ADVERTISEMENT

ಅನುಭವದ ಬೆಂಕಿಯಲ್ಲಿ ಬೆಂದರಷ್ಟೇ ಪರಿಪಕ್ವ

ಕಲಾಚೇತನ ಅಕಾಡೆಮಿಗೆ ಬೆಳ್ಳಿ ಹಬ್ಬದ ಸಂಭ್ರಮ l ಚಿಂತಕ ಗುರುರಾಜ ಕರಜಗಿ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 5:16 IST
Last Updated 7 ನವೆಂಬರ್ 2022, 5:16 IST
ಗದಗ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿಯ ‘ಬೆಳ್ಳಿ ಹಬ್ಬ’ ಕಾರ್ಯಕ್ರಮವನ್ನು ‘ಪ್ರಜಾವಾಣಿ’ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಉದ್ಘಾಟಿಸಿದರು
ಗದಗ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿಯ ‘ಬೆಳ್ಳಿ ಹಬ್ಬ’ ಕಾರ್ಯಕ್ರಮವನ್ನು ‘ಪ್ರಜಾವಾಣಿ’ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಉದ್ಘಾಟಿಸಿದರು   

ಗದಗ: ‘ಜೀವನದ ಬಹುದೊಡ್ಡ ಮೌಲ್ಯ ಅನುಭವ. ಅನುಭವದ ಬೆಂಕಿಯೊಳಗೆ ಹೋಗಿ ಬಂದ ಮನುಷ್ಯ ಮಾತ್ರ ಪರಿಪಕ್ವನಾಗುತ್ತಾನೆ. ಕಷ್ಟ ಬಂದಾಗಲೂ ಜೀವನ ಮೌಲ್ಯಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಬದುಕಿದರೆ ಮನುಷ್ಯ ಶಾಶ್ವತನಾಗುತ್ತಾನೆ’ ಎಂದು ಚಿಂತಕ ಗುರುರಾಜ ಕರಜಗಿ ಹೇಳಿದರು.

ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿಯ ‘ಬೆಳ್ಳಿ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಕೃತಿಯಾಗಿದ್ದ ಮಗು ಸುಸಂಸ್ಕೃತ ಆಗಲು ಶಿಕ್ಷಣ ಮುಖ್ಯ. ಸಂಸ್ಕಾರ ಕೊಡುವ ಕೆಲಸವೇ ಸಂಸ್ಕೃತಿ. ಇವೆಲ್ಲವೂ ಘನೀಕೃತ ಆದಾಗ ಬರುವುದೇ ಸುಸಂಸ್ಕೃತಿ. ಸಂಸ್ಕೃತಿ ಎಂಬುದು ನಾಲಗೆಯಲ್ಲಿಲ್ಲ; ಹೃದಯದಲ್ಲಿದೆ. ಮೌಲ್ಯಗಳನ್ನು ಮಾತನಾಡಿ ಕಲಿಸಲು ಸಾಧ್ಯವಿಲ್ಲ. ನಡೆದು ತೋರಿಸಿ, ಕಲಿಸಬೇಕು. ಇಂದು ಎಲ್ಲದಕ್ಕೂ ನಾವು ಹಣದಿಂದಲೇ ಮೌಲ್ಯ ಕಟ್ಟುತ್ತೇವೆ. ಆದರೆ, ಮನುಷ್ಯ ಜೀವನದ ಬೆಲೆಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಗಾಂಧಿ, ಬುದ್ಧ, ಬಸವ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರು ಮಾಡಿದ ಕೆಲಸ, ಸಂಸ್ಕೃತಿಯಿಂದ ಮೌಲ್ಯ ಕಟ್ಟಬೇಕು’ ಎಂದು ತಿಳಿಸಿದರು.

ADVERTISEMENT

‘ಯಾವ ಕೆಲಸ ಮಾಡುವುದರಿಂದ ನನಗೂ ಮತ್ತು ಜಗತ್ತಿಗೂ ಒಳ್ಳೆಯದಾಗುತ್ತದೆಯೋ ಅದೇ ಮೌಲ್ಯ. ಸಂಬಂಧಗಳನ್ನು ಹೆಚ್ಚು ಕಲ್ಪಿಸಿಕೊಂಡಷ್ಟು ಜೀವನ ಗಟ್ಟಿಯಾಗುತ್ತದೆ. ಸಮಾಜದಿಂದ ಪಡೆಯುವುದಷ್ಟೇ ಮುಖ್ಯವಲ್ಲ. ಕೊಡುವುದೂ ಅಷ್ಟೇ ಮುಖ್ಯ. ದುಡ್ಡನ್ನು ಹೊರತುಪಡಿಸಿ ಸಮಾಜಕ್ಕೆ ಕೊಡುವುದು ಸಾಕಷ್ಟಿದೆ. ಒಬ್ಬ ವ್ಯಕ್ತಿ ಹಲವು ಮುಖಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಆಗ ಮಾತ್ರ ದೊಡ್ಡವರಾಗಲು ಸಾಧ್ಯ’ ಎಂದು ಹೇಳಿದರು.

‘ಇಂದು ಜಾತಿ, ಬಣ್ಣ, ಲಿಂಗ, ಭಾಷೆ, ಧರ್ಮದ ಆಧಾರ ಮೇಲೆ ಮೌಲ್ಯಗಳನ್ನು ಒಡೆದು ಚಿಂದಿ ಮಾಡಿದ್ದೇವೆ. 21ನೇ ಶತಮಾನಕ್ಕೆ ಬೇಕಿರುವುದು ‘ಎಲ್ಲರನ್ನೂ ಪ್ರೀತಿ ಮಾಡಿ, ದ್ವೇಷ ಮಾಡಬೇಡಿ’ ಎಂಬ ಒಂದು ಸಂದೇಶವಷ್ಟೇ. ಇದೇ ಜೀವನದ ಬಹುದೊಡ್ಡ ಮೌಲ್ಯ’ ಎಂದು ಹೇಳಿದರು.

ಶಿವಾನಂದ ಬೃಹನ್ಮಠದ ಸದಾಶಿವಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲಾಚೇತನ ಅಕಾಡೆಮಿಯ ನಿರ್ದೇಶಕ ಚಂದ್ರಶೇಖರ ವಸ್ತ್ರದ, ಅಧ್ಯಕ್ಷ ಕಾವೆಂಶ್ರೀ ಮಾತನಾಡಿದರು.

ಕೊಳಲು ವಾದಕ ಷಡ್ಜ ಗೋಡ್ಖಿಂಡಿ ಅವರಿಗೆ ‘ಕಲಾಚೇತನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅರಬಳ್ಳಿ ಮಂಜುನಾಥ, ವಿಶ್ವನಾಥ ನಾಲವಾಡ, ಬಿ.ಎಂ. ಸಂಕೇಶ್ವರ ಇದ್ದರು.

ಸಭಾ ಕಾರ್ಯಕ್ರಮದ ನಂತರ ಪ್ರವೀಣ್‌ ಗೋಡ್ಖಿಂಡಿ ಹಾಗೂ ಷಡ್ಜ ಗೋಡ್ಖಿಂಡಿ ಅವರಿಂದ ಕೊಳಲು ವಾದನದ ಜುಗಲ್‌ಬಂದಿ ನಡೆಯಿತು.

‘ಶತಮಾನೋತ್ಸವ ಆಚರಿಸುವಂತಾಗಲಿ’

‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ‘ಬೆಳ್ಳಿ ಹಬ್ಬ ಸಂಭ್ರಮ’ ಉದ್ಘಾಟಿಸಿ ಮಾತನಾಡಿ, ‘‘ಗದಗ ಅಂದ ತಕ್ಷಣ ಕುಮಾರವ್ಯಾಸ ನೆನಪಾಗುತ್ತಾರೆ. ‘ವೀರನಾರಾಯಣನೇ ಕವಿ; ಕುಮಾರವ್ಯಾಸ ಲಿಪಿಕಾರ’ ಎಂದು ಕುಮಾರವ್ಯಾಸ ಹೇಳಿಕೊಂಡಿದ್ದಾರೆ. ಕಾವೆಂಶ್ರೀ ಕೂಡ ಬೆಳ್ಳಿಹಬ್ಬಕ್ಕೆ ಆಹ್ವಾನಿಸುವ ವೇಳೆ ‘ನಿಜವಾಗಿ ಎಲ್ಲ ಕಾರ್ಯಗಳನ್ನು ಮಾಡಿದ್ದು ವೀರನಾರಾಯಣ, ನಾನು ನೆಪಮಾತ್ರ’ ಎಂದು ಹೇಳಿದರು. ಅವರ ಬದುಕು ನೋಡಿದಾಗ ಅದು ನಿಜ ಅನಿಸುತ್ತದೆ’’ ಎಂದರು.

‘ಗದುಗಿಗೆ ಸಾಂಸ್ಕೃತಿಕ ಹಿರಿಮೆ ಹೊಸತಲ್ಲ. ಭೀಮಸೇನ ಜೋಶಿ ಇಲ್ಲಿಯವರು. ವೀರೇಶ್ವರ ಪುಣ್ಯಾಶ್ರಮ ಹಾಗೂ ತೋಂಟದ ಶ್ರೀಗಳು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಆ ಪರಂಪರೆಯನ್ನು ಕಾವೆಂಶ್ರೀ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅದಕ್ಕೆ ಅಭಿನಂದನೆ ಸಲ್ಲಿಸಬೇಕು. ಕಾವೆಂಶ್ರೀ ಅವರ ಸಾಂಸ್ಕೃತಿಕ ಕೃಷಿಗೆ ಅವರ ಶ್ರೀಮತಿಯ ಕೊಡುಗೆಯೂ ಅಪಾರ. ಕಲಾಚೇತನ ಅಕಾಡೆಮಿ ಶತಮಾನೋತ್ಸವ ಆಚರಿಸುವಂತಾಗಲಿ’ ಎಂದು ಆಶಿಸಿದರು.

ಗದಗ ಪರಿಸರದಲ್ಲಿ ಕಲಾಚೇತನ ಅಕಾಡೆಮಿ 25 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಸೇವೆ ಮಾಡಿಕೊಂಡು ಬರುತ್ತಿದೆ. ಕಾವೆಂಶ್ರೀ ಒಬ್ಬ ಸಂಸ್ಕೃತಿ ಪ್ರಚೋದಕ.
ಗುರುರಾಜ ಕರಜಗಿ, ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.