ADVERTISEMENT

ತಪ್ಪು ಎನ್ನುವುದಾದರೆ ಕ್ರಮಕೈಗೊಳ್ಳಲಿ: ಎಚ್‌.ಕೆ.ಪಾಟೀಲ ಸವಾಲು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:41 IST
Last Updated 28 ಫೆಬ್ರುವರಿ 2021, 5:41 IST

ಗದಗ: ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದ ದಿನದಂದು ಮನವಿ ನೀಡಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮದ ಎಚ್ಚರಿಕೆಯ ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿಪಾಟೀಲ ಮಾತಿಗೆ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ‘ಸಚಿವ ಸಿ.ಸಿ.ಪಾಟೀಲ ಅವರಿಂದ ಈಚೆಗೆ ಹೆದರಿಸುವ ಪ್ರವೃತ್ತಿ ಆರಂಭವಾಗಿದೆ. ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರನ್ನು ಪಾಕಿಸ್ತಾನಿ, ಖಲಿಸ್ತಾನಿ ಎಂಬ ಆರೋಪವನ್ನು ಸಚಿವರು ಮಾಡುತ್ತಿದ್ದಾರೆ. ಮನವಿ ನೀಡಲು ಬಂದ ವೇಳೆ ಜಿಲ್ಲಾಧಿಕಾರಿ ಇರಲಿಲ್ಲ. ಆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು, ರೈತರನ್ನು ಹೆದರಿಸುತ್ತಿದ್ದಾರೆ’ ಎಂದು ದೂರಿದರು.

‘ನಾವು ರೈತರು, ಅಂಜುವವರಲ್ಲ. ಗದುಗಿನ ಗಂಡು ಭೂಮಿಯಿಂದ ಬಂದ ನಾವು, ಅಂಜಿ ಓಡಿ ಹೋಗುತ್ತಾರೆ ಅಂದುಕೊಂಡಿದ್ದೀರಾ? ಟ್ರ್ಯಾಕ್ಟರ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದರೆ ತಪ್ಪೇ’ ಎಂದು ಪ್ರಶ್ನಿಸಿದರು.

ADVERTISEMENT

‘ಡಿಸಿ ಕಚೇರಿಯೊಳಗೆ ಸ್ಯಾಂಡ್ ಮಾಫಿಯಾ ಸೇರಿ ಮತ್ತಿತರ ಅಕ್ರಮಗಳನ್ನು ಮಾಡುವವರು ಬೆಂಜ್‍ ಕಾರಿನಲ್ಲಿ ಬರಬಹುದು. ಆದರೆ, ರೈತರು ಟ್ರ್ಯಾಕ್ಟರ್ ರ‍್ಯಾಲಿ ಮೂಲಕ ಡಿಸಿ ಕಚೇರಿಗೆ ಬಂದರೆ ತಪ್ಪು ಎನ್ನುವುದಾದರೆ ಕ್ರಮಕೈಗೊಳ್ಳಲಿ’ ಎಂದು ಸವಾಲು ಹಾಕಿದರು.

ಈ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ವಿರುದ್ಧ ಸಹ ಹರಿಹಾಯ್ದು ಎಚ್.ಕೆ.ಪಾಟೀಲ, ‘ನಿಮ್ಮ ಸರ್ಕಾರ ನುಡಿದಂತೆ ನಡೆಯಲಿಲ್ಲ. ಮಾತು ತಪ್ಪಿದ ಭ್ರಷ್ಟ ಸರ್ಕಾರ ಅಂತ ಒಪ್ಪಿಕೊಂಡಿದ್ದೀರಿ ಎಂಬ ಭಾವನೆ ನಮ್ಮದು’ ಅಂತ ಅಣಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.