ಪ್ರಜಾವಾಣಿ ವಾರ್ತೆ
ನರಗುಂದ: ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗಲು ಎಲ್ಲ ಸೌಲಭ್ಯ ನೀಡುತ್ತಿದ್ದು ಅದರ ಸದುಪಯೋಗವಾಗಬೇಕು. ದಾಖಲಾತಿ ಹೆಚ್ಚಿಸಲು ಇವುಗಳ ಬಗ್ಗೆ ಪಾಲಕರಿಗೆ, ಮಕ್ಕಳಿಗೆ ಮಾಹಿತಿ ತಲುಪಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕಿ ಗಾಯತ್ರಿ ಸಜ್ಜನ ಹೇಳಿದರು.
ತಾಲ್ಲೂಕಿನ ಕಣಕಿಕೊಪ್ಪದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಬುಧವಾರ ನಡೆದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿ.ಎಂ.ಪೋಷಣೆ ನಿರ್ಮಾಣ ಶಿಕ್ಷಣಾಧಿಕಾರಿ ಸರಸ್ವತಿ ಕನವಳ್ಳಿ, ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಪರಿಕಲ್ಪನೆ, ಉದ್ದೇಶವನ್ನು ಪಾಲಕರು, ಶಿಕ್ಷಕರು ಅರಿಯಬೇಕು. ಸಮುದಾಯಕ್ಕೆ ಇದರ ಬಗ್ಗೆ ತಿಳಿಸಬೇಕು ಎಂದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಾರುತಿ ಅಸುಂಡಿ ಮಾತನಾಡಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಐ.ಎಂ.ಹುರಕಡ್ಲಿ, ಮಕ್ಕಳ ಮತ್ತು ಪಾಲಕರ ಜವಾಬ್ದಾರಿ ವಿವರಿಸಿದರು.
2025-26ನೇ ಸಾಲಿಗೆ ಪಾಲಕರ ಮನವೊಲಿಸಿ ಎಚ್.ಪಿ.ಎಸ್ ಕಣಕಿಕೊಪ್ಪ ಶಾಲೆಗೆ 1ನೇ ತರಗತಿಗೆ 20 ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯೆ ವೆಂಕಮ್ಮ ಮಾದರ ಹಾಗೂ ಶಾಲಾ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.