ADVERTISEMENT

ಆಕ್ಸಿಜನ್‌ ಪೂರೈಕೆಗೆ ಕ್ರಮವಹಿಸಿ

ಕೋವಿಡ್‌ ಕೇರ್‌ ಸೆಂಟರ್‌ಗೆ ಶಾಸಕ ಎಚ್‌.ಕೆ. ಪಾಟೀಲ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 5:06 IST
Last Updated 29 ಏಪ್ರಿಲ್ 2021, 5:06 IST
ಶಾಸಕ ಎಚ್‌.ಕೆ.ಪಾಟೀಲ ಗದಗ ನಗರದ ಕೋವಿಡ್‌ ಕೇರ್‌ ಸೆಂಟರ್‌ಗೆ ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು
ಶಾಸಕ ಎಚ್‌.ಕೆ.ಪಾಟೀಲ ಗದಗ ನಗರದ ಕೋವಿಡ್‌ ಕೇರ್‌ ಸೆಂಟರ್‌ಗೆ ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು   

ಗದಗ: ‘ಗದಗ ಸಣ್ಣ ಜಿಲ್ಲೆ ಅಂತ ಹೇಳಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೋವಿಡ್‌–19 ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವಷ್ಟು ಆಕ್ಸಿಜನ್‌ ಹಾಗೂ ರೆಮ್‌ಡಿಸಿವಿರ್‌ ಪೂರೈಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರ ಚಿಂತನೆ ಮಾಡಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ತಿಳಿಸಿದರು.

ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳ ಇಂದಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲು ಅವರು ಬುಧವಾರ ಜಿಮ್ಸ್ ಆವರಣದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ್ದರು.

‘ದೇಶದ ಪ್ರತಿಯೊಬ್ಬರೂ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ವೈದ್ಯರು, ಮಾಧ್ಯಮಗಳು, ಸಂಘ–ಸಂಸ್ಥೆಗಳು ಕೋವಿಡ್‌–19 ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಸರ್ಕಾರ, ಮಂತ್ರಿಗಳು ಮಾತ್ರ ವಿರೋಧ ಪಕ್ಷದವರ ಜತೆಗೆ ಬಡಿದಾಡುತ್ತಿದ್ದಾರೆ. ಇವರಿಗೆ ಬುದ್ಧಿ ಮಾತು ಹೇಳುವವರು ಯಾರು?’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಆನಾರೋಗ್ಯದ ಸ್ಥಿತಿಯಲ್ಲಿದ್ದರೂ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕೋವಿಡ್‌–19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಐದು ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಅವರ ಸಲಹೆಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ, ಅವರ ಮಾತುಗಳನ್ನು ಆಲಿಸಿ ಕ್ರಮ ತೆಗೆದುಕೊಳ್ಳುವ ಬದಲು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಬೇಜವಾಬ್ದಾರಿತನದ ಮಾತುಗಳನ್ನು ಆಡಿದ್ದಾರೆ. ಇಂತಹವರಿಂದಲೇ ಸರ್ಕಾರ ಹಾಗೂ ದೇಶದ ಹೆಸರು ಕೆಡುತ್ತಿದೆ’ ಎಂದು ಕಿಡಿಕಾರಿದರು.

ಇದು ಮಾನವತೆ ಎದುರಿಸುತ್ತಿರುವ ಬಹುದೊಡ್ಡ ಆಘಾತದ ದಿನಗಳು. ಸರ್ಕಾರ ಅತಿ ಹೆಚ್ಚು ಜಾಗ್ರತೆ, ಜವಾಬ್ದಾರಿ, ಮನುಷ್ಯತ್ವ ಇರಿಸಿಕೊಂಡು ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ಈ ವೇಳೆ ಜಿಮ್ಸ್ ಆವರಣದಲ್ಲಿನ ಆಕ್ಸಿಜನ್‌ ಪ್ಲ್ಯಾಂಟ್‍ಗೆ ಭೇಟಿ ನೀಡಿ ಪರಿಶೀಲಿಸಿದರು. ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್‍ಡೆಸಿವಿರ್‌ ಚುಚ್ಚುಮದ್ದು ಲಭ್ಯತೆ ಕುರಿತು ಮಾಹಿತಿ ಪಡೆದರು.

ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿ ಚಿಕಿತ್ಸೆ, ಸೌಲಭ್ಯ ಹಾಗೂ ಆರೋಗ್ಯ ಬಗ್ಗೆ ವಿಚಾರಿಸಿದರು.

ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಭೂಸರಡ್ಡಿ, ಡಾ.ರಾಜಶೇಖರ ಮ್ಯಾಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.