ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಹೆಸರೂರು ಗ್ರಾಮ

ಮೂಲಸೌಕರ್ಯ ಕಲ್ಪಿಸಲು ಕ್ರಮವಹಿಸುವಂತೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 7:09 IST
Last Updated 22 ಅಕ್ಟೋಬರ್ 2025, 7:09 IST
ಚರಂಡಿಗಳಿಲ್ಲದೆ ಕಿರಿದಾಗಿ ನಿರ್ಮಿಸಿರುವ ಮುಂಡರಗಿ ತಾಲ್ಲೂಕಿನ ಹೆಸರೂರು ಗ್ರಾಮದ ಕಿರಿದಾದ ರಸ್ತೆಗಳು
ಚರಂಡಿಗಳಿಲ್ಲದೆ ಕಿರಿದಾಗಿ ನಿರ್ಮಿಸಿರುವ ಮುಂಡರಗಿ ತಾಲ್ಲೂಕಿನ ಹೆಸರೂರು ಗ್ರಾಮದ ಕಿರಿದಾದ ರಸ್ತೆಗಳು   

ಮುಂಡರಗಿ: ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯ ಮೇಲಿರುವ ಹೆಸರೂರು ಕೃಷಿಯಾಧಾರಿತ ಗ್ರಾಮವಾಗಿದ್ದು, ಮೂಲಸೌಲಭ್ಯಗಳಿಂದ ವಂಚಿತಗೊಂಡಿದೆ.

ಮುಂಡರಗಿ ಪಟ್ಟಣದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸೇರಿದಂತೆ ಗ್ರಾಮದ ಒಂದೊಂದು ಓಣಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಚರಂಡಿ ಮೊದಲಾದ ಅಗತ್ಯ ಸೌಲಭ್ಯಗಳಿಲ್ಲದೇ ಗ್ರಾಮದ ಜನತೆ ನಿತ್ಯ ಪರದಾಡುವಂತಾಗಿದೆ.

ಗ್ರಾಮದೊಳಗೆ ನಿರ್ಮಿಸಿರುವ ರಸ್ತೆಗಳು ತುಂಬಾ ಇಕ್ಕಟ್ಟಾಗಿದ್ದು, ರಸ್ತೆಗಳ ಅಕ್ಕಪಕ್ಕದಲ್ಲಿ ಗಿಡಗಳು ಬೆಳೆದು ನಿಂತಿವೆ. ರಸ್ತೆ ಪಕ್ಕದಲ್ಲಿ ಚರಂಡಿಗಳನ್ನು ನಿರ್ಮಿಸದಿರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ADVERTISEMENT

1962 ಹಾಗೂ 1992ರಲ್ಲಿ ತುಂಗಭದ್ರಾ ನದಿಯ ಪ್ರವಾಹ ಅಪ್ಪಳಿಸಿ, ಗ್ರಾಮವೆಲ್ಲ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಬಳಿಕ ಎಚ್ಚತ್ತ ಸರ್ಕಾರ ನದಿ ದಂಡೆಯಲ್ಲಿದ್ದ ಹೆಸರೂರು ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿತು. ಗ್ರಾಮದ ಹೊರವಲಯದಲ್ಲಿ ಜಮೀನು ಖರೀದಿಸಿ, ಅಲ್ಲಿಗೆ ಗ್ರಾಮವನ್ನು ಸ್ಥಳಾಂತರ ಮಾಡಲಾಯಿತು.

ಪ್ರತಿವರ್ಷ ಮಳೆಗಾಲದಲ್ಲಿ ತುಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾಗತೊಡಗಿದ್ದರಿಂದ ಗ್ರಾಮಸ್ಥರು ನಿಧಾನವಾಗಿ ಹೊಸ ಹೆಸರೂರು ಗ್ರಾಮಕ್ಕೆ ಸ್ಥಳಾಂತರಗೊಳ್ಳತೊಡಗಿದರು. ಸದ್ಯ ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರ ಹಳೆ ಹೆಸರೂರು ಗ್ರಾಮದಲ್ಲಿದ್ದಾರೆ.

ಹೊಸ ಹೆಸರೂರು ಗ್ರಾಮದಲ್ಲಿ ವಿಶಾಲ ರಸ್ತೆಗಳಿವೆ. ಆದರೆ, ಅದರಲ್ಲಿ ಬಹುತೇಕ ರಸ್ತೆಗಳು ಹಾಳಾಗಿವೆ. ಕೆಲವು ರಸ್ತೆಗಳಿಗೆ ಡಾಂಬರು ಹಾಕಿಲ್ಲವಾದ್ದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಸರ್ಕಸ್ ಮಾಡಬೇಕಾಗಿದೆ. ಮಳೆಗಾಲದಲ್ಲಿ ಕೆಲವು ರಸ್ತೆಗಳ ತುಂಬಾ ಗುಂಡಿಗಳು ನಿರ್ಮಾಣವಾಗಿ ರಸ್ತೆಗಳೆಲ್ಲ ಜಲಾವೃತವಾಗಿರುತ್ತವೆ.

ರಸ್ತೆಬದಿಯಲ್ಲಿ ಜನರು ಬಳಸಿದ ಗಲೀಜು ನೀರು ಹರಿದು ಹೋಗಲು ಚರಂಡಿಗಳಿಲ್ಲದ್ದರಿಂದ, ಅದು ರಸ್ತೆಯ ಮಧ್ಯದಲ್ಲಿ ಜಮೆಯಾಗುತ್ತದೆ. ಇದರಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳ ಭಯದಲ್ಲಿ ದಿನಗಳೆಯಬೇಕಾಗಿದೆ.

ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಅವರ ಅಂತ್ಯಕ್ರಿಯೆ ನಡೆಸಲು ಗ್ರಾಮದಲ್ಲಿ ಸ್ಮಶಾನವಿಲ್ಲ. ಅಂತ್ಯಕ್ರಿಯೆ ನಡೆಸಲು ಗ್ರಾಮದಿಂದ ಸುಮಾರು ಎರಡು-ಮೂರು ಕಿ.ಮೀ. ದೂರದಲ್ಲಿರುವ ಹಳೆ ಸ್ಮಶಾನಕ್ಕೆ ಶವವನ್ನು ಕೊಂಡೊಯ್ಯಬೇಕು. ಸ್ಮಶಾನಕ್ಕೆ ಜಮೀನು ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಸ್ಮಶಾನಕ್ಕೆ ಜಮೀನು ಖರೀದಿಸಲು ತಾಲ್ಲೂಕು ಆಡಳಿತ ಸಮ್ಮತಿಸಿದೆ. ಆದರೆ, ಯಾವ ರೈತರೂ ಜಮೀನು ಮಾರಾಟ ಮಾಡಲು ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ.

ಚರಂಡಿ ನಿರ್ಮಾಣ ಹಾಗೂ ನವಗ್ರಾಮದ ಜಮೀನು ಕುರಿತಂತೆ ಕೆಲವು ಗ್ರಾಮಸ್ಥರು ತಕರಾರು ತಗೆದಿದ್ದು ಹಂತ ಹಂತವಾಗಿ ಅವುಗಳನ್ನು ನಿವಾರಿಸಲಾಗುವುದು

- ವಿಶ್ವನಾಥ ಹೊಸಮನಿ ತಾಲ್ಲೂಕು ಪಂಚಾಯಿತಿ ಇಒ ಮುಂಡರಗಿ

ಹೆಸರೂರು ಗ್ರಾಮದಲ್ಲಿ ರಸ್ತೆ ಚರಂಡಿಗಳಿಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಮೂಲಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಬೇಕು

-ಮೌನೇಶ ಬಡಿಗೇರ ಹೆಸರೂರು ಗ್ರಾಮಸ್ಥ

ನವಗ್ರಾಮ ಜಮೀನು ವಿವಾದ

ದಶಕಗಳ ಹಿಂದೆ ಹೆಸರೂರು ಗ್ರಾಮ ಸ್ಥಳಾಂತರಕ್ಕೆ ಅಲ್ಲಿಯ ರೈತರ ಜಮೀನು ಖರೀದಿಸಲಾಗಿತ್ತು. ಗ್ರಾಮಸ್ಥರು ದಶಕಗಳಿಂದ ಅಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಮಾಡುತ್ತಿದ್ದಾರೆ. ಆದರೆ ನವಗ್ರಾಮ ನಿರ್ಮಾಣಗೊಂಡಿರುವ ಜಮೀನಿನ ಮಾಲೀಕರು ನವಗ್ರಾಮವಿರುವ ಜಮೀನು ಈಗಲೂ ನಮ್ಮ ಹೆಸರಿನಲ್ಲಿದ್ದು ಅದಕ್ಕೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜಮೀನು ಮಾಲೀಕರು ತಕರಾರು ಮಾಡಿದಾಗಲೆಲ್ಲ ತಾಲ್ಲೂಕು ಹಂತದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಿವಾದ ಬಗೆಹರಿಸಲು ಪ್ರಯತ್ನಿಸಿದ್ದಾರೆ. ಆದರೂ ವಿವಾದ ಇನ್ನೂ ಜೀವಂತವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.