ADVERTISEMENT

ಗದಗ ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ಕಟಾವಿಗೆ ಬಂದ ಹೆಸರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:22 IST
Last Updated 9 ಆಗಸ್ಟ್ 2025, 4:22 IST
ನರಗುಂದ ತಾಲ್ಲೂಕಿನ ಸುರಕೋಡದಲ್ಲಿ ಶುಕ್ರವಾರ ಭಾರಿ ಮಳೆ ಸುರಿಯಿತು
ನರಗುಂದ ತಾಲ್ಲೂಕಿನ ಸುರಕೋಡದಲ್ಲಿ ಶುಕ್ರವಾರ ಭಾರಿ ಮಳೆ ಸುರಿಯಿತು   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ರಭಸದಿಂದ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.

ಮಳೆಯಿಂದ ಕೆಲವು ಬೆಳೆಗಳಿಗೆ ಅನುಕೂಲವಾದರೆ, ಅಲ್ಪಾವಧಿ ಬೆಳೆಯಾದ ಹೆಸರು ಬೆಳೆಗೆ ಕಂಟಕವಾಗಿ ಪರಿಣಮಿಸಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರ ತುಸು ರಭಸದಿಂದ ಸುರಿಯಿತು. ಇದರಿಂದ ಹೆಚ್ಚಿನ ರೀತಿಯಲ್ಲಿ ಬೆಳೆ ಹಾನಿ ಆಗಿದೆ.

ಹೆಸರು ಬೆಳೆ ಕಟಾವಿಗೆ ಬಂದಿದ್ದು, ಈಗ ಅವುಗಳು ಜಲಾವೃತವಾಗಿ ಹೆಸರು ಕಾಳು ಮೊಳಕೆ ಒಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ಕಟಾವು ಯಂತ್ರಗಳು ಬೀಡು ಬಿಟ್ಟಿವೆ. ಈ ರಭಸದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಸಂಜೆ ಹೊತ್ತು ವಿದ್ಯಾರ್ಥಿಗಳು ಶಾಲೆಯಿಂದ ಮರಳಿ ಮನೆಗೆ ತೆರಳಲು ಹರಸಾಹಸ ಪಡಬೇಕಾಯಿತು. ಚರಂಡಿಗಳು ತುಂಬಿ ಹರಿದವು. ಕೆಲವೆಡೆ ಚರಂಡಿ ಕಾಮಗಾರಿ ಆರಂಭಗೊಂಡ ಪರಿಣಾಮ ಪಾದಚಾರಿಗಳು ತೊಂದರೆಗೆ ಒಳಗಾದರು.

ADVERTISEMENT

ಸುರಕೋಡ ಗ್ರಾಮದಲ್ಲಂತೂ ರಭಸದ ಮಳೆ ಸುರಿಯಿತು. ಹೆಸರು ಬೆಳೆ ಬೆಳೆದ ರೈತರು ತೀವ್ರ ಆತಂಕಗೊಂಡರು. ಇದೇ ರೀತಿ ಮಳೆ ಬಂದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಅವಲತ್ತುಕೊಂಡರು. ಒಟ್ಟಾರೆ ನಿರಂತರ ಮಳೆ ತೊಂದರೆಗೀಡು ಮಾಡಿತು.

ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗಿದೆ. ಈಗ ಈ ಮಳೆಯಿಂದ ಅನುಕೂಲವಾಗಿದೆ ಎಂದು ಕೆಲವು ರೈತರು ಹೇಳುತ್ತಾರೆ. ಒಟ್ಟಾರೆ ಪ್ರಕೃತಿಯ ಈ ವೈಚಿತ್ರ್ಯಕ್ಕೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಅತಿಯಾದ ಮಳೆಯಿಂದ ಬೆಳೆಗಳಿಗೆ ಹಳದಿ ರೋಗ, ತೇವಾಂಶ ಹೆಚ್ಚಳದಿಂದ ಕೊಳೆರೋಗ ಕಾಳು ಉದುರಿ ಮೊಳಕೆ ಕಟ್ಟುವುದು ಸೇರಿದಂತೆ ದುಬಾರಿ ಬೀಜ, ಗೊಬ್ಬರ, ಕೂಲಿ ಮಾಡಿ ಬೆಳೆದಿರುವ ಬೆಳೆಗಳಿಗೆ ಆತಂಕ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.