ಗದಗ: ‘ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನ, ಶ್ರಮ, ಸಮರ್ಪಣಾಭಾವ, ದೇಶಪ್ರೇಮದ ಫಲವಾಗಿ ಇಂದು ಸ್ವಾತಂತ್ರ್ಯದ ಸುಖ ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ಸುಖದ ಮುಂದೆ ಸ್ವರ್ಗ ಸುಖ ತೃಣ ಸಮಾನವೆಂದು ಭಾವಿಸಿ ಬದುಕಿದ ಎಲ್ಲ ಮಹಾನ್ ಚೇತನಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಮಂಗಳವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆ ಎಂಬ ಅಸ್ತ್ರಗಳನ್ನು ಹಿಡಿದು, ಸತ್ಯಾಗ್ರಹ ಮಾರ್ಗ ತುಳಿದು ಬ್ರಿಟಿಷ್ ಆಡಳಿತದ ಗುಂಡಿಗೆ ಎದೆಯೊಡ್ಡಿದರು. ಲಾಠಿ ಏಟು ತಿಂದು, ಅಸಂಖ್ಯ ಕಷ್ಟಗಳನ್ನು ಅನುಭವಿಸಿ, ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದರ ಫಲವಾಗಿ ಇಂದು ನಾವೆಲ್ಲರೂ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ’ ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗದಗ ಜಿಲ್ಲೆಯ ಪಾತ್ರ ಅವಿಸ್ಮರಣೀಯವಾದುದು. ನರಗುಂದದ ಬಾಬಾ ಸಾಹೇಬ, ಮುಂಡರಗಿಯ ಭೀಮರಾವ್, ಡಂಬಳದ ಕೆಂಚನಗೌಡ್ರು, ಅನಂತರಾವ ಜಾಲಿಹಾಳ, ಡಾ.ವಾಸುದೇವರಾವ್ ಉಮಚಗಿ, ಬೆಟಗೇರಿಯ ತ್ರಿಮಲ್ಲೆ, ಮಳೇಕರ, ಜಯರಾಮಾಚಾರ್ಯ ಮಳಗಿ, ಡಂಬಳದ ಶ್ರೀನಿವಾಸರಾವ್ ಕಳ್ಳಿ, ತಿಪ್ಪಣ್ಣ ಶಾಸ್ತ್ರಿ, ಅಂದಾನಪ್ಪ ದೊಡ್ಡಮೇಟಿ, ಕೌತಾಳ ವೀರಪ್ಪ, ಕೆ.ಎಚ್.ಪಾಟೀಲರು ಸೇರಿ ಅಸಂಖ್ಯ ಸ್ವಾತಂತ್ರ್ಯ ಸೇನಾನಿಗಳು ದೇಶಕ್ಕಾಗಿ ಸರ್ವತ್ಯಾಗ ಮಾಡಿದ್ದು ನೆನೆದರೆ ಹೃದಯದಲ್ಲಿ ಹೆಮ್ಮೆಯ ಪ್ರವಾಹ ಹರಿಯುತ್ತದೆ ಎಂದು ತಿಳಿಸಿದರು.
ದೇಶಭಕ್ತ ಮೈಲಾರ ಮಹಾದೇವಪ್ಪ ಅವರ ನೇತೃತ್ವದಲ್ಲಿ ಕೋಗನೂರು, ಶಿಗ್ಲಿ, ಹೆಬ್ಬಾಳ, ನಾಗರಮಡುವು, ವರವಿ, ಹೊಸೂರ, ಅಂಕಲಿ ಮೊದಲಾದ ಗ್ರಾಮಗಳ ಸ್ವಾತಂತ್ರ್ಯ ಹೋರಾಟಗಾರರು ಚಳವಳಿಯಲ್ಲಿ ಧುಮಕಿ ಅಪಾರ ತ್ಯಾಗ ಮಾಡಿದ್ದಾರೆ. 1942 ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಗದಗ ಜಿಲ್ಲೆ ಪೂರ್ಣವಾಗಿ ತೊಡಗಿಸಿಕೊಂಡಿತ್ತು. ಡಾ. ಬಿ.ಜಿ.ಹುಲಗಿ, ಶಂಕ್ರಪ್ಪ ಗುಡ್ಡದ, ಇಸ್ಮಾಯಿಲ್ ಸಾಹೇಬ ಕಲ್ಲೂರ ರಾಮಾಚಾರಿ, ವೆಂಕಟೇಶ ಮಾಗಡಿ, ಕೋಗನೂರು ನಿಂಗಪ್ಪ ಮೊದಲಾದವರು ಕಠಿಣ ಶಿಕ್ಷೆ ಅನುಭವಿಸಿದ್ದಾರೆ ಎಂದರು.
ನಮ್ಮ ಆಡಳಿತ ಜನಪರವಾಗಬೇಕು. ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಬೇಕು. ಜನಕಲ್ಯಾಣಕ್ಕಾಗಿ ಆಡಳಿತ ಎಂಬ ಕೀರ್ತಿಗೆ ಗದಗ ಪಾತ್ರವಾಗಲು, ಸರ್ಕಾರಿ ಸಿಬ್ಬಂದಿ ಸೇವಾಭಾವದಿಂದ ಕೆಲಸ ಮಾಡಬೇಕು. ನಮ್ಮ ಜಿಲ್ಲೆ, ನಾಡಿಗೆ ಬಹು ಅಮೂಲ್ಯ ಕಾಣಿಕೆ ನೀಡಿದೆ. ದೇಶದ ಸಂಗೀತಲೋಕ ಶ್ರೀಮಂತಗೊಳಿಸಿದ ಹೆಗ್ಗಳಿಕೆ ನಮ್ಮದು. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸಹಕಾರಿ ಧುರೀಣರನ್ನು ನೀಡಿದ ಹೆಮ್ಮೆ ನಮ್ಮದು. ರಾಜಕೀಯ ಧುರೀಣರನ್ನು, ಸಾರಸ್ವತ ಲೋಕದ ದಿಗ್ಗಜರನ್ನು ಕ್ರೀಡಾಲೋಕದ ಧೀಮಂತರನ್ನು ನೀಡಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಎಡಿಸಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ, ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.