ADVERTISEMENT

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕಾದ ಅನ್ಯಾಯ ವಿರುದ್ಧ ಶೆಟ್ಟರ್‌ ಮಾತಾಡಲಿ: HKP

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 10:05 IST
Last Updated 19 ಫೆಬ್ರುವರಿ 2025, 10:05 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಗದಗ: ‘ಸಂಸದ ಜಗದೀಶ ಶೆಟ್ಟರ್‌ ಅವರಿಗೆ ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ರಾಜ್ಯದ ಜನರ ಬಗ್ಗೆ ಅವರಿಗೆ ನಿಜವಾಗಿಯೂ ಕಾಳಜಿ ಇದ್ದಲ್ಲಿ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲಿ’ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

‘ಮೂರು ತಿಂಗಳಿಂದ ಜನರಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣ ನೀಡಿಲ್ಲ; ರಾಜ್ಯ ಸರ್ಕಾರ ದಿವಾಳಿಯಾಗಿದೆ’ ಎಂದು ಟೀಕಿಸಿದ್ದ ಶೆಟ್ಟರ್‌ ಅವರ ಮಾತಿಗೆ ಬುಧವಾರ ತಿರುಗೇಟು ನೀಡಿದರು.

‘ಹಿಂದೆ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾದರೂ ಕೇಂದ್ರ ಸರ್ಕಾರ ಪರಿಹಾರ ನೀಡಲಿಲ್ಲ. ಸುಪ್ರೀಂ ಕೋರ್ಟ್‌ಗೆ ಹೋದರೂ ರಾಜ್ಯಕ್ಕೆ ಪರಿಹಾರದ ಹಣ ಸಿಗಲಿಲ್ಲ. ಈಗ ರಾಜ್ಯ ಸರ್ಕಾರದ ಬಗ್ಗೆ ಅವರೇನು ಮಾತನಾಡುವುದು’ ಎಂದು ಟೀಕಿಸಿದರು.

ADVERTISEMENT

‘ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ತಾಂತ್ರಿಕ ಕಾರಣದಿಂದ ವಿಳಂಬ ಆಗಿರಬಹುದೇ ಹೊರತು ಹಣದ ಕೊರತೆಯಿಂದಲ್ಲ. ಈ ಎರಡೂ ಯೋಜನೆಗಳ ಹಣವನ್ನು ಪ್ರತಿ ತಿಂಗಳು ನಿಂತರವಾಗಿ ಮುಟ್ಟಿಸುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ’ ಎಂದರು.

ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಅವ್ಯವಹಾರ, ಗೊಂದಲಗಳ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ‘ಕೆಪಿಎಸ್‌ಸಿ ತನ್ನ ಕಾರ್ಯನಿರ್ವಹಣೆಯೊಳಗೆ ಬಹಳಷ್ಟು ಸುಧಾರಣೆ ತಂದುಕೊಳ್ಳಬೇಕಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ ಮೊದಲಾದ ಆಪಾದನೆಗಳಿಗೆ ಸರಿಯಾದ ಮದ್ದು ಅಂದರೆ ಪಾರದರ್ಶಕತೆ ಕಾಯ್ದುಕೊಳ್ಳುವುದು. ಕೆಪಿಎಸ್‌ಸಿ ಈ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದರು.

‘ಕೆಪಿಎಸ್‌ಸಿ ಮೇಲೆ ನಿರಂತರ ಆಪಾದನೆ, ಕಾರ್ಯಕ್ಷಮತೆ ಮೇಲೆ ಟೀಕೆ ಟಿಪ್ಪಣಿ ಬರುವುದರಿಂದ ಅದರ ವಿಶ್ವಾಸಾರ್ಹತೆಗೆ ಧಕ್ಕೆ ಬರುತ್ತದೆ. ಅದಕ್ಕಾಗಿ ಸಂಬಂಧಿತರೆಲ್ಲರೂ ಬಹಳಷ್ಟು ಗಂಭೀರ ಚಿಂತನೆ ಮಾಡಬೇಕು’ ಎಂದರು.

ಶೋಷಿತರ ಸಮಾವೇಶ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ‘ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಶಿಸ್ತುಪಾಲನೆ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಇರಿಸಿದ್ದಾರೆ. ನಮ್ಮನ್ನು ಕೇಳದೇ ಏನೂ ಮಾಡಬಾರದು ಎಂದು ಹೈಕಮಾಂಡ್‌ ಸೂಚಿಸಿದೆ. ಅದರಂತೆ, ಸಮಾವೇಶ ನಡೆಸಲು ಅನುಮತಿ ಕೋರಿ ದೆಹಲಿಗೆ ಹೋಗಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ’ ಎಂದರು.

ಸರ್ಕಾರಿ ನೇಮಕಾತಿ ಸ್ಥಗಿತಗೊಂಡು ಹೊರಗುತ್ತಿಗೆ ಪದ್ಧತಿ ಹೆಚ್ಚಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ‘ನಮ್ಮ ಸಮಾಜ ಹಾಗೂ ಸಂವಿಧಾನಕ್ಕೆ ಹೊರಗುತ್ತಿಗೆ ಪದ್ಧತಿ ಸೂಕ್ತವಾದುದಲ್ಲ. ಅದಕ್ಕಾಗಿಯೇ ಹೊರಗುತ್ತಿಗೆಯೊಳಗೂ ಮೀಸಲಾತಿ ಕೊಡಲು ಕ್ರಮವಹಿಸುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.