ADVERTISEMENT

ಗದಗ: ಮಳೆ ಹಾನಿ ವೀಕ್ಷಣೆಗೆ ತೆರಳಿದ ಸಚಿವ ಪಾಟೀಲಗೆ ಘೇರಾವ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 5:32 IST
Last Updated 12 ಸೆಪ್ಟೆಂಬರ್ 2022, 5:32 IST
ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ಭಾನುವಾರ ವಿವಿಧೆಡೆ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶವನ್ನು ವೀಕ್ಷಣೆ ಮಾಡಿದರು
ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ಭಾನುವಾರ ವಿವಿಧೆಡೆ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶವನ್ನು ವೀಕ್ಷಣೆ ಮಾಡಿದರು   

ಗದಗ: ಮಳೆಯಿಂದ ಹಾನಿಗೊಳಗಾಗಿರುವ ಸೇತುವೆ ವೀಕ್ಷಣೆಗೆ ಬರುವಂತೆ ಆಗ್ರಹಿಸಿ ಸಚಿವ ಬಿ.ಸಿ.ಪಾಟೀಲ ಅವರನ್ನು ಬೆಂತೂರು ಗ್ರಾಮದಲ್ಲಿ ಭಾನುವಾರ ಸಾರ್ವಜನಿಕರು ಮುತ್ತಿಗೆ ಹಾಕಿ ಒತ್ತಾಯಿಸಿದರು.

ಗದಗ ತಾಲ್ಲೂಕಿನ ಅಂತೂರು ಬೆಂತೂರು ಹೊರ ವಲಯದಲ್ಲಿ ಮಳೆ ಹಾನಿ ವೀಕ್ಷಣೆಗೆ ತೆರಳಿದ್ದಾಗ ಈ ಘಟನೆ ನಡೆಯಿತು.

‘ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಹಾನಿಗೊಂಡಿದೆ. ಆದರೆ, ಈವರೆಗೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಹಾನಿ ಪರಿಶೀಲಿಸಿಲ್ಲ. ಹಾಗಾಗಿ, ನೀವು ಬಂದು ಹಾನಿ ವೀಕ್ಷಣೆ ಮಾಡಿ, ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಜನರ ಮನವಿಗೆ ಸ್ಪಂದಿಸಿದ ಸಚಿವ ಬಿ.ಸಿ.ಪಾಟೀಲ ಸೇತುವೆ ವೀಕ್ಷಣೆ ಮಾಡಿ, ದುರಸ್ತಿಯ ಭರವಸೆ ನೀಡಿದರು. ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ, ಮೊದಲಿಗೆ ಕುರ್ತಕೋಟಿಯಲ್ಲಿ ಹಳ್ಳದ ನೀರಿನಿಂದ ಹಾನಿಗೊಳಗಾದ ಸೇತುವೆ, ರಸ್ತೆ ವೀಕ್ಷಿಸಿದರು. ನಂತರ ಅತಿಯಾದ ಮಳೆಯಿಂದಾಗಿ ಹಾನಿಗೊಳಗಾದ ಶೇಂಗಾ ಬೆಳೆದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಂತೂರ-ಬೆಂತೂರ ಗ್ರಾಮದಲ್ಲಿ ಹಳ್ಳದ ನೀರು ಜಮೀನುಗಳಿಗೆ ನುಗ್ಗಿ ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿದ ಅವರು ಕಳಸಾಪುರದಲ್ಲಿ ಪಂಚಾಯತರಾಜ್ ಇಲಾಖೆಯ ಹಾನಿಗೊಳಗಾದ ರಸ್ತೆಯನ್ನು ವೀಕ್ಷಿಸಿದರು. ನಾಗಾವಿಯಲ್ಲಿ ಅತಿಯಾದ ಮಳೆಯಿಂದ ರಸ್ತೆ ಕೊಚ್ಚಿ ಹೋಗಿರುವುದನ್ನು ಪರಿಶೀಲಿನೆ ನಡೆಸಿದರು.

ಗದಗ ನಗರದ ದೋಬಿ ಘಾಟ್‌ನ ಸೇತುವೆ ಹಾಗೂ ಮಕಾನ ಗಲ್ಲಿಯಲ್ಲಿ ಹಾನಿಯಾದ ಮನೆಗಳನ್ನು ವೀಕ್ಷಿಸಿದರು. ನಂತರ ಬೆಟಗೇರಿಯ ವಾರ್ಡ್‌ ನಂ.3 ಬಣ್ಣದ ನಗರಕ್ಕೆ ಭೇಟಿ ನೀಡಿ ಅಗತ್ಯದ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.