ಶಿರಹಟ್ಟಿ: ಸರ್ಕಾರದ ನಿಯಮಗಳನ್ನು ಪಾಲಿಸದೆ ನಾಯಿಕೊಡೆಗಳಂತೆ ಎತ್ತರೆತ್ತರಕ್ಕೆ ತಲೆ ಎತ್ತುತ್ತಿರುವ ಮೊಬೈಲ್ ಗೋಪುರಗಳ ಸಂಖ್ಯೆ ತಾಲ್ಲೂಕಿನಾದ್ಯಂತ ಹೆಚ್ಚುತ್ತಿದ್ದು, ಸಾರ್ವಜನಿಕರು ಹಾಗೂ ಪ್ರಾಣಿ ಸಂಕುಲದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲಿ ಅಕ್ರಮವಾಗಿ ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ಮೊಬೈಲ್ ಟವರ್‌ಗಳು ತಲೆ ಎತ್ತುತ್ತಿವೆ. ಸ್ಥಾಪನೆ ವೇಳೆ ನಿಯಮಾವಳಿಗಳನ್ನು ಪಾಲಿಸದೇ ಇರುವುದು ಒಂದು ಕಡೆಯಾದರೆ; ಇನ್ನೊಂದೆಡೆ ಪಕ್ಷಿಸಂಕುಲ ಅವನತಿಯತ್ತ ಸಾಗುತ್ತಿದೆ. ಅಲ್ಲದೇ, ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ತಾಲ್ಲೂಕಿನಲ್ಲಿ ಈಗಾಗಲೇ ಅಳವಡಿಸಲಾದ ಮೊಬೈಲ್ ಟವರ್‌ಗಳ ಪೈಕಿ ಶೇ 90ರಷ್ಟು ಮಂದಿ ಅನುಮತಿಯನ್ನೇ ಪಡೆದುಕೊಂಡಿಲ್ಲ ಎಂಬುದು ಪರಿಸರವಾದಿಗಳ ಆರೋಪವಾಗಿದೆ.
ಪೈಪೋಟಿ ಮೇಲೆ ಹೆಚ್ಚಳ:
ಮೊಬೈಲ್ ಟವರ್‌ಗಳು ಅಕ್ರಮವಾಗಿ ತಲೆ ಎತ್ತುವ ಮೂಲಕ ದೊಡ್ಡ ಮಾಫಿಯಾದಂತೆ ಬೆಳೆದಿದ್ದು, ಪೈಪೋಟಿಯ ಮೇಲೆ ಟವರ್‌ಗಳ ಸಂಖ್ಯೆ ಹೆಚ್ಚುತ್ತಲಿದೆ ಎಂದು ಸಾರ್ವಜನಿಕರು ದೂರುತ್ತಾರೆ. ಅಕ್ರಮವಾಗಿ ಟವರ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಯಾರ ಬಳಿ ಕೇಳಬೇಕು ಎನ್ನುವ ಪ್ರಶ್ನೆ ಅವರಿಗೆ ಎದುರಾಗಿದೆ.
ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಯಾವುದೇ ಮೊಬೈಲ್ ಟವರ್ ನಿರ್ಮಿಸಬೇಕಾದರೆ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಅಗ್ನಿಶಾಮಕದಳ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ (ಎನ್ಒಸಿ) ಪಡೆಯುವುದು ಕಡ್ಡಾಯ. ಆದರೆ, ಖಾಸಗಿ ಮೊಬೈಲ್ ಕಂಪನಿಗಳು ಈ ನಿಯಮಗಳನ್ನು ಗಾಳಿಗೆ ತೂರಿ ಟವರ್ ನಿರ್ಮಿಸುತ್ತಿವೆ. ಜತೆಗೆ ಹೀಗೆ ಅಕ್ರಮವಾಗಿ ಮೊಬೈಲ್ ಟವರ್ ಅಳವಡಿಸಿದ್ದರ ಪರಿಣಾಮವಾಗಿ ಸರ್ಕಾರದ ಬೊಕ್ಕಸಕ್ಕೂ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಟವರ್ ನಿರ್ಮಾಣದ ವ್ಯಾಪಾರ:
ಇತ್ತೀಚೆಗಂತೂ ಮೊಬೈಲ್ ಟವರ್ ನಿರ್ಮಾಣ ದೊಡ್ಡ ವ್ಯಾಪಾರವಾಗಿ ಮಾರ್ಪಟ್ಟಿದ್ದು, ಪಟ್ಟಣದಲ್ಲಿ ಮನೆಯ ಮಹಡಿಗಳ ಮೇಲೆ ಅಳವಡಿಸಲಾಗುತ್ತಿದೆ. ತಿಂಗಳಿಗೆ ಇಲ್ಲವೇ ವರ್ಷಕ್ಕೆ ಇಂತಿಷ್ಟು ಬಾಡಿಗೆ ನಿಗದಿ ಮಾಡಿ ಸಂಬಂಧಪಟ್ಟ ದಾಖಲೆಗಳಿಲ್ಲದೆ ಕರಾರು ಮಾಡಿಕೊಳ್ಳುತ್ತಿದ್ದಾರೆ. 4ಜಿ, 5ಜಿ ಎಂದು ತಾಂತ್ರಿಕತೆ ಮುಂದುವರಿದಂತೆಲ್ಲಾ ಪರಿಸರವನ್ನು ವಿನಾಶಕ್ಕೆ ತಳ್ಳಲಾಗುತ್ತಿದೆ. ಊರಿನ ಮಧ್ಯ ಭಾಗದಲ್ಲಿ ಮೊಬೈಲ್ ಟವರ್‌ಗಳು ತಲೆ ಎತ್ತುತ್ತಿವೆ. ಸಂಪರ್ಕ ಸಾಧಿಸಲು ನೆರವಾಗುವ ಈ ಮೊಬೈಲ್ ಟವರ್‌ಗಳು ಜೀವಕ್ಕೆ ಹಾನಿಕಾರಕವೂ ಹೌದು ಎನ್ನುತ್ತಾರೆ ಪ್ರಜ್ಞಾವಂತರು.
ಹೈಕೋರ್ಟ್ ಆದೇಶ:
ದೂರಸಂಪರ್ಕ ಜಾಲಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವ ಖಾಸಗಿ ಮೊಬೈಲ್ ಕಂಪನಿಗಳು, ಮೊಬೈಲ್ ಟವರ್‌ಗಳನ್ನು ನಿರ್ಮಿಸಲು, ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು ಎಂಬ ವಿಚಾರದ ಹಿನ್ನೆಲೆಯಲ್ಲಿ 2009ರಲ್ಲಿ ಹೈಕೋರ್ಟ್ ಮೊರೆ ಹೋದವು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮ್ ಮೋಹನ್ ರೆಡ್ಡಿ, ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಕಟ್ಟುವುದಕ್ಕೆ ವಿನಾಯಿತಿ ನೀಡಿತು. ಆದರೆ, ಅಳವಡಿಸಲು ಇರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿತ್ತು.
ಮರೆಯಾದ ಗುಬ್ಬಚ್ಚಿ:
ಮೊಬೈಲ್ ಟವರ್ ಹೊರ ಸೂಸುವ ವಿಕಿರಣಗಳಿಂದ ಗುಬ್ಬಚ್ಚಿ ಪಕ್ಷಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಕಣ್ಮರೆಯಾಗಿದೆ. ವೈದ್ಯರ ಪ್ರಕಾರ ಈ ರೇಡಿಯೊ ತರಂಗಗಳು ಮಕ್ಕಳು, ವೃದ್ಧರ ಮೇಲೆ ಮಾತ್ರವಲ್ಲದೇ ಗರ್ಭಿಣಿಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಬೈಲ್ ಟವರ್ ವಿಕಿರಣಗಳ ಬಗ್ಗೆ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಎಲೆಕ್ಟ್ರಿಕಲ್ ವಿಭಾಗ ಅಧ್ಯಯನ ನಡೆಸಿದ್ದು, ಈ ವಿಕಿರಣಗಳಿಂದ ಜನಸಾಮಾನ್ಯರು, ಪ್ರಾಣಿ-ಪಕ್ಷಿಗಳೊಂದಿಗೆ ಪರಿಸರಕ್ಕೂ ಹಾನಿಯಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ ಎಂದು ಹೇಳಲಾಗುತ್ತಿದೆ.
ಅಧಿಕಾರಿಗಳ ಬೇಜವಾಬ್ದಾರಿ:
ಈಗಾಗಲೇ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಅಳವಡಿಸಲಾದ ಬಹುತೇಕ ಮೊಬೈಲ್ ಟವರ್ ಕಂಪನಿಗಳು ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ತೆಗೆದುಕೊಂಡಿಲ್ಲ. ಶಿರಹಟ್ಟಿ ಪಟ್ಟಣದ ಫಕೀರೇಶ್ವರ ನಗರದ ಪಕ್ಕದಲ್ಲಿನ ಡಬಾಲಿ ಅವರ ಜಾಗೆಯಲ್ಲಿ ಅಳವಡಿಸಲಾದ ಖಾಸಗಿ ಕಂಪನಿಯ ಮೊಬೈಲ್ ಟವರ್ ಅಳವಡಿಸಲು ಪಂಚಾಯಿತಿಯಿಂದ ಯಾವುದೇ ಪರವಾನಗಿ ಪಡೆದಿಲ್ಲ. ತಾಲ್ಲೂಕಿನ ಕಡಕೋಳ ಗ್ರಾಮದ ವೀರಪ್ಪ ಚಿಕ್ಕಪ್ಪ ಅಂಗಡಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾಂಪೌಂಡ್ ಹತ್ತಿರ ಮೊಬೈಲ್ ಟವರ್ ನಿರ್ಮಿಸಲಾಗಿದ್ದು, ನಿತ್ಯ ಜೀವಭಯದಲ್ಲಿ ತರಗತಿಗಳು ನಡೆಯುತ್ತಿವೆ.
ಹೀಗೆ ತಾಲ್ಲೂಕಿನಲ್ಲಿ ಸಾಕಷ್ಟು ಅನಧಿಕೃತ ಮೊಬೈಲ್ ಟವರ್ ನಿರ್ಮಾಣ ಮಾಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ತೆಗೆದುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆಗಳು ಎದುರಾಗಬಹುದು ಎಂದು ಸಾರ್ವಜನಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಟವರ್ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯಿಂದ ಪರವಾನಗಿ ಪಡೆದಿಲ್ಲ. ಅನಧಿಕೃತವಾಗಿ ನಿರ್ಮಾಣಗೊಂಡ ಟವರ್‌ಗಳ ಪರಿಶೀಲನೆ ಮಾಡಲಾಗುವುದುಸವಿತಾ ತಾಂಬ್ರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಪಟ್ಟಣದಲ್ಲಿನ ಮೊಬೈಲ್ ಟವರ್‌ಗಳಿಂದಾಗಿ ಸಾರ್ವಜನಿಕರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಟವರ್‌ಗಳ ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಹೋರಾಟ ಕೈಗೊಳ್ಳಲಾಗುವುದುಸಂತೋಷ ಕುರಿ ಸಾಮಾಜಿಕ ಹೋರಾಟಗಾರ
ಈ ಟವರ್ ಕಂಬ ಹಾಕೋದ್ರಿಂದ ನಮ್ಮ ಜಾಗದ ಬೆಲೆನಾ ಕಡ್ಮಿ ಆಗೆತ್ರಿ. ಕಂಬ ಮನಿ ಪಕ್ಕದಲ್ಲಿದ್ರ ದೊಡ್ಡ ದೊಡ್ಡ ರೋಗ ಬರ್ತಾವು. ಅದು ಅಲ್ದಾ ಅಂಗವಿಕಲ್ರಾಗ್ತಾರಾ ಅನ್ನೊದು ಕೇಳಿನಿ ಇದನ್ನು ತಗ್ಸಿ ಪುಣ್ಯ ಕಟ್ಕೋರಿಮಾಂತೇಶ ಗಾಡಿ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.