTISEMENT

ಕೋಟೆ ವೀರಭದ್ರೇಶ್ವರ ದೇವರ ಗುಗ್ಗಳೋತ್ಸವ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 8:51 IST
Last Updated 18 ಏಪ್ರಿಲ್ 2019, 8:51 IST
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ವೀರಭದ್ರೇಶ್ವರ ಅಗ್ನಿ ಕುಂಡ ಹಾಯುವ ಕಾರ್ಯಕ್ರಮ ವೀಕ್ಷಿಸಲು ಸೇರಿರುವ ಭಕ್ತರು
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ವೀರಭದ್ರೇಶ್ವರ ಅಗ್ನಿ ಕುಂಡ ಹಾಯುವ ಕಾರ್ಯಕ್ರಮ ವೀಕ್ಷಿಸಲು ಸೇರಿರುವ ಭಕ್ತರು   

ಲಕ್ಕುಂಡಿ(ಗದಗ ತಾ.): ಇಲ್ಲಿನ ಕೋಟೆ ವೀರಭದ್ರೇಶ್ವರ ದೇವರ ಜಾತ್ರೆಯ ಅಂಗವಾಗಿ ನಡೆದ ಪವಿತ್ರ ಗುಗ್ಗಳೋತ್ಸವ ಹಾಗೂ ಅಗ್ನಿ ಹಾಯುವ ಕಾರ್ಯಕ್ರಮ ಭಕ್ತಿ ಭಾವದಿಂದ ನಡೆಯಿತು.

ಬೆಳಿಗ್ಗೆ ಹನುಮನ ಬಾವಿಯಿಂದ ಪಲ್ಲಕ್ಕಿಯ ಪೂಜೆ ನೆರವೇರಿಸಲಾಯಿತು. ಅಗಸಿ ಹುನುಮಂತ ದೇವರ ದೇವಸ್ಥಾನದಿಂದ ಗುಗ್ಗಳೋತ್ಸವ ಆರಂಭವಾಯಿತು. ಗುಗ್ಗಳದಲ್ಲಿ ಪಾಲ್ಗೊಂಡ ಪುರವಂತರು, ದಕ್ಷ ಬ್ರಹ್ಮ, ವೀರಭದ್ರೇಶ್ವರನ ವೃತ್ತಾಂತದ ಕುರಿತು ವೀರಾವೇಶದಿಂದ ಒಡಪುಗಳನ್ನು ಹೇಳಿದರು.

ಗುಗ್ಗಳದ ಮೆರವಣಿಗೆಯುದ್ದಕ್ಕೂ ಹರ ಹರ ಮಹಾದೇವ, ವೀರಭದ್ರೇಶ್ವರ ಮಹಾರಾಜ ಕೀ ಜೈ, ಎಂಬ ಘೋಷಣೆಗಳು ಮೊಳಗಿದವು. ಇದರೊಂದಿಗೆ ಯುವಕರ ನಂದಿಕೋಲ ಕುಣಿತ ಜನ ಮನ ಸೆಳೆಯಿತು. ಮಹಿಳೆಯರು, ಮಕ್ಕಳು, ಯುವಕರು ತಮ್ಮ ಕೆನ್ನೆಗೆ ಶಸ್ತ್ರವನ್ನು ಹಾಕಿಸಿಕೊಂಡು ಭಕ್ತಿಯ ಸಂಕಲ್ಪವನ್ನು ಅರ್ಪಿಸಿದರು. 20 ಜನ ಯುವಕರು 108 ಗಂಟುಗಳ್ಳುಳ್ಳ ದಾರವನ್ನು ಏಕ ಕಾಲಕ್ಕೆ ತಮ್ಮ ಕೆನ್ನೆಗೆ ಹಾಕಿಸಿಕೊಂಡು ಭಕ್ತಿಯನ್ನು ಸಮರ್ಪಿಸಿದರು.

ADVERTISEMENT

ಅಗ್ನಿ ಹಾಯುವ ಕಾರ್ಯಕ್ರಮ: ಗುಗ್ಗಳೋತ್ಸವ ನಂತರ ದೇವಸ್ಥಾನದ ಮುಂದೆ ಅಗ್ನಿ ಹಾಯುವ ಕಾರ್ಯಕ್ರಮ ಭಕ್ತಿಯಿಂದ ನಡೆಯಿತು. ಮಕ್ಕಳು, ಹಿರಿಯರು, ಪುರವಂತರು ಅಗ್ನಿ ಕುಂಡದಲ್ಲಿ ಹಾಯುವ ಸನ್ನಿವೇಶವನ್ನು ಭಕ್ತರು ಕಣ್ತುಂಬಿಕೊಂಡರು. ಅನ್ನಸಂತರ್ಪಣೆ ನಡೆಯಿತು. ಇದಕ್ಕೂ ಮುನ್ನ ಬೆಳಿಗ್ಗೆ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.