ADVERTISEMENT

ಗದಗ | 'ಬಗರಹುಕುಂ ರೈತರಿಂದ ರೊಟ್ಟಿ ಚಳವಳಿ'

ಮುಂದುವರೆದ ಅಹೋರಾತ್ರಿ ಧರಣಿ; ಸರ್ಕಾರದ ವಿರುದ್ಧ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 2:47 IST
Last Updated 8 ಸೆಪ್ಟೆಂಬರ್ 2025, 2:47 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಗದಗ ಜಿಲ್ಲಾಡಳಿತ ಭವನದ ಎದುರು ಭಾನುವಾರ ಒಲೆ ಹಚ್ಚಿ, ರೊಟ್ಟಿ ಬಡಿದು ಪ್ರತಿಭಟಿಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಗದಗ ಜಿಲ್ಲಾಡಳಿತ ಭವನದ ಎದುರು ಭಾನುವಾರ ಒಲೆ ಹಚ್ಚಿ, ರೊಟ್ಟಿ ಬಡಿದು ಪ್ರತಿಭಟಿಸಿದರು   

ಗದಗ: ಜಿಲ್ಲೆಯ ಬಗರ್‌ಹುಕುಂ ರೈತರ ಹೋರಾಟ 20 ದಿನಗಳನ್ನು ಪೂರ್ಣಗೊಳಿಸಿದ್ದು, ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಭಾನುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಒಲೆ ಹಚ್ಚಿ, ರೊಟ್ಟಿ ಬಡಿದು ಆಕ್ರೋಶ ವ್ಯಕ್ತಪಡಿಸಿದರು. 

ಈ ಹಿಂದೆ 2023ರಲ್ಲಿ ಅಹೋರಾತ್ರಿ ಧರಣಿ ನಡೆಸಿದಾಗ ಸಚಿವ ಎಚ್.ಕೆ.ಪಾಟೀಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಇಲ್ಲೀವರೆಗೆ ಭರವಸೆ ಈಡೇರಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಎನ್.ಟಿ.ಪೂಜಾರ ಮಾತನಾಡಿ, ‘ಧರಣಿನಿರತ ರೈತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಜಿಲ್ಲಾಡಳಿತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸತತ 20 ದಿನಗಳಿಂದ ಹೋರಾಟ ನಡೆಯುತ್ತಿದ್ದು, ಬಗರ್ ಹುಕುಂ ರೈತರು ಜಿಲ್ಲಾಡಳಿತ ಭವನದ ಎದುರು ರೊಟ್ಟಿ ಮಾಡುವುದರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ’ ಎಂದು ಹೇಳಿದರು.

ADVERTISEMENT

‘ರೈತರು ಇಲ್ಲೀವರೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತ ಬಂದಿದ್ದಾರೆ. ಹೋರಾಟ ತೀವ್ರ ಸ್ವರೂಪ ಪಡೆಯುವುದಕ್ಕೂ ಮುಂಚೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಸೋಮವಾರ ಮಧ್ಯಾಹ್ನ 12ಕ್ಕೆ ನಗರದ ಗಾಂಧಿ ಸರ್ಕಲ್‌ನಿಂದ ಭಿಕ್ಷಾಟನೆ ಹೋರಾಟ ಆರಂಭಿಸಲು ಬಗರ್ ಹುಕುಂ ರೈತರು ನಿರ್ಧರಿಸಿದ್ದಾರೆ’ ಎಂದು ತಿಳಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ್, ಫಿರೋಜ್ ನದಾಫ್‌, ಎಂ.ಶಲವಡಿ ಸೇರಿದಂತೆ ಜಿಲ್ಲೆಯ ಅನೇಕ ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.

ಅನ್ನ ನೀಡುವ ರೈತನಿಗೆ ಅನ್ಯಾಯ ಆಗಬಾರದು. ಹೀಗಾಗಿ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಕೂಡಲೇ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು

- ಎನ್.ಟಿ.ಪೂಜಾರ ಮುಖಂಡ

ಜಿಲ್ಲಾ ಉಸ್ತುವಾರಿ ಸಚಿವರ ರೈತ ವಿರೋಧಿ ಧೋರಣೆ ಖಂಡನೀಯ. ನ್ಯಾಯಸಮ್ಮತ ಬೇಡಿಕೆಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು

-ರವಿಕಾಂತ ಅಂಗಡಿ ರಾಜ್ಯ ಘಟಕದ ಅಧ್ಯಕ್ಷ ಉತ್ತರ ಕರ್ನಾಟಕ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.