ADVERTISEMENT

ಮನ ಮಿಡಿಯಲಿ ತಾಯ್ನುಡಿಗೆ: ರವೀಂದ್ರ ಕೊಪ್ಪರ

ಗದಗ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:42 IST
Last Updated 28 ಫೆಬ್ರುವರಿ 2021, 5:42 IST
=====ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ರವೀಂದ್ರ ಕೊಪ್ಪರ ಅವರು ಭುವನೇಶ್ವರಿಗೆ ನಮಿಸಿದರು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಗೇರಿ ಇದ್ದರು.
=====ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ರವೀಂದ್ರ ಕೊಪ್ಪರ ಅವರು ಭುವನೇಶ್ವರಿಗೆ ನಮಿಸಿದರು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಗೇರಿ ಇದ್ದರು.   

ಗದಗ: ‘ಮಾತೃಭಾಷೆಗೆ ಪ್ರಥಮ ಆದ್ಯತೆ ನೀಡುವುದು ಪೋಷಕರು ಹಾಗೂ ಕನ್ನಡಾಭಿಮಾನಿಗಳ ಸಾಮಾಜಿಕ ಹೊಣೆಗಾರಿಕೆಯಾಗಬೇಕು’ ಎಂದು 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ರವೀಂದ್ರ ಕೊಪ್ಪರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದ ಶಿಕ್ಷಣವು ಮಾತೃಭಾಷೆಯಲ್ಲಿಯೇ ನಡೆಯಬೇಕು. ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕನ್ನಡ ನುಡಿಯನ್ನು ಸರಾಗವಾಗಿ ಓದುವ ಕಲೆಯನ್ನು ರೂಢಿಸುವುದಕ್ಕೆ ಹಾಗೂ ಬರಹದ ಶುದ್ಧತೆಗೆ ಹೆಚ್ಚಿನ ಗಮನ ನೀಡಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಉತ್ತರ ಕರ್ನಾಟಕ ಪ್ರದೇಶದಲ್ಲಿ ಔದ್ಯೋಗಿಕ ಪ್ರಗತಿ ಸಾಧಿಸದ ಕಾರಣ ವಿದ್ಯಾವಂತರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ನೀರಾವರಿ ಸೌಲಭ್ಯಗಳಿಂದ ವಂಚಿತರಾದ ಕೃಷಿಕರು ಪರಿಸರದ ಏರುಪೇರುಗಳಿಂದ ಉದ್ದೇಶಿತ ಇಳುವರಿ ಪಡೆಯದೇ ಪರಿತಪಿಸುತ್ತಿದ್ದಾರೆ. ಮಹದಾಯಿ ಜಲಯೋಜನೆ ಶೀಘ್ರವೇ ಪೂರ್ಣಗೊಳ್ಳಬೇಕು’ ಎಂದು ಹೇಳಿದರು.

‘ಬಹುಸಂಖ್ಯೆಯಲ್ಲಿ ಪ್ರಕಟಗೊಳ್ಳುತ್ತಿರುವ ಅರ್ಥವಿಲ್ಲದ ಕಳಪೆ ಸಂಪಾದನಾ ಕೃತಿ ಪ್ರಕಟಣೆಗಳ ಬಗ್ಗೆ ವಿಚಾರವಂತರು ಆಕ್ಷೇಪಣೆ
ಮಾಡುತ್ತಲೇ ಬಂದಿದ್ದಾರೆ. ಕನ್ನಡಪರ ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಲು ಮುಂದಾಗಬೇಕು’ ಎಂದು ತಿಳಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ ಸೇರಿ ಕನ್ನಡ ನುಡಿಗೆ ಮೀಸಲಾಗಿರುವ ಸಂಘಟನೆಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಸಂಘಟಿಸಬೇಕು. ನಾಡು-ನುಡಿಯ ಬಗೆಗೆ ಅಭಿಮಾನ, ಹೆಮ್ಮೆ, ರಾಜ್ಯ-ರಾಷ್ಟ್ರದ ಬಗೆಗೆ ಗೌರವ ಭಾವ ಸಂವರ್ಧಿಸುವಂತೆ ಮಾಡುವ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿನ ಬರಹಗಳು, ಭಿತ್ತಿಪತ್ರಗಳು, ಸಾರ್ವಜನಿಕ ಸಂದೇಶಗಳು, ನಾಮಫಲಕಗಳಲ್ಲಿನ ಕನ್ನಡ ಬರಹ ಶುದ್ಧವಾಗಿರಬೇಕು. ಬರಹಗಳ ಪ್ರಕ್ರಿಯೆಯಲ್ಲಿ ತೊಡಗಿರುವ ಬೆರಳಚ್ಚುಗಾರರು, ಕಲಾವಿದರಿಗೆ ಬರಹ ಕಲಿಸುವ ಕಮ್ಮಟಗಳನ್ನು ಏರ್ಪಡಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ರಾಜ್ಯದ ಗಮನ ಸೆಳೆದ ತಾಣ’
‘ಪ್ರಾಚೀನ ಕಾಲದಿಂದಲೂ ಧರ್ಮ, ಸಂಸ್ಕೃತಿ, ಕಲೆಯ ತವರೂರಾದ ಗದಗ ಜಿಲ್ಲೆಯು ತನ್ನ ಚಾರಿತ್ರಿಕ ಹಾಗೂ ಸಮಕಾಲೀನ ವಿಶೇಷಗಳಿಂದ ರಾಜ್ಯದ ಗಮನ ಸೆಳೆದ ತಾಣವಾಗಿದೆ. ಕುಮಾರವ್ಯಾಸ, ಚಾಮರಸ, ನಯಸೇನ, ದುರ್ಗಸಿಂಹ ನೆಲೆಸಿದ ಭೂಮಿ ಇದಾಗಿದ್ದು ಸಾಹಿತ್ಯ, ಸಂಗೀತ, ಲಲಿತಕಲೆಗಳಿಗೆ ಹೆಸರುವಾಸಿಯಾಗಿದೆ’ ಎಂದು ಪ್ರೊ. ರವೀಂದ್ರ ಕೊಪ್ಪರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.