ಲಕ್ಷ್ಮೇಶ್ವರ: ‘ದೇವಸ್ಥಾನಗಳಲ್ಲಿ ಕರ್ಮ ಪ್ರಧಾನ ಕ್ರಿಯೆ ಹಾಗೂ ಮಠಗಳಲ್ಲಿ ಜ್ಞಾನ ಪ್ರಧಾನ ಕ್ರಿಯೆಗಳು ನಡೆಯುತ್ತವೆ. ಇದೇ ದೇವಸ್ಥಾನ ಮತ್ತು ಮಠಗಳ ನಡುವಿನ ವ್ಯತ್ಯಾಸ. ಭಾರತವು ಋಷಿ–ಮುನಿಗಳ ಪರಂಪರೆ, ಆಚಾರ–ವಿಚಾರಗಳಿಂದ ಕೂಡಿದ ದೇಶ’ ಎಂದು ಶಿರಹಟ್ಟಿ ಭಾವೈಕ್ಯತೆ ಸಂಸ್ಥಾನಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಶಿಗ್ಲಿ ಗ್ರಾಮದಲ್ಲಿ ಕೊಟ್ಟೂರೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಗುರುವಾರ ನಡೆದ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘16ನೇ ಶತಮಾನದಲ್ಲಿ ಕರ್ನಾಟಕದ ಪಂಚ ಗಣಾಧೀಶ್ವರರಲ್ಲಿ ಕೊಟ್ಟೂರು ಬಸವೇಶ್ವರರು ಪ್ರಮುಖರು. ಧರ್ಮೋಪದೇಶವೇ ಪಂಚ ಗಣಾಧೀಶ್ವರರ ಕೆಲಸವಾಗಿತ್ತು. ಅವರು ಮೂಡ ನಂಬಿಕೆಗಳನ್ನು ಹೊಡದೋಡಿಸಿದರು. ಪ್ರತಿವರ್ಷ ಕೊಟ್ಟೂರು ಜಾತ್ರೆಗೆ ದಲಿತರ ಮನೆಯಿಂದ ಗಿಣ್ಣು ತಂದು ಎಡೆ ಮಾಡಿದ ನಂತರ ರಥೋತ್ಸವ ಜರುಗುತ್ತದೆ. ಇದು ಸಮಾಜದಲ್ಲಿ ಅಸಮಾನತೆಯನ್ನು ಹೊಡೆದೋಡಿಸುವುದಕ್ಕೆ ಸಾಕ್ಷಿಯಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ ಬನ್ನಿಕೊಪ್ಪ ಜಪದಕಟ್ಟಿ ಮಠದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಕಳೆದ ಒಂದು ವಾರದಿಂದ ಶಿಗ್ಲಿಯಲ್ಲಿ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಡೆದಿರುವುದು ಶ್ಲಾಘನೀಯ. ದೇವರಲ್ಲಿ ನಂಬಿಕೆ, ವಿಶ್ವಾಸ ಮುಖ್ಯ. ಪರಸ್ಪರ ಸಹೋದರತೆಯಿಂದ ಬದುಕು ಸಾಗಿಸಲು ಜಾತ್ರೆ, ಉತ್ಸವಗಳು ಸಹಕಾರಿಯಾಗಿವೆ’ ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಕಾರ್ಯಕ್ರಮ ಉದ್ಘಾಟಿಸಿದರು. ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ, ಬೆಳ್ಳಟ್ಟಿ ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮೀಜಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮಹಾದೇವಪ್ಪ ಬೆಳವಗಿ, ಎಸ್.ಪಿ. ಬಳಿಗಾರ, ವಿ.ಪಿ. ಶಿರಹಟ್ಟಿ, ದೇವೇಂದ್ರಪ್ಪ ಗುಲಗಂಜಿ, ಶಿವಾನಂದಯ್ಯ ಶಂಕಿನಮಠ, ಪಿ.ಡಿ. ತೋಟದ, ವಿನೋದ ಹೊನ್ನಿಕೊಪ್ಪ, ಅಶೋಕ ಶಿರಹಟ್ಟಿ, ಕೇಶವ ಗುಲಗಂಜಿ, ನಾಗಯ್ಯ ಗಡ್ಡಿಮಠ ಇದ್ದರು. ವಿ.ಎನ್. ಮುಳಗುಂದಮಠ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಅಸುಂಡಿ ಸ್ವಾಗತಿಸಿದರು. ಅನಿಲಕುಮಾರ ಮಠಪತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.