ADVERTISEMENT

ಹಿಂದೂ ಯುವಕರ ಮೇಲೆ ಹಲ್ಲೆ ಆರೋಪ: ಮುಸ್ಲಿಂ ಮುಖಂಡರ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:36 IST
Last Updated 4 ಅಕ್ಟೋಬರ್ 2025, 6:36 IST
ಶಿರಹಟ್ಟಿಯಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಶೀಲ್ದಾರ್ ಕೆ. ರಾಘವೇಂದ್ರ ರಾವ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು
ಶಿರಹಟ್ಟಿಯಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಶೀಲ್ದಾರ್ ಕೆ. ರಾಘವೇಂದ್ರ ರಾವ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು   

ಶಿರಹಟ್ಟಿ: ‘ಬಾಕಿ ಹಣದ ವಿಚಾರವಾಗಿ ಪಟ್ಟಣದ ಕಡಕೋಳ ರಸ್ತೆಯಲ್ಲಿನ ಅಂಗಡಿಯೊಂದರಲ್ಲಿ ಗುರುವಾರ ನಡೆದಿದ್ದ ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿಗಳ ಮುಂದೆಯೇ ಅಮಾಯಕ ಹಿಂದೂ ಯವಕರ ಮೇಲೆ ಹಲ್ಲೆ ನಡೆಸಿದ ಎಸ್‌ಡಿಪಿಐ ಮುಸ್ಲಿಂ ಗೂಂಡಾಗಳನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಪೇಟೆ ಆಂಜನೇಯ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ, ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಲಾಯಿತು. ನೆಹರೂ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಕೆಲವು ತಾಸು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಕೆ. ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು.

ಶ್ರೀರಾಮ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ‘ಮುಸ್ಲಿಂ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಎಸ್‌ಡಿಪಿಐ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಕೆಲವು ಪೊಲೀಸ್ ಅಧಿಕಾರಿಗಳು ಗುರುವಾರ ನಡೆದ ಗಲಾಟೆ ವೇಳೆ ಹಲ್ಲೆಯನ್ನು ತಡೆದಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಕಳೆದ ತಿಂಗಳು ಉರುಸ್‌ನಲ್ಲಿ ಜಗಳವಾಡುತ್ತಿದ್ದ ಮುಸ್ಲಿಂ ಯುವಕರ ಗುಂಪನ್ನು ಚದುರಿಸಲು ಮುಂದಾದ ಪಿಎಸ್‌ಐ ಚೆನ್ನಯ್ಯ ದೇವೂರ ಅವರನ್ನು ವರ್ಗಾವಣೆ ಮಾಡಲಾಯಿತು. ಮುಸ್ಲಿಂ ಯುವಕರ ಹೇಯ ಕೃತ್ಯಕ್ಕೆ ಬೆಂವಲಿಸುವ ಪಿಎಸ್ಐ ಈರಪ್ಪ ರಿತ್ತಿ ಅವರನ್ನು ಶಿರಹಟ್ಟಿಗೆ ನೇಮಕ ಮಾಡಿದ್ದು, ಹಿಂದೂಗಳ ಸಹನೆ ಕೆರಳಿಸುವಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಲ್ಲೆ ಮಾಡಿದ ಎಸ್‌ಡಿಪಿಐ ಕಾರ್ಯಕರ್ತರನ್ನು ಹಾಗೂ ಹಲ್ಲೆಗೆ ಪ್ರಚೋದಿಸಿದ ಮುಸ್ಲಿಂ ನಾಯಕರನ್ನು ಕೂಡಲೇ ಬಂಧಿಸಬೇಕು. ಮುಸ್ಲಿಂ ಗೂಂಡಾಗಳಿಂದ ಹಲ್ಲೆಗೊಳಗಾದ ಹಿಂದೂ ಯುವಕರಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

ಕಾರ್ಯಕರ್ತ ಸಂತೋಷ ಕುರಿ ಮಾತನಾಡಿ, ‘ರಾತ್ರಿಯಿಡೀ ಕಾರ್ಯಾಚರಣೆ ಮಾಡಿ ಎಸ್‌ಡಿಪಿಐ ಗೂಂಡಾಗಳನ್ನು ಬಂಧಿಸಿದ್ದ ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಆದರೆ ಠಾಣೆಯ ಅಧಿಕಾರಿಗಳು ಅದರಲ್ಲಿ ಕೆಲ ಮುಸ್ಲಿಂ ಮುಖಂಡರುಗಳ ಮೊಮ್ಮಕ್ಕಳನ್ನು ಬಿಟ್ಟು ಕಳುಹಿಸಿದ್ದು, ಈ ಕುರಿತು ಎಸ್ಪಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರವೀಣ ಪಾಟೀಲ, ರಾಜೀವರಡ್ಡಿ ಬೊಮ್ಮನಕಟ್ಟಿ, ಶಂಕರ ಭಾವಿ, ಫಕೀರೇಶ ರಟ್ಟಿಹಳ್ಳಿ, ಈರಣ್ಣ ಅಂಗಡಿ, ಮಹೇಶ ರೋಖಡೆ, ವೆಂಕಟೇಶ ದೊಡ್ಡಮನಿ, ಸೋಮು ಗುಡಿ, ನಾಗರಾಜ ಲಕ್ಕುಂಡಿ, ರಾಮಣ್ಣ ಕಂಬಳಿ, ಯಲ್ಲಪ್ಪ ಇಂಗಳಗಿ, ಈರಣ್ಣ ಪೂಜಾರ, ಪ್ರಾಣೇಶ, ಹರೀಶ ಗೋಸಾವಿ, ಮುತ್ತು ಗೋಸಾವಿ, ಸೋಮುಗೌಡ ಮರಿಗೌಡ್ರ, ಶಶಿ ಪೂಜಾರ ಪಾಲ್ಗೊಂಡಿದ್ದರು.

ಬಿಡುಗಡೆಗೊಂಡವರು ಗಲಾಟೆಯಲ್ಲಿ ಪಾಲ್ಗೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಅವರಿಗೆ ನೋಟಿಸ್ ನೀಡಲಾಗಿದ್ದು ಮುಂದೆ ಪ್ರಕರಣದಲ್ಲಿ ಅವರ ಪಾತ್ರ ಕಂಡುಬಂದರೆ ವಶಕ್ಕೆ ಪಡೆಯಲಾಗುವುದು
ರೋಹನ್ ಜಗದೀಶ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.