ಮುಂಡರಗಿ: ಪಟ್ಟಣದ ಕನಕರಾಯನ ಗುಡ್ಡದ ಮೇಲೆ ಕನ್ನಡ ಕ್ರಾಂತಿ ಸೇನೆ ಕಾರ್ಯಕರ್ತರು ಕಳೆದ 30ವರ್ಷಗಳಿಂದ ಆ.14 ರಂದು ಮಧ್ಯರಾತ್ರಿ 12ಗಂಟೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ ದೇಶಾಭಿಮಾನಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ.
1994ರಲ್ಲಿ ಸಮಾಜ ಸೇವಕ ಮಂಜುನಾಥ ಇಟಗಿ ಅವರ ನೇತೃತ್ವದಲ್ಲಿ ಸಿದ್ದು ಅಂಗಡಿ, ಆನಂದ ರಾಮೇನಹಳ್ಳಿ, ಶಿವು ನವಲಗುಂದ, ಶ್ರೀನಿವಾಸ ಕಟ್ಟಿಮನಿ, ಎನ್.ವಿ. ಹಿರೇಮಠ, ಮಹಾದೇವ ಡೊಣ್ಣಿ ಮೊದಲಾದವರು ಸೇರಿ ಕನ್ನಡ ಕ್ರಾಂತಿ ಸೇನೆ ಎಂಬ ಸಮಾಜ ಸೇವಾ ಸಂಘಟನೆ ಸ್ಥಾಪಿಸಿದರು. ಅಂದಿನಿಂದ ಕಾರ್ಯಕರ್ತರು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬಂದಿದ್ದಾರೆ.
ದೇಶ ಪ್ರೇಮಿಗಳಾದ ಕ್ರಾಂತಿ ಸೇನೆ ಯುವಕರ ಬಳಗವು 30 ವರ್ಷಗಳ ಹಿಂದೆ ಕನಕರಾಯನ ಗುಡ್ಡದ ಮೇಲೆ ಶಿಥಿಲಾವಸ್ಥೆಯಲ್ಲಿದ್ದ ಕೋಟೆಯ ಕಾವಲು ಗೋಪುರ ಸ್ವಚ್ಛತೆಗೆ ಮುಂದಾದರು. ದೇಶಕ್ಕೆ ಆ. 14 ಮಧ್ಯರಾತ್ರಿ ಸ್ವಾತಂತ್ರ್ಯ ದೊರಕಿದ ಕಾರಣ ಮದ್ಯರಾತ್ರಿಯೇ ಧ್ವಜಾರೋಹಣ ಮಾಡಬೇಕು ಎಂಬ ವಿಚಾರ ಆಕಸ್ಮಿಕವಾಗಿ ಯುವಕರಲ್ಲಿ ಮೂಡಿತು. ಅಂದು ಕೇವಲ ಏಳು ಜನ ಕಾರ್ಯಕರ್ತರಿಂದ ಆರಂಭವಾದ ಧ್ವಜಾರೋಹಣ ಪ್ರಾರಂಭಿಸಲಾಯಿತು.
ಅಂದಿನಿಂದ ಪ್ರತಿ ವರ್ಷ ಆ.14ರಂದು ಮಧ್ಯರಾತ್ರಿ 12ಗಂಟೆಗೆ ಯುವಕರೆಲ್ಲರೂ ಸೇರಿ ಕನಕರಾಯನ ಗುಡ್ಡದ ಮೇಲೆ ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸುತ್ತಿದ್ದಾರೆ. ಧ್ವಜಾರೋಹಣ ನಂತರ ದೇಶಸೇವೆ ಸಲ್ಲಿಸಿದ ಯೋಧರು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಸ್ವಂತ ಖರ್ಚಿನಲ್ಲಿ ಸನ್ಮಾನಿಸುತ್ತ ಬಂದಿದ್ದಾರೆ.
ಯುವಕರಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆ.14ರಂದು ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಲಾಗುತ್ತಿದ್ದು ಹೆಚ್ಚಿನ ಜನರು ಪಾಲ್ಗೊಳ್ಳುತ್ತಿರುವುದು ಸಂತಸ ಮೂಡಿಸಿದೆ–ಮಂಜುನಾಥ ಇಟಗಿ, ಕನ್ನಡ ಕ್ರಾಂತಿ ಸೇನೆಯ ಸಂಸ್ಥಾಪಕ ಅಧ್ಯಕ್ಷ
ಮಧ್ಯರಾತ್ರಿ ಧ್ವಜಾರೋಹಣ ಇಲ್ಲಿಯ ಯುವಕರಲ್ಲಿ ನಾಡು ನುಡಿ ಹಾಗೂ ದೇಶಪ್ರೇಮವನ್ನು ಹೆಚ್ಚಿಸಿದ್ದು ನಮ್ಮ ಕಾರ್ಯ ಜನರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ–ಮಂಜುನಾಥ ಮುಧೋಳ, ಕನ್ನಡ ಕ್ರಾಂತಿ ಸೇನೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.