ADVERTISEMENT

ಅಶಕ್ತ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡಿ: ಶಾಸಕ ಎಚ್‌.ಕೆ.ಪಾಟೀಲ

ಗದಗ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,381 ಮಕ್ಕಳಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 2:12 IST
Last Updated 11 ಜೂನ್ 2021, 2:12 IST

ಗದಗ: ‘ಕೋವಿಡ್‌ನಿಂದ ಆದ ಸಾವು ನೋವುಗಳ ಬಗ್ಗೆ ಸರ್ಕಾರ, ಜಿಲ್ಲಾಡಳಿತಗಳು ನಿಖರ ಅಂಕಿ ಅಂಶಗಳನ್ನು ನೀಡುತ್ತಿಲ್ಲ’ ಎಂದು ಶಾಸಕ ಎಚ್‌.ಕೆ.ಪಾಟೀಲ ಆರೋಪಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಗದಗ ಜಿಲ್ಲೆಯಲ್ಲಿ ಎರಡನೇ ಅಲೆ ಸಂದರ್ಭದಲ್ಲಿ 1,381 ಮಕ್ಕಳಿಗೆ ಸೋಂಕು ತಗುಲಿದೆ. ಆದರೆ, ಈ ವಿಚಾರವನ್ನು ಇವತ್ತಿನವರೆಗೆ ಸ್ಥಳೀಯ ಶಾಸಕರು, ಸಾರ್ವಜನಿಕರು ಅಥವಾ ಮಾಧ್ಯಮದವರಿಗೆ ತಿಳಿಸಿರಲಿಲ್ಲ’ ಎಂದು ಅವರು ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು.

‘ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಏನೇನೂ ಸಿದ್ಧತೆಗಳು ನಡೆದಿಲ್ಲ. ಈಗ ಇರುವ ವೆಂಟಿಲೇಟರ್‌ಗಳು ಮಕ್ಕಳ ಚಿಕಿತ್ಸೆಗೆ ಆಗುವುದಿಲ್ಲ. ಆದ್ದರಿಂದ, ಸರ್ಕಾರ ಮೂರನೇ ಅಲೆ ಎದುರಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.

ADVERTISEMENT

‘ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಸೋಂಕಿಗೆ ತುತ್ತಾಗುವ ಸಂಭವ ಹೆಚ್ಚಿದೆ. ಆದ್ದರಿಂದ, ಈಗಲೇ ಅಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ಆರಂಭಿಸಬೇಕು. ಸಂಭಾವ್ಯ ಅಪಾಯದಿಂದ ಅವರನ್ನು ರಕ್ಷಿಸಬೇಕು’ ಎಂದು ಸಲಹೆ ನೀಡಿದರು.

‘ಸೋಂಕು ತಗುಲಿದ ಮಕ್ಕಳಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಸರ್ಕಾರ ನಿರ್ದಿಷ್ಟ ಮಾರ್ಗಸೂಚಿ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್‌ ಸಂಕಷ್ಟದಿಂದ ಜನರು ಬಳಲುತ್ತಿದ್ದಾರೆ. ಆದರೆ, ಸರ್ಕಾರ ಹಾಗೂ ಬಿಜೆಪಿ ಪಕ್ಷದ ಒಳಗೆ ಸಿಎಂ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿದೆ. ಅದು ಅವರ ಪಕ್ಷದ ಆಂತರಿಕ ಸಂಗತಿ ನಿಜ. ಆದರೆ, ಇವರ ಕಿತ್ತಾಟದಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದು ಜನರ ಬಗ್ಗೆ ಸರ್ಕಾರ ಹೊಂದಿರುವ ನಿಷ್ಕಾಳಜಿ ತೋರುತ್ತದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.