ADVERTISEMENT

ಗದಗ | ಸಾಂಸ್ಕೃತಿಕ ಭಾರತಕ್ಕೆ ನೇಕಾರರ ಕೊಡುಗೆ ಅಪಾರ: ಲಿಂಗರಾಜ ಪಾಟೀಲ

ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ಘಾಟಿಸಿದ ಲಿಂಗರಾಜ ಪಾಟೀಲ ಮಲ್ಲಾಪೂರ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:08 IST
Last Updated 8 ಆಗಸ್ಟ್ 2025, 5:08 IST
ಗದಗ ನಗರದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಉದ್ಯಮಿ ರಾಜೇಶ್ವರಿ ಕೊನಾ ಅವರನ್ನು ಸನ್ಮಾನಿಸಲಾಯಿತು
ಗದಗ ನಗರದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಉದ್ಯಮಿ ರಾಜೇಶ್ವರಿ ಕೊನಾ ಅವರನ್ನು ಸನ್ಮಾನಿಸಲಾಯಿತು   

ಗದಗ: ‘ಕುಶಲತೆ ಮೂಲಕ ವಿಶಿಷ್ಟ ಉಡುಗೆ ತೊಡುಗೆಯ ಉತ್ಪನ್ನಗಳನ್ನು ತಯಾರಿಸುವ ನೇಕಾರರು ದೇಶದ ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವ ಮೂಲಕ ಸಾಂಸ್ಕೃತಿಕ ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಹೇಳಿದರು.

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಜಿಲ್ಲಾ ಯುವ ಮೋರ್ಚಾ ವತಿಯಿಂದ ಬೆಟಗೇರಿಯ ಈರಣ್ಣ ಕೊನಾ ಕೈಮಗ್ಗ ಆವರಣದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಶ್ರಮಶೀಲ ನೇಕಾರರ ಜೀವನಶೈಲಿ ಹಾಗೂ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜತೆಗೆ ತಂತ್ರಜ್ಞಾನ ನೆರವು, ಎಲೆಕ್ಟ್ರಾನಿಕ್‌ ದಾಖಲೆಗಳು, ಕಚ್ಚಾವಸ್ತುಗಳು, ರಫ್ತು, ಇ- ಮಾರ್ಕೆಟಿಂಗ್‌, ಮಾರುಕಟ್ಟೆ ನೆರವು, ಸೌರಶಕ್ತಿ ಘಟಕ ಹೀಗೆ ಹಲವು ಸೌಲಭ್ಯಗಳಿಂದ ಇಂದು ಕೈಮಗ್ಗ ವಲಯವು ದೇಸಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ವ್ಯಾಪಾರ ವಹಿವಾಟು ನಡೆಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದೆ’ ಎಂದು ಹೇಳಿದರು. 

ADVERTISEMENT

ಇದೇ ಸಂದರ್ಭದಲ್ಲಿ ವಿಶಿಷ್ಟ ಸಾಧನೆಗಾಗಿ ಕೈಮಗ್ಗ ಉದ್ಯಮಿ ರಾಜೇಶ್ವರಿ ಕೊನಾ ಅವರನ್ನ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಕೈಮಗ್ಗ ಕೇಂದ್ರಗಳಿಗೆ ಭೇಟಿ ನೀಡಿ ಉತ್ಪನ್ನಗಳನ್ನು ಖರೀದಿಸಲಾಯಿತು.

ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಹಿರಿಯರಾದ ಜಗನ್ನಾಥಸಾ ಬಾಂಡಗೆ, ಶಂಕರ ಕಾಕಿ, ದೇವೇಂದ್ರಪ್ಪ ಗೋಟೂರ, ವಿಜಯಲಕ್ಷ್ಮಿ ಮಾನ್ವಿ, ಪ್ರೀತಿ ಹೊನಗುಡಿ ಮಾತನಾಡಿದರು.

ನಗರಸಭಾ ಸದಸ್ಯರಾದ ಮಾಧುಸಾ ಮೇರವಾಡೆ, ವಿದ್ಯಾವತಿ ಗಡಗಿ, ಮುಖಂಡರಾದ ವಂದನಾ ವರ್ಣೇಕರ, ನರಸಿಂಗ ಮೆರವಾಡೆ ಈರಣ್ಣ ಕೋನ, ಸುಧಾ ಮೆರವಾಡೆ, ಸ್ವಾತಿ ಅಕ್ಕಿ, ರಮೇಶ ಸಜ್ಜಗಾರ, ಅಮರನಾಥ ಗಡಗಿ, ರವಿ ಮಾನ್ವಿ, ದೇವೇಂದ್ರಪ್ಪ ಹೂಗಾರ ಇದ್ದರು.

1905ರಲ್ಲಿ ಸ್ವದೇಶಿ ಚಳವಳಿ ಪ್ರೇರಣೆಯಿಂದ ದೇಶದಾದ್ಯಂತ ಸ್ಥಾಪನೆಯಾದ ಕೈಮಗ್ಗ ವಲಯವು ಇಂದು ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮವಾಗಿ ರೂಪುಗೊಂಡಿದೆ
ಲಿಂಗರಾಜ ಪಾಟೀಲ ಮಲ್ಲಾಪೂರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಸ್ಥಳೀಯವಾಗಿ ತಯಾರಿಸಿದ ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಮೂಲಕ ನೇಕಾರರ ಕೌಶಲ ಹಾಗೂ ಉದ್ಯಮದ ಬೆಳವಣಿಗೆಗೆ ಪ್ರತಿಯೊಬ್ಬರೂ ಉತ್ತೇಜನ ನೀಡಬೇಕು
ನಿರ್ಮಲಾ ಕೊಳ್ಳಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ

‘ಸ್ವದೇಶಿ ವಸ್ತುಗಳನ್ನು ಬಳಸಿ’:

‘ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕ ತರಿಸಿಕೊಳ್ಳುವ ಪರಿಪಾಠ ಬಿಟ್ಟು ಗುಣಮಟ್ಟದ ದೇಶಿಯ ಬಟ್ಟೆಗಳನ್ನು ಹೆಚ್ಚು ಬಳಸಬೇಕು’ ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಹೇಳಿದರು. ‘ದೇಶದ ಆರ್ಥಿಕತೆ ಹಾಗೂ ನೇಕಾರರ ಬದುಕು ಗಟ್ಟಿಗೊಳಿಸಿ ಸ್ವಾವಲಂಬಿ ಭಾರತದ ದೃಷ್ಟಿಕೋನಕ್ಕೆ ಜನತೆ ಶಕ್ತಿ ನೀಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.