ADVERTISEMENT

2023ರ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ

ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭ: ಶಾಸಕ ಎಚ್‌.ಕೆ. ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 6:45 IST
Last Updated 25 ಡಿಸೆಂಬರ್ 2022, 6:45 IST
ಗದಗ ನಗರದ ಉತ್ಸವ ಭವನದಲ್ಲಿ ಶನಿವಾರ ನಡೆದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಶಾಸಕ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಇದ್ದಾರೆ
ಗದಗ ನಗರದ ಉತ್ಸವ ಭವನದಲ್ಲಿ ಶನಿವಾರ ನಡೆದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಶಾಸಕ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಇದ್ದಾರೆ   

ಗದಗ: ‘ಜನವರಿ 11ರಿಂದ ಬಸ್‌ ಯಾತ್ರೆ ಆರಂಭಗೊಳ್ಳಲಿದ್ದು, ಕರ್ನಾಟಕದ ತುಂಬೆಲ್ಲಾ ಕಾಂಗ್ರೆಸ್‌ ಅಲೆ ಎಬ್ಬಿಸಲಿದೆ. ಜನವಿರೋಧಿ ಆಡಳಿತ ನೀಡುತ್ತಿರುವ ಬಿಜೆಪಿ ಧೂಳಿಪಟ ಆಗಲಿದೆ’ ಎಂದು ಶಾಸಕ ಎಚ್‌.ಕೆ. ಪಾಟೀಲ ಹೇಳಿದರು.

ನಗರದ ಉತ್ಸವ ಭವನದಲ್ಲಿ ಶನಿವಾರ ನಡೆದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಬಲ ತುಂಬುವ ಸಾಮರ್ಥ್ಯ ನಿಮ್ಮಲ್ಲಿದೆ. ಅದಕ್ಕಾಗಿ ನೀವೆಲ್ಲರೂ ಈಗಿನಿಂದಲೇ ಪಾದರಸದಂತೆ ಚುರುಕಾಗಬೇಕು’ ಎಂದು ಹುರಿದುಂಬಿಸಿದರು.

ADVERTISEMENT

ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಹಲವಾರು ಜನಪರ ಕಾರ್ಯಕ್ರಮಗಳನ್ನು ಬಿಜೆಪಿ ನಿಲ್ಲಿಸಿದ್ದು, ಅವರಿಗೆ ನಾಚಿಕೆ ತರಿಸಬೇಕು ಎಂದು ಕಿಡಿಕಾರಿದರು.

‘ಧರ್ಮ, ಜಾತಿ ಹೆಸರಿನಲ್ಲಿ ಬಿಜೆಪಿ ಸಮಾಜದಲ್ಲಿ ಅಸಹನೆ ಸೃಷ್ಟಿಸುತ್ತಿದೆ. ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿ ವಂಚಿಸಿದೆ. ಪ್ರತಿಯೊಬ್ಬರಿಗೂ ₹15 ಲಕ್ಷ ಕೊಡುವುದಾಗಿ ಹೇಳಿ ಯಾಮಾರಿಸಿದೆ. ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಡವರಿಗೆ ಒಂದು ಮನೆ ಕೊಡಲಿಲ್ಲ. ಬಾಕಿ ಹಣ ಬಿಡುಗಡೆ ಮಾಡಲಿಲ್ಲ. ಇವರ ಜನವಿರೋಧಿ ನೀತಿಯನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್‌ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಮುಖಂಡರು ಮಾಡಬೇಕು’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಮಾತನಾಡಿ, ‘ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ
ನನ್ನನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿದ್ದೀರಿ. ಅದಕ್ಕಾಗಿ ಕೃತಘ್ನತೆ ಸಲ್ಲಿಸುವೆ. ಜತೆಗೆ ನೀವು ತಲೆ
ತಗ್ಗಿಸದ ರೀತಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವೆ’ ಎಂದು ತಿಳಿಸಿದರು.

ಪಂಚಾಯತ್ ವ್ಯವಸ್ಥೆ ಹಾಳು ಮಾಡಿದ ಕೀರ್ತಿ ಬಿಜೆಪಿ ಸಲ್ಲುತ್ತದೆ. ಸ್ಥಳೀಯ ಸಂಸ್ಥೆಗಳನ್ನು ಸದಾ ದುರ್ಬಲಗೊಳಿಸುತ್ತಲೇ ಬರುತ್ತಿರುವ ಬಿಜೆಪಿ, ಸೋಲಿನ ಭೀತಿಯಿಂದ ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಸುತ್ತಿಲ್ಲ. ಪಲಾಯನವಾದ ಮಾಡುತ್ತಿದೆ ಎಂದು ಕುಟುಕಿದರು.

ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ನಂತರ ಕಾಂಗ್ರೆಸ್‌ಗೆ ಬಲ ಬಂದಿದೆ. ರಾಹುಲ್‌ ಗಾಂಧಿ ಸಾಮಾನ್ಯ ಕಾರ್ಯಕರ್ತನಂತೆ ಭಾರತ್‌ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇಶದ ಕೋಮುಸಾಮರಸ್ಯ ಕದಡಲು ಹೊಂಚುಹಾಕಿ ಕುಳಿತಿವೆ. ಆದರೆ, ಇದಾವುದಕ್ಕೂ ಜಗ್ಗದ ರಾಹುಲ್‌ ಅವರು ಕೋಮುವಾದ, ಭ್ರಷ್ಟಾಚಾರ ವಿರುದ್ದ ಯಾತ್ರೆ ಆರಂಭಿಸಿದ್ದಾರೆ ಎಂದರು.

ಬಿಜೆಪಿಯ ಪಾಪದ ಕೊಡ‌ ತುಂಬಿದೆ. ಜನರು‌ ಅವರನ್ನು ಮನೆಗೆ ಕಳಿಸುವ ಸಂಕಲ್ಪ‌ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಆಶಿಸುತ್ತಿದ್ದಾರೆ ಎಂದು ತಿಳಿಸಿದರು.

ಗದಗ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌.ಪಾಟೀಲ ಮಾತನಾಡಿದರು. ಕಾಂಗ್ರೆಸ್‌ ಮುಖಂಡರಾದ ಜಿ.ಎಸ್.ಗಡ್ಡದ್ದೇವರಮಠ, ಐ.ಎಸ್.ಪಾಟೀಲ, ನಾಡಗೌಡರ, ಬಿ.ಆರ್.ಯಾವಗಲ್, ಡಿ.ಆರ್ ಪಾಟೀಲ, ರಾಮಕೃಷ್ಣ ದೊಡ್ಡಮನಿ, ವಾಸಣ್ಣ ಕುರಡಗಿ, ಫಲ್ಲೀರಪ್ಪ ಹೆಬಸೂರು ಇದ್ದರು.

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಜ.11ರಿಂದ ಬೆಳಗಾವಿಯಿಂದ ಬಸ್ ಯಾತ್ರೆ ನಡೆಯಲಿದ್ದು, ಅವರ ಭ್ರಷ್ಟಾಚಾರ ಜನರ ಮುಂದೆ ಬಯಲು ಮಾಡಲಾಗುವುದು

ಸಲೀಂ ಅಹ್ಮದ್‌, ವಿಧಾನ ಪರಿಷತ್‌ ಸದಸ್ಯ

ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಹೊಸದೊಂದು ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗದ ಬಿಜೆಪಿ ನಾಯಕರು, ನಮ್ಮ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳ ಮೇಲೆಯೇ ಆಡಳಿತ ನಡೆಸುತ್ತಾ ಬಂದಿದ್ದಾರೆ
ಎಚ್‌.ಕೆ. ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.