ADVERTISEMENT

ಗದಗ ರೈಲ್ವೆ ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ

ಅಮೃತ ಭಾರತ ಸ್ಟೇಷನ್‌ ಯೋಜನೆ ಅಡಿ ಪುನರಾಭಿವೃದ್ಧಿ; ನಾಳೆ ಉದ್ಘಾಟನೆ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 21 ಮೇ 2025, 4:53 IST
Last Updated 21 ಮೇ 2025, 4:53 IST
ಅಮೃತ ಭಾರತ ಸ್ಟೇಷನ್‌ ಯೋಜನೆ ಅಡಿ ಪುನರಾಭಿವೃದ್ಧಿಗೊಂಡಿರುವ ಗದಗ ರೈಲ್ವೆ ನಿಲ್ದಾಣದ ಹೊರನೋಟ
ಅಮೃತ ಭಾರತ ಸ್ಟೇಷನ್‌ ಯೋಜನೆ ಅಡಿ ಪುನರಾಭಿವೃದ್ಧಿಗೊಂಡಿರುವ ಗದಗ ರೈಲ್ವೆ ನಿಲ್ದಾಣದ ಹೊರನೋಟ   

ಗದಗ: ಇಲ್ಲಿನ ಗದಗ ಜಂಕ್ಷನ್‌ ರೈಲು ನಿಲ್ದಾಣಕ್ಕೆ ಅಮೃತ ಭಾರತ ಸ್ಟೇಷನ್‌ ಯೋಜನೆ (ಎಬಿಎಸ್‌ಎಸ್‌) ಅಡಿ ಹೈಟೆಕ್‌ ಸ್ಪರ್ಶ ನೀಡಲಾಗಿದ್ದು, ಆಕರ್ಷಕ ಹೊರಾಂಗಣ ವಿನ್ಯಾಸ ಹಾಗೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಜನರನ್ನು ಆಕರ್ಷಿಸುತ್ತಿದೆ. ಮೇ 22ಕ್ಕೆ ಇದು ಪ್ರಯಾಣಿಕರ ಬಳಕೆಗೆ ಮುಕ್ತವಾಗಲಿದೆ.

2023ರ ಆಗಸ್ಟ್‌ 6ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ವೇದಿಕೆ ಮೂಲಕ ಗದಗ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಎಬಿಎಸ್‌ಎಸ್‌ ಯೋಜನೆ ಅಡಿ ₹23.24 ಕೋಟಿ ಬಿಡುಗಡೆಯಾಗಿತ್ತು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ನಿಲ್ದಾಣವನ್ನು 2023ರ ಸೆಪ್ಟೆಂಬರ್‌ನಲ್ಲಿ ಸಂಪೂರ್ಣ ಕೆಡವಿ, ಒಂದು ವರ್ಷ ಹತ್ತು ತಿಂಗಳ ಅವಧಿಯಲ್ಲಿ ಅತ್ಯಾಧುನಿಕ ರೈಲ್ವೆ ನಿಲ್ದಾಣ ನಿರ್ಮಿಸಲಾಗಿದೆ.

ಪ್ರಸ್ತುತ ಗದಗ ರೈಲ್ವೆ ನಿಲ್ದಾಣವು ಆಧುನಿಕ ಸೌಲಭ್ಯಗಳೊಂದಿಗೆ ಜಿ ಪ್ಲಸ್‌ 1 ಅಂತಸ್ತಿನ ಕಟ್ಟಡ ಹೊಂದಿದೆ. ಚಾವಣಿ ಮತ್ತು ಫ್ಲೋರಿಂಗ್‌ ಇರುವ 570 ಮೀಟರ್‌ ಉದ್ದದ ಪ್ಲಾಟ್‌ಫಾರ್ಮ್‌ ನಿರ್ಮಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಒಂದನೇ ಪ್ಲಾಟ್‌ಫಾರ್ಮ್‌ನಲ್ಲಿ ಎರಡು ಎಸ್ಕಲೇಟರ್‌ಗಳನ್ನು ಅಳವಡಿಸಲಾಗಿದೆ. ಎರಡು ಲಿಫ್ಟ್‌ ಸೌಲಭ್ಯ ಇದೆ. 12 ಮೀಟರ್‌ನಷ್ಟು ವಿಶಾಲವಾದ ಪಾದಚಾರಿ ಮೇಲ್ಸೆತುವೆ ನಿರ್ಮಾಣಗೊಂಡಿದೆ. ಪ್ಲಾಟ್‌ಫಾರ್ಮ್‌ ಕೂಡ 11 ಮೀಟರ್‌ಗೆ ವಿಸ್ತರಣೆಗೊಂಡಿದೆ.

ADVERTISEMENT

ನಾಲ್ಕು ಟಿಕೆಟ್‌ ಕೌಂಟರ್‌, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾದ ಹವಾನಿಯಂತ್ರಿತ ವೇಯ್ಟಿಂಗ್‌ ರೂಂ, ಎಟಿಎಂ ಸೌಲಭ್ಯ, ಕೆಫೆಟೇರಿಯಾ, ಪ್ರಯಾಣಿಕರ ಅನುಕೂಲಕ್ಕಾಗಿ ಡಿಜಿಟಲ್‌ ಮಾಹಿತಿ ಫಲಕಗಳು, ಅತ್ಯಾಧುನಿಕ ಶೈಲಿಯ ಶೌಚಾಲಯ, ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.

ರೈಲ್ವೆ ನಿಲ್ದಾಣದಲ್ಲಿ ಗದಗ ಜಿಲ್ಲೆಯ ಪ್ರವಾಸಿತಾಣಗಳ ಮಾಹಿತಿ ಫಲಕ ಹಾಗೂ ನಕ್ಷೆಯನ್ನೂ ಅಳವಡಿಸಲಾಗಿದೆ. ದೂರದಿಂದ ರಾತ್ರಿ ವೇಳೆ ಗದಗ ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ಡಾರ್ಮೆಂಟ್ರಿ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಸುವ ಅಥವಾ ಪ್ರಯಾಣಿಸಿದ ಟಿಕೆಟ್‌ ತೋರಿಸಿ, ನಿಗದಿತ ಶುಲ್ಕ ಪಾವತಿಸಿ ಪ್ರಯಾಣಿಕರು ಇಲ್ಲಿ ವಿಶ್ರಾಂತಿ ಪಡೆಯಬಹುದಾಗಿದೆ.

ರೈಲ್ವೆ ನಿಲ್ದಾಣದ ಎರಡನೇ ಮಹಡಿಯಲ್ಲಿ 3,800 ಚದರಅಡಿಯಷ್ಟು ವಿಶಾಲವಾದ ಮೀಟಿಂಗ್‌ ಹಾಲ್‌ ನಿರ್ಮಾಣಗೊಂಡಿದೆ. ಪ್ಲಾಟ್‌ಫಾರ್ಮ್‌ 1ರಲ್ಲಿರುವ ಶೆಲ್ಟರ್‌ ಮೇಲೆ ಸೌರ ಫಲಕ ಅಳವಡಿಸಲಾಗಿದೆ. ಜತೆಗೆ ಮಳೆ ನೀರು ಸಂಗ್ರಹಕ್ಕೆ ವಿಶೇಷ ಒತ್ತು ನೀಡಲಾಗಿದೆ.

‘ಕೇಂದ್ರ ಸರ್ಕಾರವು ಅಮೃತ ಭಾರತ ಸ್ಟೇಷನ್‌ ಯೋಜನೆ ಅಡಿ ಗದಗ ರೈಲ್ವೆ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಿಸಿದ್ದು, ಪ್ರಯಾಣಿಕರು ಇಲ್ಲಿನ ಸೌಲಭ್ಯಗಳನ್ನು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿಲ್ದಾಣದಲ್ಲಿನ ಸ್ವಚ್ಛತೆಗೆ ಸಹಕಾರ ನೀಡಬೇಕು’ ಎಂದು ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶ್‌ ಸಿಂಗ್‌ ಬ್ಯಾಳಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಮೃತ ಭಾರತ ಸ್ಟೇಷನ್‌ ಯೋಜನೆ ಅಡಿ ಪುನರಾಭಿವೃದ್ಧಿಗೊಂಡಿರುವ ಗದಗ ರೈಲ್ವೆ ನಿಲ್ದಾಣದ ಹೊರನೋಟ
12 ಮೀಟರ್‌ ವಿಸ್ತಾರದ ಪಾದಚಾರಿ ಮೇಲ್ಸೆತುವೆ
₹23.24 ಕೋಟಿ ವೆಚ್ಚದಲ್ಲಿ ಗದಗ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಮೇ 22ರಂದು ಪ್ರಧಾನಿ ಮೋದಿ ಅವರಿಂದ ವರ್ಚುವಲ್‌ ವೇದಿಕೆ ಮೂಲಕ ಉದ್ಘಾಟನೆ ಐಷಾರಾಮಿ, ಆಧುನಿಕ ಸೌಲಭ್ಯಗಳಿಂದ ಗಮನ ಸಳೆಯುತ್ತಿರುವ ಗದಗ ಜಂಕ್ಷನ್‌
ನೈಋತ್ಯ ರೈಲ್ವೆ ವಿಭಾಗದಲ್ಲಿ ಗದಗ ಧಾರವಾಡ ಬಾಗಲಕೋಟೆ ಗೋಕಾಕ ಮತ್ತು ಮುನಿರಾಬಾದ್‌ ರೈಲ್ವೆ ನಿಲ್ದಾಣಗಳನ್ನು ಎಬಿಎಸ್‌ಎಸ್‌ ಯೋಜನೆ ಅಡಿ ಪುನರಾಭಿವೃದ್ಧಿಗೊಳಿಸಲಾಗಿದೆ. ಪ್ರಧಾನಿ ಮೋದಿ ಅವರು ಗುರುವಾರ ಬೆಳಿಗ್ಗೆ 9.30ಕ್ಕೆ ಉದ್ಘಾಟಿಸುವರು
ಮಂಜುನಾಥ್‌ ಕನಮಡಿ ನೈಋತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹುಬ್ಬಳ್ಳಿ
ಎಬಿಎಸ್‌ಎಸ್‌ ಯೋಜನೆ ಅಡಿ ಮೇಲ್ದರ್ಜೆಗೇರಿರುವ ಗದಗ ರೈಲ್ವೆ ನಿಲ್ದಾಣ ಪ್ರಯಾಣಿಕರಿಗೆ ವಿಶೇಷ ಅನುಭೂತಿ ಒದಗಿಸಲಿದೆ. ಇಲ್ಲಿನ ಅತ್ಯಾಧುನಿಕ ಸೌಕರ್ಯಗಳಿಂದಾಗಿ ನಮ್ಮ ನಿಲ್ದಾಣ ಪ್ರಯಾಣಿಕ ಸ್ನೇಹಿ ಆಗುವ ವಿಶ್ವಾಸ ಇದೆ
ಸಿರಿಲ್‌ ಕಮರ್ಷಿಯಲ್‌ ಇನ್‌ಸ್ಪೆಕ್ಟರ್‌ ಗದಗ ರೈಲ್ವೆ ನಿಲ್ದಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.