ADVERTISEMENT

ಬಾಲ್ಯದಿಂದಲೇ ಸಂಸ್ಕಾರ ನೀಡಿ

ಶಿಕ್ಷಣ ಚಿಂತಕಿ ಕಾರಟಗಿಯ ಲೀಲಾ ಮಲ್ಲಿಕಾರ್ಜುನ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 5:06 IST
Last Updated 7 ಆಗಸ್ಟ್ 2025, 5:06 IST
ನರೇಗಲ್ ಸಮೀಪದ ಹಾಲಕೆರೆ‌ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತಾಯಂದಿರನ್ನು ಸನ್ಮಾನಿಸಲಾಯಿತು
ನರೇಗಲ್ ಸಮೀಪದ ಹಾಲಕೆರೆ‌ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತಾಯಂದಿರನ್ನು ಸನ್ಮಾನಿಸಲಾಯಿತು   

ನರೇಗಲ್: ‘ಸಂಸ್ಕಾರವಿಲ್ಲದ ಬದುಕು ಶೂನ್ಯಕ್ಕೆ ಸಮಾನ ಮತ್ತು ಅರ್ಥಹೀನ. ಆದ್ದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕಲಿಸಿಕೊಡಬೇಕು’ ಎಂದು ಶಿಕ್ಷಣ ಚಿಂತಕಿ ಕಾರಟಗಿಯ ಲೀಲಾ ಮಲ್ಲಿಕಾರ್ಜುನ ಹೇಳಿದರು.

ನರೇಗಲ್ ಸಮೀಪದ ಹಾಲಕೆರೆ‌ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ನಡೆದ ಧಾರ್ಮಿಕ ಸಭೆಯಲ್ಲಿ ‘ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

‘ಮಹಿಳೆಗೆ ವಿಶೇಷ ಸ್ಥಾನಮಾನ ನೀಡಿದ ದೇಶ ನಮ್ಮದು. ತಾಯಿ ದೇವರ ಸ್ವರೂಪಿ. ಅಕ್ಕ- ತಂಗಿ, ಹೆಂಡತಿ, ಸೊಸೆ, ತಾಯಿ ಹೀಗೆ ವಿವಿಧ ಹಂತಗಳನ್ನು ದಾಟಿ ಬರುವ ಆಕೆ ಎಲ್ಲದರಲ್ಲಿಯೂ ತ್ಯಾಗಮಯಿ. ಸಮಾಜ ಅವಳ ಪ್ರತಿಭೆಗೆ, ಸಾಧನೆಗೆ ಪ್ರೋತ್ಸಾಹ ನೀಡಬೇಕು. ಅವಳನ್ನು ಕಟ್ಟಿ ಹಾಕುವ ಕೆಲಸವಾಗಬಾರದು’ ಎಂದರು.

ADVERTISEMENT

‘ತಾಯಂದಿರು ಎಂದಿಗೂ ಮಕ್ಕಳ ಅಂಕಗಳ ಬಗ್ಗೆ ಯೋಚಿಸದೆ ಅವರಲ್ಲಿ ಮೌಲ್ಯಗಳನ್ನು ಬಿತ್ತುವ ಕುರಿತು ಯೋಚಿಸಬೇಕು. ಜೀವನದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಲು ತಾಯಂದಿರು ಮುಂದಾಗಬೇಕು. ಮಗುವಿನ ಪ್ರತಿ ಹೆಜ್ಜೆಯಲ್ಲಿಯೂ ತಾಯಿಯ ಗಮನವಿರಬೇಕು’ ಎಂದು ಸಲಹೆ ನೀಡಿದರು.

ಆಶೀರ್ವಚನ ನೀಡಿದ ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ, ‘ಬದುಕನ್ನು ಎಂದಿಗೂ ನಿರರ್ಥಕ ಮಾಡಿಕೊಳ್ಳಬಾರದು. ಯಾರಲ್ಲಿ ಜ್ಞಾನ ಹಾಗೂ ಸಂಸ್ಕಾರ ಇರುತ್ತದೆಯೋ ಅವರ ಬದುಕು ಸಾರ್ಥಕವಾಗುತ್ತದೆ. ಈ ಜ್ಞಾನ ಸತ್ಸಂಗದಿಂದ ಬರುತ್ತದೆ. ಆದ್ದರಿಂದ ಎಂದಿಗೂ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ಊರಲ್ಲಿ ಜಾತ್ರೆ, ಶಿವಾನುಭವಗೋಷ್ಠಿಯಂತಹ ಕಾರ್ಯಗಳು ನಡೆದಾಗ ತುಂಬು ಮನಸ್ಸಿನಿಂದ ಪಾಲ್ಗೊಳ್ಳಬೇಕು’ ಎಂದರು.

ಎಸ್.ಎಸ್. ಸಾರಂಗಮಠ ವಿರಚಿತ ಹಾಲಕೆರೆಯ ಮಹಾತಪಸ್ವಿ ಅನ್ನದಾನೇಶ್ವರ ಮಹಿಮೆ ನಾಟಕ ಮತ್ತು ಗಿರಿರಾಜ ಹೊಸಮನಿಯವರು ಬರೆದ ಹಾಲಕೆರೆಯಿಂದ ಹಿಮಾಲಯದವರೆಗೆ ಕೃತಿಗಳು ಲೋಕಾರ್ಪಣೆಗೊಂಡವು. ಕಲ್ಲಯ್ಯ ಹಿರೇಮಠ ನೇತೃತ್ವದ ಬೆತ್ತದ ಅಜ್ಜ ಕಿರುಚಿತ್ರ ಬಿಡುಗಡೆಗೊಂಡಿತು. 

ಒಳಬಳ್ಳಾರಿ ಸುವರ್ಣಗಿರಿ ಮಠದ ಸಿದ್ಧಲಿಂಗ ಸ್ವಾಮೀಜಿ, ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ವಿವಿಧ ಮಠದ ಹಿರಿಯ-ಕಿರಿಯ ಶ್ರೀಗಳು ಹಾಗೂ ರೋಣ ಅಕ್ಕನ ಬಳಗದ ಅಧ್ಯಕ್ಷೆ ಅನ್ನಪೂರ್ಣಮ್ಮ ಜಿ. ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.