ADVERTISEMENT

ಅಕ್ರಮ ಗಣಿಗಾರಿಕೆ ಪ್ರಕರಣ | ಡಿಕೆಶಿ ಮೆಚ್ಚಿಸಲು ಸಿಎಂಗೆ ಪತ್ರ: ಆರೋಪ

ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ: ವೆಂಕನಗೌಡ ಕಿಡಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 5:31 IST
Last Updated 26 ಜೂನ್ 2025, 5:31 IST
ಗೋವಿಂದಗೌಡ್ರ
ಗೋವಿಂದಗೌಡ್ರ   

ಗದಗ: ‘ಸಚಿವ ಎಚ್‌.ಕೆ.ಪಾಟೀಲ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಮೆಚ್ಚಿಸಲು ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಗೆ ಒತ್ತಾಯಿಸಿ ಸಿಎಂಗೆ ಪತ್ರ ಬರೆದಿದ್ದಾರೆಯೇ ಹೊರತು; ರಾಜ್ಯದ ಜನರ ಬಗ್ಗೆ ಇರುವ ಕಳಕಳಿಯಿಂದಲ್ಲ’ ಎಂದು ಜೆಡಿಎಸ್‌ ರಾಜ್ಯ ವಕ್ತಾರ ವೆಂಕನಗೌಡ ಆರ್‌.ಗೋವಿಂದಗೌಡ್ರ ಆರೋಪ ಮಾಡಿದರು.

‘ಮುಂದೆ ಅಧಿಕಾರ ಹಸ್ತಾಂತರ ನಡೆಯಲಿದೆ, ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗುತ್ತಾರೆ ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆದಿದೆ. ನಾಳೆ ಡಿಕೆಶಿ ಸಿಎಂ ಆದರೆ ಅವರ ಸಚಿವ ಸಂಪುಟದಲ್ಲಿ ಸ್ಥಾನ ‍ಪಡೆಯುವ ಉದ್ದೇಶದಿಂದಲೇ ಎರಡು ವರ್ಷಗಳ ನಂತರ ಪತ್ರ ಬರೆದಿದ್ದಾರೆ’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಅಕ್ರಮ ಗಣಿಗಾರಿಕೆಯಿಂದ ₹1.50 ಲಕ್ಷ ಕೋಟಿಯಷ್ಟು ರಾಜ್ಯದ ಸಂಪತ್ತು ಲೂಟಿಯಾಗಿದೆ. ಅದನ್ನು ಮರಳಿ ತರಲು ಕ್ರಮವಹಿಸಬೇಕು ಎಂಬ ಪತ್ರದ ಹಿಂದೆ ರಾಜಕೀಯ ಉದ್ದೇಶ ಇರುವುದು ಇದರಿಂದ ಸ್ಪಷ್ಟವಾಗಿದೆ. ಇವರ ಪತ್ರಕ್ಕೆ ಸಿಎಂ ಸ್ಪಂದಿಸುವುದಿಲ್ಲ ಎಂಬ ಕಾರಣಕ್ಕೆ ಅದನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ಕೇಂದ್ರ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ದೇವರು, ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿ. ಈ ಕಾರಣಕ್ಕಾಗಿಯೇ ಅವರು ರಾಮಾಯಣದ ಹೆಸರುಗಳನ್ನು ತೆಗೆದುಕೊಂಡು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ:

‘ಇಂದಿರಾ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ದೇಶ ತುರ್ತು ಪರಿಸ್ಥಿತಿ ಕಂಡು 50 ವರ್ಷಗಳಾಗಿವೆ. ಜನರ ಹಕ್ಕುಗಳನ್ನು ಹತ್ತಿಕ್ಕಿದ ಕಾಂಗ್ರೆಸ್‌ ಈವರೆಗೆ ದೇಶದ ಜನರ ಕ್ಷಮೆ ಕೇಳಿಲ್ಲ. ಮಾತೆತ್ತಿದರೆ ಪ್ರಜಾಪ್ರಭುತ್ವ ಎನ್ನುವ ಕಾಂಗ್ರೆಸ್‌ ನಾಯಕರಿಗೆ ಪ್ರಜಾಪ್ರಭುತ್ವ, ಅಂಬೇಡ್ಕರ್‌ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ’ ಎಂದು ದೂರಿದರು.

‘ಗದಗ ಜಿಲ್ಲೆಯ ಸಾಕಷ್ಟು ಸ್ಥಳೀಯ ಸಂಸ್ಥೆಗಳಲ್ಲಿ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿಯಾಗಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಸಚಿವ ಎಚ್‌.ಕೆ.ಪಾಟೀಲರು ಚುನಾವಣಾ ಪ್ರಕ್ರಿಯೆಗೆ ಇರುವ ಅಡೆತಡೆಗಳನ್ನು ತ್ವರಿತವಾಗಿ ನಿವಾರಿಸಿ, ಜನಪ್ರತಿನಿಧಿಗಳ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು. ಈ ಮೂಲಕ ತಾವು ಪ್ರಜಾಪ್ರಭುತ್ವದ ಪರ ಇದ್ದೇನೆ’ ಎಂಬುದನ್ನು ಸಾಬೀತು ಮಾಡಬೇಕು ಎಂದರು.

‘ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿಗಳು ಸಾಕಷ್ಟು ನಡೆಯುತ್ತಿವೆ. ಅಕ್ರಮ ಆಸ್ತಿ, ಹಣ ಪತ್ತೆಯಾಗಿದೆ. ಆದರೆ, ಭ್ರಷ್ಟ ಅಧಿಕಾರಿಗಳು ಮತ್ತೇ ಇಲ್ಲೇ ಅಧಿಕಾರ ನಡೆಸುತ್ತಿದ್ದಾರೆ. ಅವರನ್ನು ಇಲ್ಲಿಂದ ಹೊರಹಾಕುವ ಮೂಲಕ ನೀವು ಭ್ರಷ್ಟಾಚಾರದ ವಿರುದ್ಧ ಇದ್ದೀರಿ ಎಂಬುದನ್ನೂ ಜನರಿಗೆ ಗೊತ್ತಾಗಿಸಬೇಕು’ ಎಂದರು.

ಬಸವರಾಜ ಅಪ್ಪಣ್ಣವರ, ರಮೇಶ್‌, ಸಂತೋಷ್‌ ಪಾಟೀಲ, ಅಭಿಷೇಕ ಕಂಬಳಿ, ಪ್ರಫುಲ್‌ ಪುಣೇಕರ, ಹರೀಶ್‌, ಎಂ.ಎಸ್‌.ಪವರ್ತಗೌಡ್ರ ಇದ್ದರು.

ಅವಳಿ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಊರಿನ ಜನ ಎಚ್‌.ಕೆ.ಪಾಟೀಲರಿಗೆ ಮತ ಹಾಕಿದ್ದು ಅವರು ಕನಿಷ್ಠ 15 ದಿನಕ್ಕೆ ಒಮ್ಮೆಯಾದರೂ ತುಂಗಭದ್ರಾ ನೀರು ಕುಡಿಸುವ ವ್ಯವಸ್ಥೆ ಮಾಡಬೇಕು
ವೆಂಕನಗೌಡ ಆರ್‌. ಗೋವಿಂದಗೌಡ್ರ ಜೆಡಿಎಸ್‌ ರಾಜ್ಯ ವಕ್ತಾರ
ಆಗಸ್ಟ್‌ನಲ್ಲಿ ನಿಖಿಲ್‌ ಗದಗ ಜಿಲ್ಲಾ ಪ್ರವಾಸ
ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಗಸ್ಟ್‌ನಲ್ಲಿ ಗದಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿಂದೆ ಗದಗ ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಬಲವಾಗಿತ್ತು. ಅದನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ವೆಂಕನಗೌಡ ಆರ್‌.ಗೋವಿಂದಗೌಡ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.