ADVERTISEMENT

ದೇಹಾರೋಗ್ಯ ರಕ್ಷಣೆಯೇ ಪುಸ್ತಕಗಳ ಸಾರ: ವಿವೇಕಾನಂದಗೌಡ ಪಾಟೀಲ

‘ಹಣ್ಣುಗಳು ಮತ್ತು ಆರೋಗ್ಯ’, ‘ಮಹಾತ್ಮ ಗಾಂಧಿ ಮತ್ತು ಪ್ರಕೃತಿ ಚಿಕಿತ್ಸೆ’ ಪುಸ್ತಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 2:37 IST
Last Updated 14 ಜುಲೈ 2025, 2:37 IST
ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಡೋಣಿ ಬಳಿ ಇರುವ ನಂದಿವೇರಿ ಮಠದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಡಾ.ವಸುಂಧರಾ ಭೂಪತಿ ಅವರ ಎರಡು ಪುಸ್ತಕಗಳು ಲೋಕಾರ್ಪಣೆಗೊಂಡವು    
ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಡೋಣಿ ಬಳಿ ಇರುವ ನಂದಿವೇರಿ ಮಠದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಡಾ.ವಸುಂಧರಾ ಭೂಪತಿ ಅವರ ಎರಡು ಪುಸ್ತಕಗಳು ಲೋಕಾರ್ಪಣೆಗೊಂಡವು       

ಗದಗ: ‘ಆರೋಗ್ಯ ಪ್ರಕೃತಿದತ್ತವಾದುದು. ಪಂಚಭೂತಗಳಿಂದ ದೇಹರಚನೆಯಾಗಿದೆ. ಇಂತಹ ಅದ್ಭುತವಾದ ಶರೀರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತಾಗಿ ಡಾ.ವಸುಂಧರಾ ಭೂಪತಿ ಅವರು ತಮ್ಮ ಎರಡು ಪುಸ್ತಕಗಳಲ್ಲಿ ಮಾಹಿತಿ ಒದಗಿಸಿದ್ದಾರೆ’ ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಕಪ್ಪತಗುಡ್ಡದಲ್ಲಿರುವ ನಂದಿವೇರಿ ಮಠದಲ್ಲಿ ಭಾನುವಾರ ನಡೆದ ಡಾ. ವಸುಂಧರಾ ಭೂಪತಿ ಅವರ ‘ಹಣ್ಣುಗಳು ಮತ್ತು ಆರೋಗ್ಯ’ ಹಾಗೂ ‘ಮಹಾತ್ಮ ಗಾಂಧಿ ಮತ್ತು ಪ್ರಕೃತಿ ಚಿಕಿತ್ಸೆ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ದೇಹಾರೋಗ್ಯ ಇರಿಸಿಕೊಂಡು ಹೇಗೆ ನಾವು ನಮ್ಮ ಜೀವನದ ಗುರಿಯನ್ನು ಸಾಧಿಸಬಹುದು ಎಂಬುದರ ಹಿನ್ನಲೆಯಲ್ಲಿ ರಚಿತವಾಗಿರುವ ಎರಡು ಕೃತಿಗಳು ಅತ್ಯಂತ ಉಪಯುಕ್ತವಾಗಿವೆ’ ಎಂದರು.

ADVERTISEMENT

‘ಶರೀರವನ್ನು ಸದೃಢ ಹಾಗೂ ಬಲಿಷ್ಠವಾಗಿರಿಸಿಕೊಳ್ಳಲು ಅನೇಕ ಪಾರಂಪರಿಕ ಸಂಗತಿಗಳಿವೆ. ಆದರೆ, ನಾವು ಅವುಗಳನ್ನು ಮರೆತು ಜೀವನಶೈಲಿ ಮತ್ತು ಆಹಾರ ಪದ್ಧತಿ ಬದಲಾವಣೆ ಮಾಡಿಕೊಂಡು ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದೇವೆ. ಡಾ.ವಸುಂಧರಾ ವೈದ್ಯರಾಗಿ ತಮ್ಮ ಜ್ಞಾನವನ್ನು ಪುಸ್ತಕ ರೂಪದಲ್ಲಿ ಹೊರತಂದು ಜನಸಾಮಾನ್ಯರಿಗೆ ಅದರ ಉಪಯೋಗ ಒದಗಿಸಿದ್ದಾರೆ. ಸಾಮಾಜಿಕ ಅಭಿವೃದ್ಧಿ ಹಿನ್ನಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಪುಸ್ತಕಗಳಿಂದ ಆತ್ಮವಿಕಾಸ ಆಗುತ್ತದೆ. ನಾವು ಏನಾಗಬೇಕು ಎಂಬುದನ್ನು ಮೊದಲು ನಿರ್ಧರಿಸಬೇಕು. ಅದಕ್ಕೆ ತಕ್ಕಂತೆ ಬದುಕು ರೂಪಿಸಿಕೊಳ್ಳಬೇಕು’ ಎಂದರು.

‘ಪ್ರಕೃತಿಯನ್ನು ನೋಡುವುದಲ್ಲ; ಅದನ್ನು ಅನುಭವಿಸಬೇಕು. ಕಾಡಿಗೆ ಬಂದರೆ ಮನುಷ್ಯನ ಆಯುಷ್ಯ, ಆರೋಗ್ಯ ಹೆಚ್ಚುತ್ತದೆ. ಕಪ್ಪತಗುಡ್ಡದಲ್ಲಿರುವ ಔಷಧೀಯ ಸಸ್ಯಗಳ ಬಗ್ಗೆ ಆಯುರ್ವೇದ ವಿಜ್ಞಾನ ಓದುವ ವಿದ್ಯಾರ್ಥಿಗಳು ಲಕ್ಷ್ಯ ವಹಿಸಬೇಕು. ವೈದ್ಯರಿಗೆ ದಿವ್ಯದೃಷ್ಟಿ ಇರುತ್ತದೆ. ಸೃಜನಶೀಲ ಮನಸ್ಸಿನ ಸಂಕೇತವಾಗಿರುವ ಡಾ. ವಸುಂಧರಾ ಔಷಧೀಯ ಸಸ್ಯಗಳ ಬಗ್ಗೆ ಬರೆದಿದ್ದಾರೆ. ಅದನ್ನು ಅಧ್ಯಯನ ಮಾಡಬೇಕು’ ಎಂದರು.

ಪುಸ್ತಕದ ಲೇಖಕಿ ಡಾ.ವಸುಂಧರಾ ಭೂಪತಿ ಮಾತನಾಡಿ, ‘ಇದೊಂದು ಅಪರೂಪದ ಕಾರ್ಯಕ್ರಮ. ಕಪ್ಪತಗುಡ್ಡದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಬೇಕು ಎಂಬ ಆಶಯ ಈಡೇರಿದೆ. ಶಿವಕುಮಾರ ಸ್ವಾಮೀಜಿ ಕಪ್ಪತಗುಡ್ಡದ ಕಾವಲುಗಾರ. ಇಲ್ಲಿನ ಜೀವಸರಪಳಿಯನ್ನು ರಕ್ಷಿಸುತ್ತಿದ್ದಾರೆ. ಅವರ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದರು.

ಹಣ್ಣುಗಳಿಂದ ಸಿಗುವ ಆರೋಗ್ಯ ಪ್ರಯೋಜನಗಳು ಹಾಗೂ ಪ್ರಕೃತಿ ಚಿಕಿತ್ಸೆಯ ಮಹತ್ವದ ಕುರಿತು ಮಾಹಿತಿ ಹಂಚಿಕೊಂಡರು.

ಸಸ್ಯ ವಿಜ್ಞಾನಿ ಡಾ. ಜಗನ್ನಾಥರಾವ್‌ ಪುಸ್ತಕ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ತಿಪ್ಪೇರುದ್ರ ಸೊಂಡೂರು, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಜಯಪಾಲಸಿಂಗ್‌ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರನ್ನು ಸನ್ಮಾನಿಸಲಾಯಿತು. ಪ್ರಗತಿಪರ ರೈತ ದೇವರಡ್ಡಿ ಅಗಸನಕೊಪ್ಪ ಸೇರಿದಂತೆ ರೈತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ. ಸಿ.ಎಸ್‌.ಅರಸನಾಳ ನಿರೂಪಿಸಿದರು.

ಶಿವಕುಮಾರ ಸ್ವಾಮೀಜಿ ವ್ಯಕ್ತಿತ್ವ ವಿಶೇಷವಾದುದು. ಅವರಲ್ಲಿ ಬುದ್ಧನ ಕಾರುಣ್ಯ ಬಸವಣ್ಣನ ಕಾಯಕ ತತ್ವ ಗಾಂಧೀಜಿಯ ಸರಳತೆ ಅಂಬೇಡ್ಕರ್‌ ಅವರ ಸಮಾನತೆ ಇದೆ
ಡಾ. ವಸುಂಧರಾ ಭೂಪತಿ ಲೇಖಕಿ
ಇಲ್ಲಿ 500ಕ್ಕಿಂತಲೂ ಹೆಚ್ಚಿನ ಔಷಧೀಯ ಸಸ್ಯಗಳಿವೆ. ಬಂಗಾರದಕೊಳದ ನೀರಿನಲ್ಲಿ ಔಷಧೀಯ ಗುಣವಿದೆ. ಕಪ್ಪತಗುಡ್ಡ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು.
ಡಾ. ಜಗನ್ನಾಥರಾವ್‌ ಸಸ್ಯ ವಿಜ್ಞಾನಿ

ಕಾಡು ಹಣ್ಣುಗಳ ಪುಸ್ತಕ ರಚಿಸುವೆ: ಡಾ.ವಸುಂಧರಾ

‘ಗಂಡಿಗಿಂತ ಹೆಣ್ಣು ಬಲಿಷ್ಠಳು. ಏಕಕಾಲಕ್ಕೆ ಹಲವು ಕೆಲಸ ಮಾಡುವ ಶಕ್ತಿ ಇದೆ. ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಕೀಳರಿಮೆ ಬೆಳೆಸಿಕೊಳ್ಳಬಾರದು. ರೂಪ ಬಣ್ಣಕ್ಕಿಂತ ಹೆಣ್ಣುಮಕ್ಕಳು ಬೌದ್ಧಿಕವಾಗಿ ಚೆಲುವೆಯರಾದರೆ ಇಡೀ ಜಗತ್ತೇ ನಮಗೆ ತಲೆಬಾಗುತ್ತದೆ’ ಎಂದು ಡಾ. ವಸುಂಧರಾ ಭೂಪತಿ ಹೇಳಿದರು. ಸ್ವಾಮೀಜಿ ಆಶಯದಂತೆ ಮುಂದಿನ ದಿನಗಳಲ್ಲಿ ಕಾಡು ಹಣ್ಣುಗಳು ಕಪ್ಪತಗುಡ್ಡದಲ್ಲಿನ ಔಷಧೀಯ ಸಸ್ಯಗಳು ಹಾಗೂ ಇಲ್ಲಿನ ವೈವಿಧ್ಯ ವೈಶಿಷ್ಟ್ಯ ಇಟ್ಟುಕೊಂಡು ಪುಸ್ತಕವೊಂದನ್ನು ಬರೆಯುವೆ ಎಂದರು.

ಪುಸ್ತಕ‍ ಪರಿಚಯ

ಪುಸ್ತಕದ ಹೆಸರು: ಹಣ್ಣುಗಳು ಮತ್ತು ಆರೋಗ್ಯ

ಲೇಖಕರು: ಡಾ. ವಸುಂಧರಾ ಭೂಪತಿ

ಪ್ರಕಾಶಕರು: ಜನಪ್ರಕಾಶನ

ಬೆಲೆ: ₹140

ಪುಸ್ತಕರದ ಹೆಸರು: ಮಹಾತ್ಮಗಾಂಧಿ ಮತ್ತು ಪ್ರಕೃತಿ ಚಿಕಿತ್ಸೆ

ಲೇಖಕರು: ಡಾ. ವಸುಂಧರಾ ಭೂಪತಿ

ಪ್ರಕಾಶಕರು: ಜನಪ್ರಕಾಶನ

ಬೆಲೆ: ₹120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.