ADVERTISEMENT

100 ಶಾಲೆಗಳಲ್ಲಿ ಪಿಂಕ್‌ ಶೌಚಾಲಯ ಗುರಿ: ಎಚ್‌.ಕೆ.ಪಾಟೀಲ ಸೂಚನೆ

ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 2:08 IST
Last Updated 11 ಫೆಬ್ರುವರಿ 2021, 2:08 IST
ಎಚ್‌.ಕೆ.‍‍ಪಾಟೀಲ
ಎಚ್‌.ಕೆ.‍‍ಪಾಟೀಲ   

ಗದಗ: ‘ಜಿಲ್ಲೆಯ 100 ಹೆಣ್ಣು ಮಕ್ಕಳ ಸರ್ಕಾರಿ ಶಾಲೆಗಳಲ್ಲಿ 100 ದಿನಗಳಲ್ಲಿ 100 ಪಿಂಕ್‌ ಶೌಚಾಲಯಗಳನ್ನು ಸ್ಥಾಪಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ತಿಳಿಸಿದರು.

ಗದಗ ಬೆಟಗೇರಿ ನಗರಸಭೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅದೇ ರೀತಿಯಾಗಿ, 200 ದಿನಗಳ ಅವಧಿಯಲ್ಲಿ100 ಸರ್ಕಾರಿ ಶಾಲೆಯಲ್ಲಿ ಗಂಡು ಮಕ್ಕಳಿಗಾಗಿ 100 ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಅದಕ್ಕೆ ಅಗತ್ಯವಿರುವ ಯೋಜನೆ, ಹಣಕಾಸು, ಅನುಮತಿ ಪಡೆದು ಈ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

‘ಹಳ್ಳಿಗಳಲ್ಲಿರುವ ಪ್ರತಿ ಮನೆಮನೆಗೆ ನಳದಲ್ಲಿ ನೀರು ತಲುಪಿಸಬೇಕು ಎಂಬ ಆಶಯದಿಂದ ಜಲಾಮೃತ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ಮುಂದಿನ ಮೂರು ತಿಂಗಳಲ್ಲಿ ಪ್ರತಿಹಳ್ಳಿಯ ಪ್ರತಿ ಮನೆಗೆ ತುಂಗಭದ್ರಾ ಕುಡಿಯುವ ನೀರು ತಲುಪಲಿದೆ. ಆ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿ, ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಿಗೆ ವಿಶೇಷ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಜಲಜೀವನ ಮಿಷನ್‌ ವಿಶೇಷ ಕಾರ್ಯಕ್ರಮವಾಗಿದ್ದು, ನಮ್ಮ ದೇಶದಲ್ಲಿ ಎಲ್ಲ ಮನೆಗಳಿಗೂ ನಳದ ಮೂಲಕ ನದಿ ನೀರು ತಲುಪಿಸುವ ಗುರಿ ಹೊಂದಲಾಗಿದೆ. ಈ ಯೋಜನೆ ಅನುಷ್ಠಾನದಲ್ಲಿ ನಮ್ಮ ಜಿಲ್ಲೆ ಮೊದಲನೇಯದಾಗಿ ಹೊರಹೊಮ್ಮುವಂತಾಗಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೂರು ತಿಂಗಳಲ್ಲಿ ಈ ಕಾರ್ಯಕ್ರಮ ಪೂರ್ಣಗೊಳಿಸಿದರೆ ಬೇಸಿಗೆಯಲ್ಲೂ ನೀರಿನ ತೊಂದರೆ ಕಾಡದು’ ಎಂದು ಅವರು ಹೇಳಿದರು.

‘ನಿರಂತರ ನೀರು ಪೂರೈಕೆಯಲ್ಲಿ ಬಹಳಷ್ಟು ವ್ಯತ್ಯಯ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಚಾರವಾಗಿ ವಿಧಾನಸಭೆಯಲ್ಲಿ ಸುದೀರ್ಘವಾದ ಚರ್ಚೆಯಾಗಿದ್ದು, ಸಚಿವ ಬಸವರಾಜು ಅವರು ಸಮಸ್ಯೆ ಪರಿಹರಿಸಲು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿರುವ ಸ್ಥಳಗಳಲ್ಲಿ ಪಂಪ್‌ ಅಳವಡಿಸುವುದಕ್ಕೆ ಸೂಕ್ತ ನಿರ್ದೇಶನ ನೀಡಿದ್ದಾರೆ’ ಎಂದು ಹೇಳಿದ್ದಾರೆ.

‘ಗದಗ ತಾಲ್ಲೂಕಿನಲ್ಲಿ 170 ತೋಟಗಳನ್ನು ಮಾಡುವ ಗುರಿ ಹೊಂದಿದ್ದು, ಈಗಾಗಲೇ 140 ತೋಟಗಳನ್ನು ಪೂರ್ಣಗೊಂಡಿವೆ. ಈ ಆರ್ಥಿಕ ವರ್ಷದಲ್ಲಿ ಹೆಚ್ಚುವರಿ 30 ತೋಟಗಳು ಸೇರಿದಂತೆ ಒಟ್ಟು 200 ತೋಟ ನಿರ್ಮಿಸುವ ಗುರಿ ಹೊಂದಲಾಗಿದೆ’ ಎಂದು ಅವರು ತಿಳಿಸಿದರು.

‘ರಂಗಮಂದಿರಕ್ಕೆ ಭೀಮಸೇನರ ಹೆಸರು’
‘ಪಂಡಿತ್‌ ಭೀಮಸೇನ ಜೋಷಿ ಅವರು ಗದಗ ಜಿಲ್ಲೆಯ ಹೆಮ್ಮೆಯ ಪುತ್ರ. ಅವರ ಜನ್ಮಶತಮಾನೋತ್ಸವ ನಡೆಯುತ್ತಿರುವ ಈ ಸಮಯದಲ್ಲಿ ನಗರದಲ್ಲಿರುವ ರಂಗಮಂದಿರಕ್ಕೆ ಅವರ ಹೆಸರನ್ನು ನಾಮಕರಣ ಮಾಡುವ ನಿರ್ಧಾರ ಮಾಡಲಾಗಿದೆ. ಸರ್ಕಾರ ಅದಕ್ಕೆ ಅನುಮತಿ ನೀಡಿದೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.