ADVERTISEMENT

ಕಬಡ್ಡಿ: ಇತಿಹಾಸ ನಿರ್ಮಿಸಿದ ನರಗುಂದದ ಯುವತಿಯರು !

ಏಕಕಾಲಕ್ಕೆ ಕವಿವಿ ಬ್ಲ್ಯೂ ಆಗಿ ಆಯ್ಕೆಯಾದ ನರಗುಂದದ 10 ಕ್ರೀಡಾಪಟುಗಳು

ಬಸವರಾಜ ಹಲಕುರ್ಕಿ
Published 3 ಡಿಸೆಂಬರ್ 2019, 12:06 IST
Last Updated 3 ಡಿಸೆಂಬರ್ 2019, 12:06 IST
ಏಕಕಾಲಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಕಬಡ್ಡಿ ಬ್ಲ್ಯೂ ಆಗಿ ಆಯ್ಕೆಯಾದ ನರಗುಂದದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು
ಏಕಕಾಲಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಕಬಡ್ಡಿ ಬ್ಲ್ಯೂ ಆಗಿ ಆಯ್ಕೆಯಾದ ನರಗುಂದದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು   

ನರಗುಂದ: 'ಕಬಡ್ಡಿಯೇ ನಮ್ಮ ಉಸಿರು' ಎನ್ನುವಷ್ಟರ ಮಟ್ಟಿಗೆ ಈ ಕ್ರೀಡೆಯನ್ನು ಪ್ರೀತಿಸುತ್ತಿರುವ ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪದವಿ ಪ್ರಥಮ ವರ್ಷದ 10 ವಿದ್ಯಾರ್ಥಿನಿಯರು ಏಕಕಾಲಕ್ಕೆ, ಕರ್ನಾಟಕ ವಿಶ್ವವಿದ್ಯಾಲಯದ ಕಬಡ್ಡಿ ಬ್ಲ್ಯೂ ಆಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಕಾಲೇಜೊಂದರ ವಿದ್ಯಾರ್ಥಿನಿಯರು ಹೀಗೆ ಗರಿಷ್ಠ ಸಂಖ್ಯೆಯಲ್ಲಿ ಏಕಕಾಲದಲ್ಲಿ ವಿಶ್ವವಿದ್ಯಾಲಯದ ಬ್ಲ್ಯೂ ಆಗಿ ಹೊರಹೊಮ್ಮಿರುವುದು ದೇಶದಲ್ಲಿ ಇದೇ ಮೊದಲು. ನರಗುಂದದ ಈ ಯುವತಿಯರ ಸಾಧನೆಯಿಂದಾಗಿ, ಈಗ ರಾಜ್ಯ, ರಾಷ್ಟ್ರಮಟ್ಟದ ವಿಶ್ವವಿದ್ಯಾಲಯಗಳ ಕಬಡ್ಡಿ ಪಟುಗಳು, ತರಬೇತುದಾರರು ಇತ್ತ ದೃಷ್ಟಿ ಹರಿಸುವಂತಾಗಿದೆ.

ಈಗ ಕರ್ನಾಟಕ ವಿಶ್ವವಿದ್ಯಾಲಯದ ಕಬಡ್ಡಿ ತಂಡದಲ್ಲಿ ನರಗುಂದದ 10 ಮಂದಿ ಆಟಗಾರ್ತಿಯರಿದ್ದಾರೆ. ತಂಡದ 12 ಪಟುಗಳಲ್ಲಿ ಇಬ್ಬರನ್ನು ಹೊರತು ಪಡಿಸಿದರೆ ಉಳಿದವರು ಒಂದೇ ಊರಿನ, ಒಂದೇ ಕಾಲೇಜಿನವರು ಎನ್ನುವುದು ವಿಶೇಷ. ಈ ವಿದ್ಯಾರ್ಥಿನಿಯರು ಕಠಿಣ ಪರಿಶ್ರಮ, ಸತತ ಅಭ್ಯಾಸದೊಂದಿಗೆ ಪದವಿ ಪ್ರಥಮ ವರ್ಷದಲ್ಲಿ ಇರುವಾಗಲೇ, ವಿಶ್ವವಿದ್ಯಾಲಯದ ಬ್ಲ್ಯೂ ಆಗಿ ಆಯ್ಕೆಯಾಗಿದ್ದಾರೆ.

ADVERTISEMENT

‘ಕಾಲೇಜೊಂದರ 10 ಮಂದಿ ವಿದ್ಯಾರ್ಥಿನಿಯರು ಏಕಕಾಲದಲ್ಲಿ ವಿಶ್ವವಿದ್ಯಾಲಯವೊಂದರ ಬ್ಲ್ಯೂ ಆಗಿ ಆಯ್ಕೆಯಾಗಿರುವ ಉದಾಹರಣೆ ದೇಶದ ಯಾವುದೇ ವಿವಿ ವ್ಯಾಪ್ತಿಯಲ್ಲಿ ಇದುವರೆಗೆ ಆಗಿಲ್ಲ. ಕವಿವಿ ವ್ಯಾಪ್ತಿಯ 70 ಕಾಲೇಜುಗಳ ಕಬ್ಬಡ್ಡಿ ಪಟುಗಳನ್ನು ಹಿಂದಿಕ್ಕಿ ಈ ಕುವರಿಯರು ಕವಿವಿ ಕಬಡ್ಡಿ ತಂಡಕ್ಕೆ ಸೇರ್ಪೆಯಾಗಿದ್ದಾರೆ.

ಈ ತಂಡದಲ್ಲಿರುವ ಕೆಲವರು ಪಿಯುಸಿ ಹಂತದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಈ ವಿದ್ಯಾರ್ಥಿನಿಯರು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಒಟ್ಟು 6 ಗಂಟೆ ಕಬಡ್ಡಿ ಅಭ್ಯಾಸ ಮಾಡುತ್ತಾರೆ. ನಿರಂತರ ಅಭ್ಯಾಸ ಪಾಲಕರ ಪ್ರೋತ್ಸಾಹ ಹಾಗೂ ಕಬಡ್ಡಿ ಬಗ್ಗೆ ಈ ವಿದ್ಯಾರ್ಥಿನಿಯರಿಗಿರುವ ಪ್ರೀತಿಯಿಂದ ಇವರಿಗೆ ಮೇರು ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ.

'ನಾವು ಪ್ರೌಢ ಶಾಲಾ ಹಂತದಿಂದಲೇ ಕಬಡ್ಡಿ ಕಣದಲ್ಲಿದ್ದೇವೆ. ಈ ಹಂತ ತಲುಪಲು ನಮ್ಮ ಕವಿವಿ ತರಬೇತುದಾರರಾದ ವಿ.ಡಿ.ಪಾಟೀಲ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಮ್ಮ ಕಾಲೇಜಿನ ಡಿ.ಎಸ್.ಸೌದಾಗರ ಸರ್ ಹಾಗೂ ಪ್ರಾಚಾರ್ಯ ಡಾ.ಕಮತಗಿ ಗುರುಗಳ ಮಾರ್ಗದರ್ಶನ ಕಾರಣ' ಎನ್ನುತ್ತಾರೆ ಕಬಡ್ಡಿ ಬ್ಲ್ಯೂ ಲಕ್ಷ್ಮಿ ಪೂಜಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.