ಗದಗ: ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 78 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರಲ್ಲಿ 30 ರಿಂದ 50ವರ್ಷದೊಳಗಿನವರು 15 ಮಂದಿ ಇದ್ದಾರೆ. ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆರು ತಿಂಗಳಲ್ಲಿ 34 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರಲ್ಲಿ 50 ವರ್ಷದೊಳಗಿನವರು 6 ಮಂದಿ ಇದ್ದಾರೆ.
‘ಕಳೆದ ಮೂರೂವರೆ ತಿಂಗಳಲ್ಲಿ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿರುವ ಕ್ಯಾಥ್‌ಲ್ಯಾಬ್‌ನಲ್ಲಿ ಆ್ಯಂಜಿಯೋಗ್ರಾಂ 130, ಆ್ಯಂಜಿಯೋಪ್ಲ್ಯಾಸ್ಟಿ 72, ಪೇಸ್‌ಮೇಕರ್ 2 ಸೇರಿ ಒಟ್ಟು 204 ಶಸ್ತ್ರಚಿಕಿತ್ಸೆಗಳು ಆಗಿವೆ. ಜಿಲ್ಲಾ ಆಸ್ಪತ್ರೆಗೆ ನಿತ್ಯ ಕನಿಷ್ಠ ಮೂರು ಅಥವಾ ನಾಲ್ಕು ಆ್ಯಂಜಿಯೋಗ್ರಾಂ, ಆ್ಯಂಜಿಯೋಪ್ಲ್ಯಾಸ್ಟಿ ಪ್ರಕರಣ ಬರುತ್ತಿವೆ’ ಎಂದು ಸಂಸ್ಥೆ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದರು.
‘ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ಕಡಿಮೆ ಮಾಡಲು ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆ ಜಾರಿಗೊಳಿಸಲಾಗಿದೆ. ಸದ್ಯಕ್ಕೆ ಈ ಸೌಲಭ್ಯ ಜಿಲ್ಲೆಯ ನರಗುಂದ ಮತ್ತು ಶಿರಹಟ್ಟಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ. 10 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕದ ವ್ಯವಸ್ಥೆ ಕಲ್ಪಿಸಲಾಗಿದೆ. ಹುಬ್ಬಳ್ಳಿಯ ಕೆಎಂಸಿ–ಆರ್‌ಐ ಮತ್ತು ಎಸ್‌ಡಿಎಂ ಆಸ್ಪತ್ರೆಯ ವೈದ್ಯರ ನೆರವನ್ನೂ ಪಡೆಯಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್.ನೀಲಗುಂದ ತಿಳಿಸಿದರು.
ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಕೆಲವು ತಿಂಗಳಿಂದ ಹೆಚ್ಚಾಗಿದೆ ಎನ್ನುವುದಕ್ಕಿಂತ; ಇತ್ತೀಚಿನ ವರ್ಷಗಳಲ್ಲೇ ಅಧಿಕವಾಗಿದೆ ಎಂಬ ಹೃದ್ರೋಗ ತಜ್ಞರ ಅಭಿಪ್ರಾಯ ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.
‘ಸ್ಟೆಮಿ’ ಎಲ್ಲ ತಾಲ್ಲೂಕುಗಳಿಗೂ ವಿಸ್ತರಣೆಯಾಗಲಿ
‘ಹೃದಯಾಘಾತ ಸಂಭವಿಸಿದ ಒಂದು ಗಂಟೆಯನ್ನು ಗೋಲ್ಡನ್ ಅವರ್ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ತಾಲ್ಲೂಕು ಮಟ್ಟದಲ್ಲಿಯೇ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ‘ಸ್ಟೆಮಿ’ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಯೋಜನೆ ಪ್ರಾರಂಭಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ 48 ಸ್ಟೆಮಿ ಪ್ರಕರಣಗಳು ಕಂಡು ಬಂದಿದ್ದು ಅದರಲ್ಲಿ 35 ಮಂದಿಯ ಜೀವರಕ್ಷಣೆ ಮಾಡಲಾಗಿದೆ ಎಂದು ‘ ಎಂದು ಡಿಎಚ್‌ಒ ಡಾ. ಎಸ್.ಎಸ್.ನೀಲಗುಂದ ತಿಳಿಸಿದ್ದಾರೆ. ಹೃದಯಾಘಾತಕ್ಕೆ ಒಳಗಾದ ಜೀವರಕ್ಷಣೆ ಮಾಡುವ ಇಂತಹ ಸೌಲಭ್ಯವನ್ನು ಜಿಲ್ಲೆಯ ಉಳಿದ ತಾಲ್ಲೂಕು ಆಸ್ಪತ್ರೆಗಳಿಗೂ ವಿಸ್ತರಣೆ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಇತ್ತೀಚಿನ ವರ್ಷಗಳಲ್ಲೇ ಹೃದಯಾಘಾತ ಪ್ರಕರಣಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿವೆ. ವೇಗದ ಬದುಕು ಹೃದಯದ ಮೇಲೆ ಜಾಸ್ತಿ ಒತ್ತಡ ಹಾಕುತ್ತಿದೆ. ಹೃದಯದ ಆರೋಗ್ಯಕ್ಕೆ ಒತ್ತಡರಹಿತ ಬದುಕು ಮುಖ್ಯ–ಡಾ. ಬಸವರಾಜ ಬೊಮ್ಮನಹಳ್ಳಿ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ
ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯ ಅಡಿ ಗದಗ ಜಿಲ್ಲೆಯಲ್ಲಿ 2024ರ ಮಾರ್ಚ್ 1ರಿಂದ 2025ರ ಜೂನ್ 30ರವರೆಗೆ 6681 ಮಂದಿಗೆ ಇಜಿಸಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 3491 ಅಬ್‌ನಾರ್ಮಲ್ ಇಸಿಜಿ ಪತ್ತೆಯಾಗಿವೆ–ಡಾ. ಎಸ್.ಎಸ್.ನೀಲಗುಂದ ಡಿಎಚ್‌ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.