ADVERTISEMENT

ಭಾರತದ ಆತ್ಮ ಗಾಂಧಿ: ಸಚಿವ ಎಚ್‌.ಕೆ.ಪಾಟೀಲ

‘ಗಾಂಧೀಜಿಯವರ ಮೂಲ ಕೃತಿ’ಗಳ ಅನುವಾದಿತ ಪುಸ್ತಕಗಳ ಬಿಡುಗಡೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 16:30 IST
Last Updated 18 ಫೆಬ್ರುವರಿ 2025, 16:30 IST
ಗದುಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ‘ಗಾಂಧೀಜಿಯವರ ಮೂಲ ಕೃತಿ’ಗಳ ಅನುವಾದಿತ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು
ಗದುಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ‘ಗಾಂಧೀಜಿಯವರ ಮೂಲ ಕೃತಿ’ಗಳ ಅನುವಾದಿತ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು   

ಗದಗ: ‘ಗಾಂಧಿ ಭಾರತದ ಆತ್ಮ; ಜಗತ್ತಿನ ಮಹಾತ್ಮ’ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಗಾಂಧಿ ಸೆಂಟರ್‌ ಆಫ್‌ ಸೈನ್ಸ್‌ ಆ್ಯಂಡ್‌ ಹ್ಯೂಮನ್‌ ವ್ಯಾಲ್ಯೂಸ್‌ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಗಾಂಧೀಜಿಯವರ ಮೂಲ ಕೃತಿ’ಗಳ ಅನುವಾದಿತ ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ 2024-25ನೇ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಇಂದಿನ ಅನೇಕ ಯವಕರು ತಂತ್ರಜ್ಞಾನಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅದು ಸಲ್ಲದು. ಯುವ ಮನಸ್ಸುಗಳು ತಾಂತ್ರಿಕತೆಯ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮಗಳನ್ನು ಕಟ್ಟುವ ಕೆಲಸ ಯುವಜನರಿಂದ ಆಗಬೇಕು’ ಎಂದರು.

ADVERTISEMENT

‘ರಾಷ್ಟ್ರ ಸೇವೆಗೆ ಉತ್ಸಾಹವಿರುವ ಯುವಕರಿಗೆ ಅನೇಕ ಸವಾಲುಗಳಿವೆ. ಆ ಸವಾಲುಗಳನ್ನು ಎದುರಿಸಿ ರಾಷ್ಟ್ರೀಯ ಸೇವೆಯಲ್ಲಿ ಎನ್ಎಸ್ಎಸ್ ಸ್ವಯಂ ಸೇವಕರು, ಯುವಕರು ಭಾಗಿಯಾಗಬೇಕು’ ಎಂದರು.

‘ಗಾಂಧೀಜಿಯವರು ಸತ್ಯ, ಪ್ರೇಮ, ಧರ್ಮ ಕುರಿತಾಗಿ ರಚಿಸಿದ ಪುಸ್ತಕಗಳನ್ನು ಲೇಖಕರಾದ ಆನಂದ ಹಿಂಗೋರಾಣಿ ಮತ್ತು ಮೀನಾ ದೇಶಪಾಂಡೆ ಅವರು ಕನ್ನಡಕ್ಕೆ ಅನುವಾದಿಸಿದ್ದು ಶ್ಲಾಘನೀಯ’ ಎಂದರು.

ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಮಾತನಾಡಿ, ‘ಗ್ರಾಮೀಣಾಭಿವೃದ್ಧಿ ಎನ್ನುವುದು ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಜೀವಾಳ. ಗ್ರಾಮಗಳಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಜನರ ಜೀವನಮಟ್ಟವನ್ನು ಸುಧಾರಿಸುವ ಮುಖ್ಯ ಉದ್ದೇಶವನ್ನು ಗಾಂಧಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆ ಹೊಂದಿದೆ. ಈ ವಿಶ್ವವಿದ್ಯಾಲಯ ಆ ಕಾರ್ಯದಲ್ಲಿ ತೊಡಗಿದೆ. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕಾರ್ಯ ಸಾಧನೆ ಮತ್ತು ಪ್ರಗತಿ ರಾಜ್ಯಕ್ಕೆ ಮಾದರಿಯಾಗಿದೆ’ ಎಂದರು.

‘ಹಳೆ ಮೈಸೂರು ಭಾಗದಲ್ಲಿ ಹಾಲು ಉತ್ಪಾದಕರ ಸಂಘಗಳು ಹೆಚ್ಚಾಗಿದ್ದು ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿಯೂ ಹಸು ಸಾಕಿ ಹಾಲು ಉತ್ಪಾದನೆ ಮಾಡುವ ಮೂಲಕ ಗ್ರಾಮೀಣದಲ್ಲಿ ಉತ್ತಮ ಆರ್ಥಿಕ ಬೆಳವಣಿಗೆ ಕಾಣಬಹುದಾಗಿದೆ. ರಾಜ್ಯ ಮತ್ತು ರಾಷ್ಟ್ರದಲ್ಲಿಯೇ ಒಂದು ಹಳ್ಳಿಯು ತನಗೆ ಬೇಕಾದ ಎಲ್ಲಾ ಮೂಲಸೌಲಭ್ಯಗಳನ್ನು ಹೊಂದಿದೆ ಎಂದರೆ ಅದು ಗದಗ ಜಿಲ್ಲೆಯ ಹುಲಕೋಟಿ ಗ್ರಾಮ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ. ಸುರೇಶ ವಿ.ನಾಡಗೌಡರ ಮಾತನಾಡಿ, ‘ವಿಶ್ವವಿದ್ಯಾಲಯದ ಪ್ರಗತಿಯಲ್ಲಿ ಸಚಿವ ಎಚ್.ಕೆ.ಪಾಟೀಲ ಕೊಡುಗೆ ಅಪಾರ’ ಎಂದು ಹೇಳಿದರು.

‘ಯುವಜನತೆಗೆ ಸಾಮಾಜಿಕ ಜವಾಬ್ದಾರಿಯತ್ತ ಪ್ರೋತ್ಸಾಹ ನೀಡುವುದು ಅನಿವಾರ್ಯ. ಹೀಗಾಗಿ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಯುವಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಜೀವನ ಕುಮಾರ ಹಾಗೂ ಪ್ರೊ. ಮೀನಾ ದೇಶಪಾಂಡೆ ವೇದಿಕೆಯಲ್ಲಿದ್ದರು.

ರಾಜ್ಯದ ಹನ್ನೊಂದು ವಿಶ್ವವಿದ್ಯಾಲಯಗಳ ವಿವಿಧ ಕಾಲೇಜುಗಳಿಂದ ಅನೇಕ ವಿದ್ಯಾರ್ಥಿಗಳು ಹಾಗೂ ಕಾರ್ಯಕ್ರಮ ಅಧಿಕಾರಿಗಳು ಯುವಜನೋತ್ಸವದಲ್ಲಿ ಭಾಗವಹಿಸಿದ್ದು, ಮುಂದಿನ ಐದು ದಿನಗಳವರೆಗೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಪ್ರಶಾಂತ ಮೇರವಾಡೆ, ರಂಗಣ್ಣ, ಪ್ರಕಾಶ ಮಾಚೇನಹಳ್ಳಿ, ಅಭಿಷೇಕ ಎಚ್.ಈ. ಇದ್ದರು.

Highlights - ತಂತ್ರಜ್ಞಾನದ ದುರುಪಯೋಗ ಸಲ್ಲದು ರಾಜ್ಯದಲ್ಲಿ ಮಾದರಿ ಗ್ರಾಮ ಹುಲಕೋಟಿ  ಸುಸ್ಥಿರ ಅಭಿವೃದ್ಧಿಗೆ ಮಹತ್ವ ನೀಡಿದ್ದ ಗಾಂಧೀಜಿ

Quote - ಯುವಕರು ಕೇವಲ ಹಕ್ಕುಗಳನ್ನು ಕೇಳದೆ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ದೇಶ ನಿರ್ಮಾಣದಲ್ಲಿ ತೊಡಗಬೇಕು ವಿ.ಆರ್‌.ಸುದರ್ಶನ್‌ ಮಾಜಿ ಸಭಾಪತಿ

Quote - ಯುವಕರು ಗಾಂಧೀಜಿಯವರ ವಿಚಾರಗಳನ್ನು ಅಳವಡಿಸಿಕೊಂಡು ದೇಶದ ಪರಿವರ್ತನೆಯ ಕಡೆಗೆ ಶ್ರಮಿಸಬೇಕು ಎಚ್‌.ಕೆ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.