ADVERTISEMENT

ಫಸಲ್‌ ಬಿಮಾ ಯೋಜನೆಯಲ್ಲಿ ರೈತರಿಗೆ ಅನ್ಯಾಯ, ನ್ಯಾಯದಾನ ಸಮಿತಿ ರಚನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 4:18 IST
Last Updated 24 ಸೆಪ್ಟೆಂಬರ್ 2020, 4:18 IST
ರೈತ ಸೇನೆ ಕರ್ನಾಟಕ ನರೇಗಲ್‌ ಘಟಕದ ವತಿಯಿಂದ ತಹಶೀಲ್ದಾರ್ ಜೆ.ಬಿ.ಜಕ್ಕನಗೌಡ್ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
ರೈತ ಸೇನೆ ಕರ್ನಾಟಕ ನರೇಗಲ್‌ ಘಟಕದ ವತಿಯಿಂದ ತಹಶೀಲ್ದಾರ್ ಜೆ.ಬಿ.ಜಕ್ಕನಗೌಡ್ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು   

ರೋಣ: 2019–20ನೇ ಸಾಲಿನ ಮುಂಗಾರು ಅವಧಿಯ ಫಸಲ್‌ ಬಿಮಾ ಯೋಜನೆ ಅಡಿಯಲ್ಲಿ ರೈತರಿಗೆ ಆದ ಅನ್ಯಾಯ ಸರಿಪಡಿಸಿ ನ್ಯಾಯ ಒದಗಿಸಲು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯದಾನ ಸಮಿತಿ ರಚಿಸುವಂತೆ ಆಗ್ರಹಿಸಿ ರೈತ ಸೇನೆ ಕರ್ನಾಟಕ ನರೇಗಲ್‌ ಘಟಕದ ವತಿಯಿಂದ ತಹಶೀಲ್ದಾರ್ ಜೆ.ಬಿ.ಜಕ್ಕನಗೌಡ್ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸೇನಾ ತಾಲ್ಲೂಕು ಘಟಕದ ಅಧ್ಯಕ್ಷ ಮುತ್ತಣ್ಣ ಕುರಿ ಮಾತನಾಡಿ, ಲಾಕ್‍ಡೌನ್‍ನಲ್ಲಿನ ತೋಟಗಾರಿಕೆ ಬೆಳೆಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು ಪರಿಹಾರದ ಹಣವನ್ನು ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.

ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ಫಸಲ್ ಬಿಮಾ ಯೋಜನೆಯನ್ನು ಖಾಸಗಿ ಕಂಪನಿಯು ಅನುಷ್ಠಾನಗೊಳಿಸಿದ್ದು, ಮುಂಗಾರು ಅವಧಿಯ ಬೆಳೆವಿಮಾ ವಿಷಯವಾಗಿ ವಿಮಾ ಮೊತ್ತವನ್ನು ಜಾರಿಯಾಗಿರುವ ಕುರಿತು ಕೃಷಿ ಇಲಾಖೆ ಸೆ.14 ರಂದು ಮಾಹಿತಿ ಒದಗಿಸಿದ್ದು ಅದರಲ್ಲಿ ನರೇಗಲ್ಲ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪ್ರಮುಖ ಬೆಳೆಗಳಾದ ಹೆಸರು ಮತ್ತು ಗೋವಿನಜೋಳ, ಶೇಂಗಾ, ಬೆಳೆಗಳಿಗೆ ವಿಮಾ ಮೊತ್ತ ಜಾರಿಗೊಳಿಸಿಲ್ಲ. ಆದರೆ ನಿರಾವರಿ ಆಶ್ರಿತ ಬೆಳೆಗಳಿಗೆ ವಿಮೆಯನ್ನು ಜಾರಿಗೊಳಿಸಿದ್ದಾರೆ.

ADVERTISEMENT

ಕೇವಲ ಬೆರಳೆಣಿಕೆ ರೈತರಿಗೆ ವಿಮೆ ನೀಡಿ ಸಾವಿರಾರು ರೈತರು ಬೆಳೆಸದಂತಹ ಹೆಸರು, ಗೋವಿನಜೋಳ ಬೆಳೆಗಳಿಗೆ ವಿಮೆ ಜಾರಿಗೊಳಿಸದೇ ರೈತರಿಗೆ ವಂಚನೆ ಮಾಡುತ್ತಿದೆ. ವಿಮಾ ಕಂಪನಿ ತನ್ನ ಲಾಭದಾಸೆಗಾಗಿ ಸಾವಿರಾರು ರೈತರಿಗೆ ಅನ್ಯಾಯ ಮಾಡುತ್ತಿದೆ. ಆದ್ದರಿಂದ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯದಾನ ಸಮಿತಿ ರಚಿಸಿ ಖಾಸಗಿ ಕಂಪನಿಯನ್ನು ವಿಚಾರಣೆಗೆ ಒಳಪಡಿಸಿ ರೈತರಿಗೆ ಸೂಕ್ತ ನ್ಯಾಯವನ್ನು ಒದಗಿಸಿಕೊಡಬೇಕು ಎಂದರು.

ಅಲ್ಲದೇ ಲಾಕ್‍ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಘೋಷಣೆ ಮಾಡಿತ್ತು. ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಬೆಳೆಗಳನ್ನು ಸಮೀಕ್ಷೆ(ಜಿ.ಪಿ.ಎಸ್) ನಡೆಸಿ ಶೀಘ್ರವಾಗಿ ಪರಿಹಾರ ಹಣ ಒದಗಿಸುವ ಭರವಸೆ ನೀಡಿದ್ದರು. ಆದರೆ ಲಾಕ್‍ಡೌನ್ ಮುಗಿದು ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಪರಿಹಾರ ಹಣ ಬಂದಿಲ್ಲ. ಈ ಕುರಿತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಆನಂದ ಕೊಟಗಿ, ಶರಣಪ್ಪ ಧರ್ಮಾಯತ, ಚಂದ್ರು ಹೊನವಾಡ, ಹನುಮಪ್ಪ ಹಾಲವರ, ಶಿವಪ್ಪ ಗೋಡಿ, ಶರಣಪ್ಪ ಹಕ್ಕಿ, ಚಿದಾನಂದ ವರಲಕುಂಟಿ, ಸಂಗನಗೌಡ ಮಾಲಿ ಪಾಟೀಲ, ಕಳಕಪ್ಪ, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.